ದಿಢೀರ್ ಓಟಿಟಿಗೆ ಬಂತು ರಂಗಾಯಣ ರಘು 'ಶಾಖಾಹಾರಿ' ಹಾಗೂ ಅಜಯ್ ದೇವಗನ್ 'ಮೈದಾನ್'.. ಆದ್ರೆ..
ಕನ್ನಡ ಸಿನಿಮಾಗಳು ಓಟಿಟಿಗೆ ಬರೋದೇ ಅಪರೂಪವಾಗಿಬಿಟ್ಟಿದೆ. ಗುಣಮಟ್ಟದ ಸಿನಿಮಾಗಳು ಬರ್ತಿಲ್ಲ ಎನ್ನುವ ಆರೋಪದ ನಡುವೆ ಓಟಿಟಿ ಸಂಸ್ಥೆಗಳು ಕನ್ನಡ ಸಿನಿಮಾಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿವೆ. ಇನ್ನು ಯಾವುದೇ ಘೋಷಣೆ ಇಲ್ಲದೇ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿರುವುದು ಕೂಡ ಬೇಸರದ ಸಂಗತಿ.
ಈ ವರ್ಷ ಕನ್ನಡದಲ್ಲಿ ಬೆರಳೆಣಿಯಷ್ಟು ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳು ಸದ್ದು ಮಾಡಲಿಲ್ಲ. ರಂಗಾಯಣ ರಘು ನಟನೆಯ 'ಶಾಖಾಹಾರಿ' ಸಿನಿಮಾ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎಂದು ಕೆಲವರು ಕಾದು ಕೂತಿದ್ದರು.

ಅತ್ತ ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಹಾಗೂ ಪ್ರಿಯಾಮಣಿ ನಟನಯ 'ಮೈದಾನ್' ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಏಪ್ರಿಲ್ 10ಕ್ಕೆ ಸಿನಿಮಾ ತೆರೆಗಪ್ಪಳಿಸಿತ್ತು. ನೈಜ ಘಟನೆಗಳನ್ನು ಆಧರಿಸಿ ಈ ಸ್ಪೋರ್ಟ್ಸ್ ಡ್ರಾಮಾ ತೆರೆಗೆ ತರಲಾಗಿತ್ತು. ಚಿತ್ರದಲ್ಲಿ ಭಾರತ ಫುಟ್ಬಾಲ್ ತಂಡದ ಕೋಚ್ ಸಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದರು.
ಕನ್ನಡದ 'ಶಾಖಾಹಾರಿ' ಹಾಗೂ ಹಿಂದಿಯ 'ಮೈದಾನ್' ಸಿನಿಮಾಗಳು ಸದ್ದಿಲ್ಲದೇ ಓಟಿಟಿಗೆ ಬಂದಿವೆ. ಎರಡೂ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ ಎಲ್ಲರಿಗೂ ಸುಲಭವಾಗಿ ಸಿನಿಮಾಗಳು ಸಿಗುತ್ತಿಲ್ಲ. 'ಮೈದಾನ್' ಸಿನಿಮಾ ವೀಕ್ಷಿಸಲು ಚಂದಾದಾರರು 349ರ ರೂ. ಪಾವತಿಸಬೇಕಿದೆ. ಒಂದು ವಾರದ ಬಳಿಕ ಚಂದಾದಾರಿಗೆ ಉಚಿತವಾಗಿ ಸಿನಿಮಾ ಸಿಗುವ ಸಾಧ್ಯತೆಯಿದೆ.

ರಂಗಾಯಣ ರಘು ನಟನೆಯ 'ಶಾಖಾಹಾರಿ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿದ್ದರೂ ಸದ್ಯಕ್ಕೆ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ. ಈಗ ಯುಕೆ ಹಾಗೂ ಯೂಎಸ್‌ನಲ್ಲಿರುವ ಪ್ರೈಂ ಚಂದಾದಾರರು ಮಾತ್ರ ಹಣ ನೀಡಿ ಸಿನಿಮಾ ನೋಡಲು ಅವಕಾಶವಿದೆ. ಮುಂದಿನ ವಾರ ಈ ಸಿನಿಮಾ ಕೂಡ ಭಾರತದಲ್ಲಿ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ.
ಮಲೆನಾಡಿನ ಸಣ್ಣ ಖಾನಾವಳಿಯ ಸುತ್ತ ಸುತ್ತುವ ಕಥೆ 'ಶಾಖಾಹಾರಿ'. ಸುಬ್ಬಣ್ಣನ ಹೋಟೆಲ್‌ಗೆ ಬರುವ ಒಬ್ಬ ಆಗಂತುಕನ ಕಾರಣಕ್ಕೆ ಕಥೆ ಹೇಗೆಲ್ಲಾ ಬದಲಾಗುತ್ತದೆ ಎನ್ನುವುದನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಒಂದಷ್ಟು ಕೊಲೆಗಳು. ಅದಕ್ಕೂ ಸುಬ್ಬಣ್ಣನಿಗೂ ಏನಾದರೂ ನಂಟು ಇರುತ್ತಾ? ಮುಗ್ಧನೋರ್ವ ಅಪರಾಧಿ ಆಗುವ ಎಳೆಯೂ ಚಿತ್ರದಲ್ಲಿದೆ.
ಸಂದೀಪ್ ಸುಂಕದ್ ನಿರ್ದೇಶನದ 'ಶಾಖಾಹಾರಿ' ಚಿತ್ರದಲ್ಲಿ ರಂಗಾಯಣ ರಘು ಜೊತೆಗೆ ಗೋಪಾಲ್ ಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗಡೆ, ಪ್ರತಿಮಾ ನಾಯಕ್, ಶ್ರೀಹರ್ಷ ನಟಿಸಿದ್ದಾರೆ. 'ಶಾಖಾಹಾರಿ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಅಷ್ಟೇನೂ ಸದ್ದು ಮಾಡಿರಲಿಲ್ಲ.
ಇನ್ನು 'ಮೈದಾನ್' ಬಗ್ಗೆ ಹೇಳುವುದಾದರೆ ಭಾರತ ಫುಟ್ಬಾಲ್ ತಂಡದ ಕೋಚ್ ರಹೀಮ್ ಸಾಬ್ ಏಳುಬೀಳಿನ ಕಥೆ ಚಿತ್ರದಲ್ಲಿದೆ. ರಹೀಮ್ ಸಾಬ್ ಆಗಿ ಅಜಯ್ ದೇವಗನ್ ನಟನೆ ಮೋಡಿ ಮಾಡಿತ್ತು. 50ರ ದಶಕದ ಆರಂಭದಲ್ಲಿ ಒಲಿಂಪಿಕ್ಸ್‌ನಲ್ಲಿ ಸೋಲುಂಡ ಭಾರತ ಫುಟ್‌ಬಾಲ್ ತಂಡವನ್ನು ಸೈಯದ್ ಅಬ್ದುಲ್ ರಹೀಮ್ ಹೇಗೆ ಮುನ್ನಡೆಸುತ್ತಾರೆ. ಮತ್ತೆ ಒಳ್ಳೆ ತಂಡ ಕಟ್ಟಿ ಹೇಗೆ ಭಾರತದಲ್ಲಿ ಫುಟ್‌ಬಾಲ್ ಕ್ರೇಜ್ ಶುರುವಾಗುವಂತೆ ಮಾಡುತ್ತಾರೆ. ಅವರ ಅವಧಿಯಲ್ಲಿ ಭಾರಯತ ಫುಟ್‌ಬಾಲ್ ಸುವರ್ಣಯುಗ ಹೇಗಿತ್ತು? ಎನ್ನುವುದನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ.
ರಹೀಮ್ ಸಾಬ್ ಪತ್ನಿ ಸಯೀರಾ ರಹೀಮ್ ಪಾತ್ರದಲ್ಲಿ ಕನ್ನಡ ನಟಿ ಪ್ರಿಯಾಮಣಿ ಮಿಂಚಿದ್ದಾರೆ. ಅಮಿತ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ಎ. ಆರ್ ರಹಮಾನ್ ಸಂಗೀತವಿದೆ. ಸದ್ಯ ಪ್ರೈಂನಲ್ಲಿ ಹಣ ಪಾವತಿಸಿ ಸಿನಿಮಾ ನೋಡಬಹುದು.


Click it and Unblock the Notifications










