ShakhaHaari, Blink OTT; ಕಾತರದಿಂದ ಕಾಯುತ್ತಿರುವ 'ಬ್ಲಿಂಕ್', 'ಶಾಖಾಹಾರಿ' ಓಟಿಟಿ ಸ್ಟ್ರೀಮಿಂಗ್ ಎಲ್ಲಿ? ಯಾವಾಗ?
ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಯಾವುದೇ ದೊಡ್ಡ ಸಿನಿಮಾಗಳು ತೆರೆಗೆ ಬರಲಿಲ್ಲ. ಇದ್ದಿದ್ದರಲ್ಲಿ ಕೆಲ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಅದರಲ್ಲಿ 'ಬ್ಲಿಂಕ್' ಹಾಗೂ 'ಶಾಖಾಹಾರಿ' ಸಿನಿಮಾಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಉತ್ತಮ ಪ್ರತಿಕ್ರಿಯೆ ಸಿಕ್ಕರೂ ನಿರೀಕ್ಷಿತ ಮಟ್ಟದಲ್ಲಿ ಈ 2 ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.
ಸಾಕಷ್ಟು ಜನ 'ಬ್ಲಿಂಕ್' ಹಾಗೂ 'ಶಾಖಾಹಾರಿ' ಚಿತ್ರಗಳ ಬಗ್ಗೆ ಕೇಳಿ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಟೈಮ್ ಟ್ರಾವಲರ್ ಕಾನ್ಸೆಪ್ಟ್ ಇರುವ 'ಬ್ಲಿಂಕ್' ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ, ವಜ್ರಧೀರ್ ಜೈನ್, ಸುರೇಶ ಅನಗಳ್ಳಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಟ್ರೈಲರ್‌ನಿಂದಲೇ ಈ ಸಿನಿಮಾ ಗಮನ ಸೆಳೆದಿತ್ತು.'

ನಾಯಕ ಟೈಮ್ ಟ್ರಾವೆಲಿಂಗ್‌ನಲ್ಲಿ ಸಿಲುಕಿ ತನ್ನ ಭೂತ, ವರ್ತಮಾನ ಹಾಗೂ ಭವಿಷ್ಯಕ್ಕೆ ಹೋಗಿ ಬರುವ ಕಥೆ ಚಿತ್ರದಲ್ಲಿದೆ. ತನ್ನ ಹಿನ್ನೆಲೆ ತಿಳಿದುಕೊಂಡು ತನ್ನ ಜೀವನದ ಘಟನೆಗಳನ್ನು ಸರಿಪಡಿಸಲು ಮುಂದಾದಾಗ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಇನ್ನುಳಿದ ಕಥೆ. ಸಾಕಷ್ಟು ರಂಗಭೂಮಿ ಪ್ರತಿಭೆಗಳು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
'ಬ್ಲಿಂಕ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರಲಿಲ್ಲ. ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್‌ಗಳಿರುವ ಚಿತ್ರ ಸಸ್ಪೆನ್ಸ್ ಕಾರಣಕ್ಕೂ ಇಷ್ಟವಾಗುತ್ತದೆ. ಇನ್ನು ಓಟಿಟಿಯಲ್ಲಿ ಇಂತಹ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅಮೇಜಾನ್ ಪ್ರೈಂ ಚಿತ್ರದ ಓಟಿಟಿ ಹಕ್ಕುಗಳನ್ನು ಕೊಂಡುಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
'ಶಾಖಾಹಾರಿ' ಸಿನಿಮಾ ಫಲಿತಾಂಶ ಕೂಡ 'ಬ್ಲಿಂಕ್' ಚಿತ್ರಕ್ಕಿಂತ ಭಿನ್ನವಾಗಿಲ್ಲ. ಸಂದೀಪ್ ಸುಂಕದ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ಸಿನಿಮಾ ಫೆಬ್ರವರಿ 16ಕ್ಕೆ ತೆರೆಕಂಡಿತ್ತು. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಅನುಭವಿ ನಟ ರಂಗಾಯಣ ರಘು ಈ ಚಿತ್ರದ ನಾಯಕ.

ಮಲೆನಾಡಿನ ಭಾಗದಲ್ಲಿ ನಡೆಯುವ ಒಂದು ಕ್ರೈಂ ಥ್ರಿಲ್ಲರ್ ಕಥೆ 'ಶಾಖಾಹಾರಿ' ಚಿತ್ರದಲ್ಲಿದೆ. ಆಕಸ್ಮಿಕ ಘಟನೆಗಳಿಂದ ಮುಗ್ಧನೊಬ್ಬ ಅಪರಾಧಿಯಾಗುವ ಕಥಾಹಂದರ ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಅದೇ ಎಳೆ ಇಟ್ಟುಕೊಂಡು ಒಂದು ವಿಭಿನ್ನ ಪ್ರಯತ್ನ ಮಾಡಿ ಚಿತ್ರತಂಡ ಗೆದ್ದಿತ್ತು. ರಂಗಾಯಣ ರಘು ಮಾಗಿದ ಅಭಿನಯ ಅದಕ್ಕೆ ಸಾಥ್ ನೀಡಿತ್ತು. 'ಶಾಖಾಹಾರಿ' ಚಿತ್ರವನ್ನು ನೋಡಿದವರು ಮೆಚ್ಚಿಕೊಂಡರು. ಆದರೆ ಚಿತ್ರಕ್ಕೆ ಪ್ರೇಕ್ಷಕರ ಬರ ಎದುರಾಗಿತ್ತು.
ಪುಟ್ಟಗ್ರಾಮದಲ್ಲಿ ಸಸ್ಯಹಾರಿ ಹೋಟೆಲ್ ನಡೆಸುತ್ತಿರುವ ಸುಬ್ಬಣ್ಣ (ರಂಗಾಯಣ ರಘು) ಮಚ್ಚು ಹಿಡಿಯಲು ಕಾರಣವೇನು? ಆ ಹೋಟೆಲ್‌ಗೆ ಬರುವ ಆಗಂತುಕನಿಂದ ಕಥೆಗೆ ಹೇಗೆ ತಿರುವು ಸಿಗುತ್ತದೆ? ಮುಂದೇನಾಗುತ್ತದೆ ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. 'ಶಾಖಾಹಾರಿ' ಡಿಜಿಟಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಇನ್ನೊಂದು ವಾರದಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ.
ಇತ್ತೀಚೆಗೆ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿವೆ. ಅಮೇಜಾನ್ ಪ್ರೈಂ ಮಾತ್ರ ಕೆಲ ಸಿನಿಮಾಗಳನ್ನು ಪೇ-ಪರ್-ವೀವ್ ಲೆಕ್ಕದಲ್ಲಿ ಖರೀದಿಸುತ್ತಿದೆ. 'ಬ್ಲಿಂಕ್' ಹಾಗೂ 'ಶಾಖಾಹಾರಿ' ಸಿನಿಮಾ ವಿಚಾರದಲ್ಲಿ ಕೂಡ ಇದೇ ನಿಯಮ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ವೀಕ್ಷಕರು ಎಷ್ಟು ನಿಮಿಷಗಳ ಕಾಲ ಸಿನಿಮಾ ನೋಡುತ್ತಾರೆ ಎನ್ನುವುದರ ಮೇಲೆ ನಿರ್ಮಾಪಕರಿಗೆ ಹಣ ಸಿಗುತ್ತದೆ.


Click it and Unblock the Notifications










