Agnyathavasi OTT: ಅಧಿಕೃತವಾಗಿ ಕ್ರೈಂ ಥ್ರಿಲ್ಲರ್ 'ಅಜ್ಞಾತವಾಸಿ' ಓಟಿಟಿ ರಿಲೀಸ್ ಡೇಟ್ ಘೋಷಣೆ
ಹೇಮಂತ್ ರಾವ್ ನಿರ್ಮಾಣದ ಕ್ರೈಂ ಥ್ರಿಲ್ಲರ್ 'ಅಜ್ಞಾತವಾಸಿ' ಸಿನಿಮಾ ಕಳೆದ ತಿಂಗಳು ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಕೆಲವೇ ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗಿತ್ತು. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.
ರಂಗಾಯಣ ರಘು, ಪಾವನಾ ಗೌಡ, ಸಿದ್ದು ಮೂಲಿಮನಿ, ರವಿಶಂಕರ್ ಗೌಡ ನಟನೆಯ 'ಅಜ್ಞಾತವಾಸಿ' ಚಿತ್ರಕ್ಕೆ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದರು. ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಹೆಚ್ಚು ಪ್ರಚಾರ ಮಾಡದೇ ಸಣ್ಣ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದು ಕೆಲವರ ಬೇಸರಕ್ಕೆ ಕಾರಣವಾಗಿತ್ತು.

ಮೌತ್ ಟಾಕ್‌ನಿಂದಲೇ ಜನ ಚಿತ್ರಮಂದಿರಕ್ಕೆ ಬರ್ತಾರೆ ಎಂದು ಚಿತ್ರತಂಡ ನಿರೀಕ್ಷೆ ಮಾಡಿತ್ತು. ತಕ್ಕಮಟ್ಟಿಗೆ ಚಿತ್ರಕ್ಕೆ ಬೆಂಬಲ ಸಿಕ್ಕಿತ್ತು. ಸಾಕಷ್ಟು ಜನ ಓಟಿಟಿಯಲ್ಲೇ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಇದೀಗ ಅಧಿಕೃತವಾಗಿ ಓಟಿಟಿ ರಿಲೀಸ್ ದಿನಾಂಕ ಘೋಷಣೆ ಆಗಿದೆ. ನಿರೀಕ್ಷೆ ಮಾಡಿದ್ದಕ್ಕಿಂತ 2 ವಾರ ತಡವಾಗಿ 'ಅಜ್ಞಾತವಾಸಿ' ಸ್ಮಾನ್ ಸ್ಕ್ರೀನ್‌ಗೆ ಬರ್ತಿದ್ದಾನೆ.
ಕಳೆದ ವರ್ಷ ಕ್ರೈಂ ಥ್ರಿಲ್ಲರ್ 'ಶಾಖಾಹಾರಿ' ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಆ ಚಿತ್ರದಲ್ಲಿ ರಂಗಾಯಣ ರಘು ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಒಂದರ್ಥದಲ್ಲಿ 'ಅಜ್ಞಾತವಾಸಿ' ಚಿತ್ರದ ನಾಯಕ ಕೂಡ ಅವರೇ. ಮಲೆನಾಡಿನ ನಲ್ಕೇರಿ ಊರಿನ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಗೋವಿಂದು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ನಿಗೂಢವಾಗಿ ಸಾವನ್ನಪ್ಪುವ ಊರಿನ ಜಮೀನ್ದಾರ ಶ್ರೀನಿವಾಸಯ್ಯನ ಸುತ್ತಾ ಸಿನಿಮಾ ಕಥ ಸಾಗುತ್ತದೆ. ಅದರ ಬೆನ್ನಲ್ಲೇ ಮತ್ತೊಬ್ಬ ದುರಂತವಾಗಿ ಸಾಯುತ್ತಾನೆ. ಅಷ್ಟಕ್ಕೂ ಈ ಸಾವುಗಳ ಹಿಂದೆ ಯಾರಿದ್ದಾರೆ? ಅದನ್ನು ಇನ್ಸ್‌ಪೆಕ್ಟರ್ ಗೋವಿಂದು ಪತ್ತೆ ಹಚ್ಚುವುದು ಹೇಗೆ? ಅಷ್ಟಕ್ಕೂ ಕೊಲೆಗಾರ ಯಾರು? ಎನ್ನುವ ಪ್ರಶ್ನೆಗಳಿಗೆಲ್ಲಾ ಕೊನೆಯಲ್ಲಿ ಉತ್ತರ ಸಿಗುತ್ತದೆ.
ಸಿನಿಮಾ ಬಿಡುಗಡೆಗೂ ಮುನ್ನ ಜೀ ಸಂಸ್ಥೆ ಓಟಿಟಿ ಹಾಗೂ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದ್ದಾಗಿ ಸುದ್ದಿ ಆಗಿತ್ತು. ಇದೀಗ ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ಗೆ ದಿನಗಣನೆ ಶುರುವಾಗಿದೆ. "ಆ ಎರಡು ಸತ್ಯಗಳ ರೋಚಕ ಕಥೆ ಏನು ಅಂತ ಗೊತ್ತಾಗೋಕೆ ಇನ್ನು ಕೆಲವೇ ದಿನ ಬಾಕಿ. ಇದೇ ಮೇ 28ಕ್ಕೆ ಬರ್ತಾ ಇದೆ ಸೂಪರ್ ಹಿಟ್ ಸಿನಿಮಾ ಅಜ್ಞಾತವಾಸಿ. ಮೇ 28ರಿಂದ ನಿಮ್ಮ ZEE5 ನಲ್ಲಿ ಮಿಸ್ ಮಾಡದೇ ನೋಡಿ" ಎಂದು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಈಗ ತಿಂಗಳಿಗೂ ಮುನ್ನ ಸಿನಿಮಾಗಳು ಓಟಿಟಿಗೆ ಬರ್ತಿವೆ. 'ಅಜ್ಞಾತವಾಸಿ' ಜೊತೆಗೆ ತೆರೆಗೆ ಬಂದಿದ್ದ 'ವಿದ್ಯಾಪತಿ' ಹಾಗೂ 'ವಾಮನ' ಸಿನಿಮಾಗಳು 10 ಸಿನಿಮಾಗಳ ಹಿಂದೆಯೇ ಓಟಿಟಿಗೆ ಬಂದಿದೆ. ಮೇ 16ಕ್ಕೆ 'ಅಜ್ಞಾತವಾಸಿ' ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊಂಚ ಮುಂದಕ್ಕೆ ಹೋಗಿದೆ.
ಚಿತ್ರಮಂದಿರಗಳಲ್ಲಿ 'ಅಜ್ಞಾತವಾಸಿ' ಆಟ ಈಗಾಗಲೇ ಮುಕ್ತಾಯವಾಗಿದೆ. ಆದರೂ ಓಟಿಟಿಗೆ ಬರುವುದು ತಡವಾಗುತ್ತದೆ. ಇನ್ನು ಓಟಿಟಿ ಜೊತೆಗೆ ಅದೇ ದಿನ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುವ ಸಾಧ್ಯತೆ ದಟ್ಟವಾಗಿದೆ. ಓಟಿಟಿಗೆ ಬಂದ ಬಳಿಕ ಜನ ಟಿವಿಯಲ್ಲಿ ಸಿನಿಮಾ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದಾರೆ. ಆಗಾಗಿ ಏಕಕಾಲಕ್ಕೆ ಎರಡೂ ಕಡೆ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.
ಕನ್ನಡ 'ಮ್ಯಾಕ್ಸ್' ಹಾಗೂ ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಗಳನ್ನು ಇದೇ ರೀತಿ ಟಿವಿ ಹಾಗೂ ಓಟಿಟಿಯಲ್ಲಿ ಜೀ ಸಂಸ್ಥೆ ಒಟ್ಟಿಗೆ ರಿಲೀಸ್ ಮಾಡಿತ್ತು. ಅದೇ ಲೆಕ್ಕಾಚಾರ 'ಅಜ್ಞಾತವಾಸಿ' ವಿಚಾರದಲ್ಲಿ ಕೂಡ ನಡೀತಿದೆ.


Click it and Unblock the Notifications











