ಥಿಯೇಟರ್‌ನಲ್ಲಿ ಅಲ್ಲದಿದ್ದರೂ ಓಟಿಟಿಯಲ್ಲಿ ಮನಗೆದ್ದ 'ರವಿಕೆ ಪ್ರಸಂಗ'; ಹೇಗಿದೆ ರೆಸ್ಪಾನ್ಸ್?
'ರವಿಕೆ ಪ್ರಸಂಗ' ಸಿನಿಮಾ ಥಿಯೇಟರ್‌ಗೆ ಬಂದು ಈಗಾಗಲೇ ಬಹಳ ದಿನಗಳಾಗಿದೆ. ಥಿಯೇಟರ್‌ಗೆ ಬಂದ ಮೇಲೆ ಒಂದಷ್ಟು ಸದ್ದು ಮಾಡಿದ ಈ ಸಿನಿಮಾ ಗ್ರಾಮಾಂತರ ಜನರ ಮನ ಗೆದ್ದಿದ್ದಂತೂ ಹೌದು. ಇದೀಗ ಓಟಿಟಿ ಪ್ಲಾಟ್ ಫಾರ್ಮ್ ಗೆ ಕಾಲಿಟ್ಟಿರುವ 'ರವಿಕೆ ಪ್ರಸಂಗ' ಎಲ್ಲರನ್ನೂ ರೀಚ್ ಆಗುವುದಲ್ಲದೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಓಟಿಟಿ ಪ್ಲಾಟ್ ಫಾರ್ಮ್‌ಗಳು ಬಂದಾಗಿನಿಂದ, ಸಿನಿಮಾ ಸೀರೀಸ್ ಇತ್ಯಾದಿ ಜನರನ್ನು ಬೇಗ ತಲುಪುತ್ತಿದೆ. ಇಂದು ಎಲ್ಲರ ಬಳಿಯೂ ಮೊಬೈಲ್ ಇರುವುದರಿಂದ ಮನೆಯಲ್ಲೇ ಕೂತು ಸಿನಿಮಾ ಆನಂದಿಸುವುದು ಹೆಚ್ಚು ಅನುಕೂಲಕರವಾಗಿದೆ.
ಅಷ್ಟೇ ಅಲ್ಲದೆ ಎಷ್ಟು ಬಾರಿ ಬೇಕಾದರೂ ಒಂದೇ ಸಿನಿಮಾವನ್ನು ವೀಕ್ಷಿಸುವ ಅವಕಾಶವೂ ಇದೆ. ಹಾಗಾಗಿ ಥಿಯೇಟರ್‌ನಲ್ಲಿ ಜನಪ್ರಿಯತೆ ಪಡೆದ ನಂತರವೂ 'ರವಿಕೆ ಪ್ರಸಂಗ' ಸಿನಿಮಾ ಓಟಿಟಿಯಲ್ಲೂ ಮತ್ತೆ ಜನರ ಮನ ಸೆಳೆಯುತ್ತಿದೆ. ಬಹಳಷ್ಟು ಫನ್ನಿ ಎಲಿಮೆಂಟ್‌ಗಳನ್ನು ಇಟ್ಟುಕೊಂಡಿರುವ ಈ ಚಿತ್ರ ಒಂದಷ್ಟು ಮೆಸೇಜ್‌ಗಳನ್ನು ಸಮಾಜಕ್ಕೆ ನೀಡುವ ರೀತಿಯಲ್ಲಿದೆ.

ಹಾಗಾಗಿಯೇ 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ಪ್ರಮುಖವಾಗಿ ಕಾಣಿಸಿಕೊಂಡಿರುವ 'ರವಿಕೆ ಪ್ರಸಂಗ' ಎಂಬ ಕಾಮಿಡಿ ಕಂಟೆಂಟ್ ಇರುವ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದ್ದು, ಸಿನಿಮಾ ಪ್ರಿಯರ ಮನ ಗೆದ್ದಿದೆ. ಸಿನಿಮಾದ ಟೈಟಲ್ ಹೇಳುವಂತೆ ಒಂದು ರವಿಕೆ ಸುತ್ತ ನಡೆಯುವ ಕಥೆ ಇದಾಗಿದ್ದು, ಬಹಳ ಕಾಮಿಡಿ ಅಂಶಗಳನ್ನು ಇಟ್ಟುಕೊಂಡಿದೆ.
ಕುಡ್ಲದ ಕಡೆಯ ಕನ್ನಡವನ್ನೇ ಮಾತನಾಡುವ ಈ ಸಿನಿಮಾದ ಪಾತ್ರಗಳು ಜನರನ್ನು ಶುರುವಿನಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎಪ್ರಿಲ್ 23 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಕಿರುತೆರೆ ಹಾಗೂ ಹಿರಿತೆರೆ ನಟಿ ಗೀತಾ ಭಾರತಿ ಭಟ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿದಿನ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದರಲ್ಲೂ ಅಂದ ಚಂದಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳಿಗೆ ಹೆಚ್ಚಿನ ವ್ಯಾಮೋಹ, ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಒಂದು ರವಿಕೆಯ ಸುತ್ತ ಸುತ್ತುವ ಈ ಕಥೆಯನ್ನು ನಿರ್ದೇಶಕ ಸಂತೋಷ್ ಕೊಡಂಕೇರಿ ಅವರು ನಿರ್ದೇಶಿಸಿದ್ದಾರೆ. ಅವರ ಪತ್ನಿ ಪಾವನ ಸಂತೋಷ ಅವರು ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ.

ಚಿತ್ರದಲ್ಲಿ ಗೀತಾ ಭಾರತಿ ಸೇರಿದಂತೆ ಪದ್ಮಜಾ ರಾವ್, ರಾಕೇಶ್ ಮಯ್ಯ, ಸುಮನ್ ರಂಗನಾಥ್, ರಘು ಪಾಂಡೇಶ್ವರ, ಸಂಪತ್ ಮೈತ್ರೇಯ ಮುಂತಾದ ನಟರು ನಟಿಸಿದ್ದಾರೆ. ಚಿತ್ರಕ್ಕೆ ವಿನಯ್ ಶರ್ಮ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿಧರ್ ಎನ್ ಛಾಯಾಗ್ರಹಣ ಮಾಡಿದ್ದಾರೆ. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ವತಿಯಿಂದ ಹೊರಬಂದಿರುವ ಎರಡನೇ ಸಿನಿಮಾ ಇದಾಗಿದ್ದು ಓಟಿಟಿ ಯಲ್ಲಿ ಭಾರಿ ಸದ್ದು ಮಾಡುತ್ತಿರುವುದು ಸಿನಿಮಾ ತಂಡಕ್ಕೆ ಬಹಳ ಸಂತೋಷ ತಂದಿದೆ.
ಇದರ ಪ್ರಮುಖ ನಟಿ ಗೀತಾ ಭಾರತಿಯವರು ಈ ಮೊದಲು ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಸೂಪರ್ ಕ್ವೀನ್" ರಿಯಾಲಿಟಿ ಶೋವಿನಲ್ಲೂ ಈಕೆ ಭಾಗವಹಿಸಿದ್ದಾರೆ.


Click it and Unblock the Notifications











