twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಬೇಕಿರುವುದು ಪ್ಯಾನ್ ಇಂಡಿಯಾ ಅಥವಾ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು

    |

    ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಒಂದೊಂದು ಸಲ ಪರಭಾಷಾ ಚಿತ್ರಗಳಿಂದ ಎದುರಾಗುವ ಪೈಪೋಟಿ ಭಾರವೆನಿಸುತ್ತದೆ. ಒಂದೆಡೆ ನಾವು ಕನ್ನಡ ಸಿನಿಮಾರಂಗ ಬೆಳೆಯುತ್ತಿದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ ಇನ್ನೊಂದೆಡೆ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಸರಿಯಾದ ಥಿಯೇಟರ್‌ಗಳು ಸಿಗಲ್ಲ ಎಂಬ ಬೇಸರ ವ್ಯಕ್ತವಾಗುತ್ತದೆ. ಅದರಲ್ಲೂ ಪರಭಾಷೆಯ ದೊಡ್ಡ ಚಿತ್ರಗಳು ಬಂದರೆ ಏಕಾಏಕಿ ಕನ್ನಡ ಚಿತ್ರಗಳನ್ನು ಥಿಯೇಟರ್‌ಗಳಿಂದ ಕಿತ್ತು ಬಿಸಾಕುತ್ತಾರೆ. ಥಿಯೇಟರ್‌ಗಳಿಗೆ ಸಂಬಂಧಪಟ್ಟಂತೆ ಯಾವುದೇ ಸ್ಪಷ್ಟವಾದ ನೀತಿ-ನಿಯಮಗಳು ಇಲ್ಲಿ ಇಲ್ಲ. ಇದ್ದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾದ ವಾಣಿಜ್ಯ ಮಂಡಳಿ ಉದಾಸೀನದಿಂದ ವರ್ತಿಸುತ್ತಿದೆ ಅಥವಾ ತನ್ನದೇ ಆದ ರಾಜಕೀಯ ಕಾರಣಗಳಿಂದ ಅದರೊಳಗೆ ಮುಳುಗಿದೆ.

    ಹಿಂದೆ 'ಬಾಹುಬಲಿ-1' ಬಿಡುಗಡೆಯಾದ ಸಂದರ್ಭದಲ್ಲಿ ಕೂಡ ಹೀಗೆ ಆಯಿತು. ಪಿ.ಸಿ ಶೇಖರ್ ನಿರ್ದೇಶನದಲ್ಲಿ ನಟ ಮಿತ್ರ ನಟಿಸಿ ನಿರ್ಮಿಸಿದ 'ರಾಗ' ಚಿತ್ರವನ್ನು ಏಕಾಏಕಿ ಎತ್ತಂಗಡಿ ಮಾಡಿದರು. ಅದೇ ರೀತಿ 'ಬಾಹುಬಲಿ -2' ಸಮಯದಲ್ಲೂ ಕೂಡ 'ರಂಗಿತರಂಗ'ಗೂ ಇದೇ ಪರಿಸ್ಥಿತಿ ಉಂಟಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಕನ್ನಡಿಗರು 'ರಂಗಿತರಂಗ' ಪರವಾಗಿ ನಿಂತಿದ್ದರಿಂದ ಒಂದಷ್ಟು ಮಲ್ಟಿಪ್ಲೆಕ್ಸುಗಳಲ್ಲಿ ಚಿತ್ರ ಪ್ರದರ್ಶನ ಮುಂದುವರೆದು ಹಿಟ್ ಎನಿಸಿಕೊಳ್ಳುತ್ತದೆ. ಇದರಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಅಂಶ 'ಬಾಹುಬಲಿ' ಪ್ಯಾನ್ ಇಂಡಿಯಾ ಸಿನಿಮಾ ಇನ್ನೊಂದೆಡೆ ಕನ್ನಡದ 'ರಂಗಿತರಂಗ' ಓರಿಯಂಟೆಡ್ ಸಿನಿಮಾ. ಹೀಗಾಗಿಯೇ ಪ್ಯಾನ್ ಇಂಡಿಯಾ ಸಿನಿಮಾ ನೋಡಿದ ಕನ್ನಡ ಪ್ರೇಕ್ಷಕ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ರಂಗಿತರಂಗ ಕೂಡ ನೋಡಿ ಮೆಚ್ಚಿ, ಗೆಲ್ಲಿಸಿದ್ದು.

    ಭಾಷೆ ಒಂದೇ ಆದರೂ ಅದರ ಸಾಂಸ್ಕೃತಿಕ ಪ್ರಭಾವ ಅನೇಕ

    ಭಾಷೆ ಒಂದೇ ಆದರೂ ಅದರ ಸಾಂಸ್ಕೃತಿಕ ಪ್ರಭಾವ ಅನೇಕ

    ಒಂದಡೆ ತೆಲುಗು ಭಾಷೆಯಿಂದ ಹೊರಬರುತ್ತಿರುವ ಹೆಚ್ಚಿನ ಪ್ಯಾನ್ ಇಂಡಿಯಾ ಸಿನಿಮಾಗಳು, ಇನ್ನೊಂದೆಡೆ ಮಲಯಾಳಂ ಚಿತ್ರರಂಗದಿಂದ ಹೊರ ಬರುತ್ತಿರುವ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಸದ್ಯಕ್ಕೆ ಭಾರತೀಯ ಸಿನಿಮಾ ರಂಗವನ್ನು ಆವರಿಸಿಕೊಳ್ಳುತ್ತಿವೆ. ಇದೇ ಸಮಯದಲ್ಲಿ ಕನ್ನಡ ಸಿನಿಮಾರಂಗ ನಾವು ಅವಲೋಕಿಸುವಾಗ ಕರ್ನಾಟಕದೊಳಗಿನ ಅನೇಕ ತರದ ಸಾಂಸ್ಕೃತಿಕ ಲಕ್ಷಣಗಳನ್ನು ಇದರಲ್ಲಿ ನೋಡಬೇಕಾಗುತ್ತದೆ ಮತ್ತು ಸಾಂಸ್ಕೃತಿಕ ಲಕ್ಷಣಗಳೊಂದಿಗೆ ಮಾಡುತ್ತಿರುವ ಸಿನಿಮಾಗಳನ್ನು ಕೂಡ ಒಮ್ಮೆ ಪರಾಮರ್ಶಿಸಬೇಕಾಗುತ್ತದೆ.


    ಏಕೀಕರಣ ಕರ್ನಾಟಕದಲ್ಲಿ ಹಲವು ತರದ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಗಳಿವೆ. ಜಿಲ್ಲೆಯಿಂದ ಜಿಲ್ಲೆಗೆ ಸಂಸ್ಕೃತಿಗಳು ವಿಭಿನ್ನವಾಗಿದೆ. ಅಲ್ಲದೆ ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಇಡೀ ಸಾಂಸ್ಕೃತಿಕ ಪ್ರಪಂಚ ಹೊಸದಾಗಿ ಕಾಣುತ್ತದೆ.

    ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ಪ್ರಪಂಚ ಹೆಚ್ಚುಕಡಿಮೆ ಒಂದೇ ಆಗಿದ್ದು ಭಾಷೆಯ ಕೂಡ ಹತ್ತಿರದಲ್ಲಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಅಂದರೆ ಒಟ್ಟಾರೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ಸೊಗಡು ಬೇರೆಯದೇ ಕಾಣುತ್ತದೆ. ಇನ್ನು ಹಳೆ ಮೈಸೂರು, ಬಯಲುಸೀಮೆ, ಮಧ್ಯ ಕರ್ನಾಟಕದ ಸಾಂಸ್ಕೃತಿಕ ಪ್ರಪಂಚ ಮತ್ತು ಭಾಷೆ ಕೂಡ ಒಂದೇ ರೀತಿಯಲ್ಲಿ ನಮಗೆ ಹೆಚ್ಚುಕಮ್ಮಿ ಬೇರೆಬೇರೆಯಾಗಿಯೇ ದರ್ಶನವಾಗುತ್ತದೆ. ಆದರೆ ಇದೆಲ್ಲವೂ ಸೇರಿ ಒಟ್ಟಾರೆ ಕನ್ನಡವಾಗಿದೆ ಹೀಗಾಗಿ ಎಲ್ಲಾ ಪ್ರಾಂತ್ಯ ಮತ್ತು ವೈವಿಧ್ಯಗಳು ಸೇರಿ ಕನ್ನಡ ಸಿನಿಮಾರಂಗವಾಗಿ ನಾವು ನೋಡಬೇಕಾಗುತ್ತದೆ.

    ಕನ್ನಡ ಭಾಷೆಯಿಂದಾಗಿ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯದ ಜನ ಕನೆಕ್ಟ್ ಆಗುತ್ತಾರೆ, ಆದರೆ ಚಿತ್ರಗಳಲ್ಲಿನ ಒಂದು ಪ್ರಾಂತ್ಯದ ದಟ್ಟವಾದ ಸಾಂಸ್ಕೃತಿಕ ಪ್ರಭಾವಳಿ ಹೆಚ್ಚಿಗೆ ಕಂಡುಬರುವ ಸಂದರ್ಭದಲ್ಲಿ, ಅದು ಇತರ ಸಾಂಸ್ಕೃತಿಕ ಪ್ರಾಂತ್ಯದ ಜನರ ಜೊತೆಯಲ್ಲಿ ಕನೆಕ್ಟ್ ಆಗುವುದರಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಅನೇಕ ಸಲ ಒಳ್ಳೆಯ ಚಿತ್ರಗಳು ಸಾಂಸ್ಕೃತಿಕವಾದ ಪರಿಮಿತಿಯ ಒಳಗಡೆ ಬೆಂದು ಬಾಕ್ಸ್ ಫೀಸ್ ನಲ್ಲಿ ಸೋಲು ಕಂಡಿದೆ.

    ಕಥಾವಸ್ತುವಿನಿಂದ ಗೆಲ್ಲುವ ಕರಾವಳಿ ಚಿತ್ರಗಳು

    ಕಥಾವಸ್ತುವಿನಿಂದ ಗೆಲ್ಲುವ ಕರಾವಳಿ ಚಿತ್ರಗಳು

    ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ನಿರ್ದೇಶಕರ ಅಲೆಯೊಂದು ಮೊದಲಾಗಿದೆ. ಇದರಲ್ಲಿ ವಿಶೇಷವಾಗಿ ಮುಂಚೂಣಿಯಲ್ಲಿ ಕಂಡು ಬರುವರು ಕರಾವಳಿ ನಿರ್ದೇಶಕರುಗಳು. ಬಹುತೇಕ ಕರಾವಳಿ ನಿರ್ದೇಶಕರ ಚಿತ್ರಗಳನ್ನು ನಾವು ಗಮನಿಸಿದಾಗ ಇದೆಲ್ಲವೂ ಕೂಡ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳಾಗಿವೆ.

    ರಾಜ್ ಬಿ ಶೆಟ್ಟಿ ನಿರ್ದೇಶನದ 'ಗರುಡ ಗಮನ ವೃಷಭ ವಾಹನ", ಅವರ ಹಿಂದಿನ ಚಿತ್ರಗಳಲ್ಲಿ ಒಂದಾದ 'ಒಂದು ಮೊಟ್ಟೆ ಕಥೆ', ರಿಷಬ್ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ', 'ಕಿರಿಕ್ ಪಾರ್ಟಿ', ರಕ್ಷಿತ್ ಶೆಟ್ಟಿ ಅವರ 'ಉಳಿದವರು ಕಂಡಂತೆ' ಅನುಪ್ ಭಂಡಾರಿ ಅವರ 'ರಂಗಿತರಂಗ', ಹೀಗೆ ಅನೇಕ ಚಿತ್ರಗಳು ಕನ್ನಡ ಸಿನಿಮಾ ರಂಗಕ್ಕೆ ಹೊಸ ಆಯಾಮವನ್ನು ಕೊಟ್ಟಿದೆ, ಕಮರ್ಷಿಯಲ್ಲಾಗಿ ಕೂಡ ಚಿತ್ರಗಳು ಯಶಸ್ಸು ಕಂಡಿವೆ. ಗಾಂಧಿನಗರದ ಸಿದ್ಧಸೂತ್ರ ಗಳಿಂದ ದೂರವಾಗಿ ಕಥಾವಸ್ತುವಿನ ಮೇಲೆ ಹೆಚ್ಚಿನ ಕೇಂದ್ರೀಕೃತ ಮಾಡುವ ಕರಾವಳಿ ಪ್ರತಿಭೆಗಳು ಪ್ರಯತ್ನಗಳು ಮತ್ತು ಪ್ರಯೋಗಗಳು ಆಶಾದಾಯಕವಾಗಿದೆ.

    ಕರಾವಳಿ, ಮಲೆನಾಡಿನ ಜೊತೆಗೆ ಬೆಂಗಳೂರಿನಂಥ ಕಾಸ್ಮೋಪಾಲಿಟನ್ ನಗರಗಳಲ್ಲಿ ಕೂಡ ಇವರ ಚಿತ್ರಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿಶೇಷವಾಗಿ ಮಲ್ಟಿಪ್ಲೆಕ್ಸ್ ಆಡಿಯನ್ಸ್ ಗಳಲ್ಲಿ ಮತ್ತು ವಿದೇಶಗಳಲ್ಲಿ ಕೂಡ ಇವರುಗಳ ಚಿತ್ರಗಳಿಗೆ ಬೇಡಿಕೆ ಇದೆ. ಒಂದು ಚಿತ್ರ ತಯಾರಿಸುವುದು ಅಷ್ಟೇ ಅಲ್ಲ ಅದನ್ನು ಮಾರ್ಕೆಟಿಂಗ್ ಮಾಡುವ ಕಲೆ ಕರಾವಳಿ ಪ್ರತಿಭೆಗಳು ಕರಗತಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ತೆಗೆಯುವುದರಲ್ಲಿ ಪ್ರಸ್ತುತ ಕರಾವಳಿ ನಿರ್ದೇಶಕರು ಮೇಲುಗೈ ಸಾಧಿಸಿದ್ದಾರೆ.

    ಉತ್ತರ ಕರ್ನಾಟಕ ಚಿತ್ರಗಳು ಕಾಣುತ್ತಿಲ್ಲ ಯಶಸ್ಸು

    ಉತ್ತರ ಕರ್ನಾಟಕ ಚಿತ್ರಗಳು ಕಾಣುತ್ತಿಲ್ಲ ಯಶಸ್ಸು

    ಒಂದೆರಡು ದಶಕಗಳ ಹಿಂದಕ್ಕೆ ಸರಿದರೆ 'ನಾಗಮಂಡಲ' 'ಸಂಗ್ಯಾಬಾಳ್ಯ' 'ಸಂತ ಶಿಶುನಾಳ ಶರೀಫ'ಇಂಥ ಒಂದಷ್ಟು ಉತ್ತರ ಕರ್ನಾಟಕ ಭಾಷೆ ಮತ್ತು ಮಂದಿಯ ಜೀವ ವಿಧಾನದ ಮೇಲೆ ಚಿತ್ರಗಳು ಬಂದು ಯಶಸ್ಸು ಕಂಡಿತು. ನಂತರ ಉತ್ತರ ಕರ್ನಾಟಕದ ಭಾಷೆ ಸಂಸ್ಕೃತಿ -ಸೊಗಡಿನ ಚಿತ್ರಗಳು ಬರುವುದೇ ಬಹುತೇಕ ನಿಂತುಹೋಯಿತು. ಇತ್ತೀಚಿನ ದಿನಗಳಲ್ಲಿ 'ಉಗ್ರಂ' 'ಭಜರಂಗಿ' ಇಂತಹ ಒಂದಷ್ಟು ಚಿತ್ರಗಳು ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿವೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಇಂತಹ ಮಾಸ್ ಎಂಟರ್ಟೈನ್ಮೆಂಟ್ ಚಿತ್ರಗಳ ನಿರ್ದೇಶಕರು, ನಟ ನಟಿಯರು ಬಹುತೇಕ ತಾಂತ್ರಿಕವರ್ಗದಲ್ಲಿ ಇರುವವರೆಲ್ಲ ಬೆಂಗಳೂರಿನವರೇ.

    ಕರಾವಳಿಯಂತೆ ಉತ್ತರ ಕರ್ನಾಟಕದ ಪ್ರತಿಭೆಗಳಿಂದ ತಯಾರಿಸಿದ ಚಿತ್ರಗಳು ಎಷ್ಟಿವೆ? ಬಾಕ್ಸಾಫೀಸ್ ನಲ್ಲಿ ಅದರ ಯಶಸ್ಸು ಎಷ್ಟಿದೆ? ಎರಡಕ್ಕೂ ಆಶಾದಾಯಕವಾದ ಉತ್ತರ ಮಾತ್ರ ಇಲ್ಲ. ಉತ್ತರ ಕರ್ನಾಟಕದ ನಿರ್ದೇಶಕರುಗಳು ಸಿನಿಮಾದ ವ್ಯಾಪ್ತಿಯನ್ನು ವಿಸ್ತರಿಸುವುದರಲ್ಲಿ ವಿಫಲರಾಗಿದ್ದಾರೆ. ಬಹುತೇಕ ಉತ್ತರ ಕರ್ನಾಟಕದ ಚಿತ್ರಗಳಲ್ಲಿ ಕಥೆ ಅಷ್ಟೊಂದು ಹೆಚ್ಚಿಗೆ ಕಾಣುವುದಿಲ್ಲ. ಮೇಕಿಂಗ್ ವಿಚಾರದಲ್ಲೂ ಇನ್ನೂ ಹಿಂದುಳಿದಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಏನೂ ಕೊರತೆಯಿಲ್ಲ ಆದರೆ ಆ ಪ್ರತಿಭೆಗಳೊಂದಿಗೆ ಸರಿಯಾಗಿ ಭಾಷೆ ಮತ್ತು ಸೊಗಡಿನ ಸಾಂಸ್ಕೃತಿಕ ಪರಂಪರೆಯ ಜೊತೆಗೆ ಎಲ್ಲ ಕನ್ನಡಿಗರನ್ನು ಮನಗೆಲ್ಲುವ ಪ್ರಯತ್ನಗಳು ಉತ್ತರ ಕರ್ನಾಟಕದ ನಿರ್ದೇಶಕರಿಂದ ಆಗಬೇಕಿದೆ. ಹಾಗೆ ನೋಡಿದರೆ ಉತ್ತರ ಕರ್ನಾಟಕದ ಕಥೆಗಾರರು ಮತ್ತು ನಿರ್ದೇಶಕರ ಸಂಖ್ಯೆ ಇತರ ಪ್ರಾಂತ್ಯಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾರಂಗದಲ್ಲಿ ತುಂಬಾ ಕಮ್ಮಿನೇ ಇದೆ.

    ಹಳೆಮೈಸೂರು ಎಂದರೆ ಮಂಡ್ಯ ಚಿತ್ರಗಳು

    ಹಳೆಮೈಸೂರು ಎಂದರೆ ಮಂಡ್ಯ ಚಿತ್ರಗಳು

    ಹಳೆ ಮೈಸೂರು ಪ್ರಾಂತ್ಯದ ಚಿತ್ರಗಳು ಅಂದರೆ, ಜೊತೆಗೆ ರೈತರಿಗೆ ಸಂಬಂಧಿಸಿದ ಚಿತ್ರಗಳು ಅಂದ್ರೆ ಅದು ಬಹುತೇಕ ಮಂಡ್ಯದ ಪರಿಸರದ ಜೊತೆಗೆ ಸೇರಿಕೊಳ್ಳುತ್ತದೆ. ಬಹುಶಃ ಮಂಡ್ಯದ ಸಾಂಸ್ಕೃತಿಕ ಪರಿಸರ ಕೂಡ ಇದಕ್ಕೆ ಜೊತೆಯಾಗಿ ಇರಬಹುದು ಏಕೆಂದರೆ ಕನ್ನಡ ಸಿನಿಮಾರಂಗಕ್ಕೆ ಅತಿ ಹೆಚ್ಚು ಕಥೆಗಾರರು ಅಥವಾ ನಿರ್ದೇಶಕರ ಆಗಮನ ಇಲ್ಲಿಂದಲೇ ಆಗುತ್ತಿರುವುದು.

    ಪ್ರೇಮ್, ಮಹೇಶ್ ಸುಖಧರೆ, ಚಂದ್ರಶೇಖರ್ ಬಂಡಿಯಪ್ಪ, ಮದಗಜ ಮಹೇಶ್ ಕುಮಾರ್, ರತ್ನಜ, ಮಳವಳ್ಳಿ ಸಾಯಿಕೃಷ್ಣ, ಎ.ಪಿ ಅರ್ಜುನ್, ಹಿರೇಗೌಡ ಹೀಗೆ ಅನೇಕ ಪ್ರತಿಭಾವಂತರು ಮಂಡ್ಯ ಪ್ರಾಂತ್ಯದಿಂದಲೇ ಬಂದವರಾಗಿದ್ದಾರೆ. ಜೊತೆಗೆ ಹಿರಿಯ ನಟ ಅಂಬರೀಶ್ ಅವರ ಕಾರಣದಿಂದ ಮಂಡ್ಯ ಸಿನಿಮಾರಂಗದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿತ್ತು ಆನಂತರದಲ್ಲಿ ದರ್ಶನ್,ಯಶ್, ನೀನಾಸಂ ಸತೀಶ್ ಇಂತಹ ಅನೇಕ ಪ್ರತಿಭೆಗಳು ಮಂಡ್ಯದ ಸಾಂಸ್ಕೃತಿಕ ಪರಿಸರದ ಪ್ರಭಾವಿತ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದರು. ಹೀಗಾಗಿಯೇ ಕಮರ್ಷಿಯಲ್ಲಾಗಿ ಕೂಡ ಮಂಡ್ಯ ಸಾಂಸ್ಕೃತಿಕ ಪರಿಸರದ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ. 'ತಿಥಿ' ಅಂತಹ ಪ್ರಯೋಗಾತ್ಮಕ ಚಿತ್ರ ಕೂಡ ಮಂಡ್ಯದ ಪರಿಸರ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ.

    ಬೆಂಗಳೂರ್ ಸಿನಿಮಾಗಳು

    ಬೆಂಗಳೂರ್ ಸಿನಿಮಾಗಳು

    ವಾಸ್ತವದಲ್ಲಿ ಬೆಂಗಳೂರ್ ಸಿನಿಮಾಗಳು ಅಂತ ಯಾವುದೇ ಕ್ಯಾಟಗರಿ ಇಲ್ಲ. ಆದರೆ ಮಲ್ಟಿಪ್ಲೆಕ್ಸ್ ಚಿತ್ರಗಳು ಬಹುತೇಕ ಬೆಂಗಳೂರಿನ ಕಾಸ್ಮೋಪಾಲಿಟನ್ ಕಲ್ಚರ್ ಮೇಲೆ ಕೇಂದ್ರೀಕೃತವಾಗಿದೆ. ಹೀಗಾಗಿ ಈ ಚಿತ್ರಗಳ ಮೇಲೆ ಕರ್ನಾಟಕದ ಯಾವುದೇ ಒಂದು ಪ್ರಾಂತದ ಸಾಂಸ್ಕೃತಿಕತೆಯ ದಟ್ಟವಾದ ಪ್ರಭಾವ ಕಾಣಸಿಗುವುದಿಲ್ಲ. ಬಹುತೇಕ ಇಂತಹ ಚಿತ್ರಗಳನ್ನು 'ಇಂಡಿ ಸಿನಿಮಾ' ಅಂತ ಕರೆಯುತ್ತಾರೆ. ಇಲ್ಲಿ ನಾಯಕ ಅಥವಾ ನಾಯಕನ ವೈಭವಿಕರಣ ಇರುವುದಿಲ್ಲ ಬದಲಾಗಿ ಕಂಟೆಂಟ್ ಸರಳವಾಗಿರುತ್ತದೆ ಮತ್ತು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ಹಾಡುಗಳು ಬಡಿದಾಟಗಳು, ಅನಗತ್ಯವಾದ ಡಬಲ್ ಮೀನಿಂಗ್ ಡೈಲಾಗ್‌ಗಳು ಇದ್ಯಾವುದು ಇಲ್ಲಿ ಹೆಚ್ಚಿಗೆ ಬಳಕೆಯಾಗುವುದಿಲ್ಲ. ಕಡಿಮೆ ಬಂಡವಾಳದಲ್ಲಿ ಮಾಡಿ ಮುಗಿಸಬಹುದಾದ ಚಿತ್ರಗಳನ್ನು 'ಇಂಡಿ ಸಿನಿಮಾ' ಅಂತಾರೆ.

    ಇಂತಹ ಚಿತ್ರಗಳ ಸಾಧ್ಯತೆಗಳು ಕನ್ನಡದಲ್ಲಿ ಮೊದಲು ಮಾಡಿದ್ದು ಪವನ್ ಕುಮಾರ್. 'ಲೂಸಿಯಾ' 'U-TURN' ಇಂಡಿಪೆಂಡೆಂಟ್ ಸಿನಿಮಾಗಳನ್ನು ಉತ್ತೇಜಿಸುವುದರಲ್ಲಿ ಯಶಸ್ವಿಯಾಯಿತು. ಸಿಂಪಲ್ ಸುನಿ ನಿರ್ದೇಶಿಸಿದ 'ಸಿಂಪಲ್ಲಾಗೊಂದು ಲವ್ ಸ್ಟೋರಿ', ರೋಹಿತ್ ಪದಕಿಯ 'ದಯವಿಟ್ಟು ಗಮನಿಸಿ' ಕಾಂತ ಕನ್ನಳ್ಳಿಯ 'ಇರುವುದೆಲ್ಲಾ ಬಿಟ್ಟು' ಇತ್ತೀಚಿನ 'ದಿಯಾ','ಲವ್ ಮಾಕ್ಟೈಲ್', ರಮೇಶ್ ಅರವಿಂದ್ ಅಭಿನಯಿಸಿ ನಿರ್ದೇಶಿಸಿದ '100'ಇದೆಲ್ಲವೂ ಕೂಡ ಮಲ್ಟಿಪ್ಲೆಕ್ಸ್ ಕಲ್ಚರ್ ಮತ್ತು ಪ್ರವೃತ್ತಿಗೆ ಹತ್ತಿರವಾಗಿರುವ ಚಿತ್ರಗಳು. ಇಂತಹ ಚಿತ್ರಗಳಿಗೆ OTT ಫ್ಲಾಟ್ ಫಾರ್ಮಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸಹ ಇದೆ.

    ಬದಲಾಗುತ್ತಿರುವ ಸಿನಿಮಾರಂಗ ಮತ್ತು ಕನ್ನಡ

    ಬದಲಾಗುತ್ತಿರುವ ಸಿನಿಮಾರಂಗ ಮತ್ತು ಕನ್ನಡ

    ಈಗ ಸಿನಿಮಾದ ಪರಿಭಾಷೆ ಕೂಡ ಬದಲಾಗುತ್ತಿದೆ. ಈಗ ಎರಡು ಬಗೆಯ ಚಿತ್ರಗಳು ಮಾತ್ರ ನಾವು ನೋಡಲು ಸಾಧ್ಯ ಒಂದು ಬಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು. ಎರಡು ಕಡಿಮೆ ಬಜೆಟ್ಟಿನ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು. ಇವುಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬೇಕಿದೆ.ಇದನ್ನು ಹೊರತಾಗಿ ಸಿನಿಮಾ ಮಾಡಿದರೆ ಖಂಡಿತವಾಗಿಯೂ ಕೂಡ ಚಿತ್ರಮಂದಿರಗಳಲ್ಲಿ ನಿಲ್ಲುವುದಿಲ್ಲ.

    ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಮಲ್ಟಿಪ್ಲೆಕ್ಸ್ ಅಥವಾ OTTಗಳಲ್ಲಿ ಅವಕಾಶವನ್ನು ಪಡೆಯುತ್ತದೆ. ಇನ್ನು 'ಕೆಜಿಎಫ್' ಮಾದರಿಯ ಬಾರಿ ಬಜೆಟಿನ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ದೊಡ್ಡ ಮಟ್ಟದ ಯಶಸ್ಸು ಕಾಣುತ್ತವೆ. ಆದರೆ ಇವೆರಡನ್ನು ಬಿಟ್ಟು ಬಿಟ್ಟು ಮಧ್ಯ ಮಾರ್ಗದ ಮಸಾಲಾ ಚಿತ್ರಗಳು, ಲಾಂಗ್ ಮಚ್ಚುಗಳ ಮಾಸ್ ಚಿತ್ರಗಳು, ಮೆಲೊಡ್ರಾಮಗಳು ಜನರು ಹೆಚ್ಚಿಗೆ ಸ್ವೀಕರಿಸುವುದಿಲ್ಲ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಮತ್ತು ಸಿನಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಈಗ ಸಿನಿಮಾಗಳನ್ನು ಮಾಡಬೇಕಾಗಿದೆ . ಒಂದು, ಭಾರಿ ಬಜೆಟ್ ನಲ್ಲಿ ಯಶ್, ದರ್ಶನ್, ಸುದೀಪ್ ಅಂತಹ ನಾಯಕ ನಟರುಗಳ ಪ್ಯಾನ್ ಇಂಡಿಯಾ ಸಿನಿಮಾಗಳು ಮಾಡಬೇಕಾಗುತ್ತದೆ. ಇಲ್ಲ.ಕಡಿಮೆ ಬಂಡವಾಳದಲ್ಲಿ ಕರಾವಳಿ ಮಂದಿ ಮಾಡುತ್ತಿರುವ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಮಾಡಬೇಕಾಗುತ್ತದೆ.ಇವರನ್ನು ಹೊರತುಪಡಿಸಿ ಬೇರೆ ಏನಾದರೂ ಮಾಡಲು ಹೋದರೆ ಈಗಿನ ಸಂದರ್ಭದಲ್ಲಿ ಕೈ ಸುಟ್ಟುಕೊಳ್ಳುವುದು ಮಾತ್ರ ಖಾತರಿ. ಆಯ್ಕೆ ಕನ್ನಡ ಸಿನಿಮಾ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಸೇರಿದ್ದು.

    English summary
    Kannada needs Pan India or content oriented cinemas.There is a huge market for pan India cinemas, There is an affordable demand at Ott for content oriented cinema.
    Tuesday, December 7, 2021, 16:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X