Pushpa- 2 OTT: 'ಪುಷ್ಪ- 2' ಓಟಿಟಿ ಕನ್ನಡ ವರ್ಷನ್ ಯಾಕಿಲ್ಲ?
ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಸಿನಿಮಾ ಓಟಿಟಿಗೆ ಬಂದಿದೆ. 3 ಗಂಟೆ 20 ನಿಮಿಷದ ಜೊತೆಗೆ ಮತ್ತೆ 20 ನಿಮಿಷ ಸೇರಿಸಿ ಒಟ್ಟು 3 ಗಂಟೆ 40 ನಿಮಿಷ ಸಿನಿಮಾ ಅಪ್‌ಲೋಡ್ ಮಾಡಿದ್ದಾರೆ. ವೀಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಕಳೆದ ವರ್ಷದ ಕೊನೆಗೆ ಬಂದಿದ್ದ ಆಕ್ಷನ್ ಎಂಟರ್‌ಟೈನರ್ 'ಪುಷ್ಪ'- 2 ಬಾಕ್ಸಾಫೀಸ್ ಶೇಕ್ ಮಾಡಿತ್ತು. ಡಿಸೆಂಬರ್ 5ಕ್ಕೆ ತೆರೆಗೆ ಬಂದಿದ್ದ ಸಿನಿಮಾ 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಘೋಷಿಸಿತ್ತು. 50 ದಿನಗಳ ಬಳಿಕ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಭಾರೀ ಮೊತ್ತಕ್ಕೆ ಓಟಿಟಿ ರೈಟ್ಸ್ ಮಾರಾಟವಾಗಿತ್ತು.

ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ 3 ವರ್ಷಗಳ ಹಿಂದೆ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಮುಂದುವರೆದ ಭಾಗ ಎನ್ನುವ ಕಾರಣಕ್ಕೆ ಸೀಕ್ವೆಲ್ ಕುತೂಹಲ ಮೂಡಿಸಿತ್ತು. ಪ್ರೀಮಿಯರ್ ಶೋಗಳಿಂದಲೇ ಸಿನಿಮಾ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. ನೋಡ ನೋಡುತ್ತಲೇ ಪುಷ್ಪರಾಜ್ ಬಾಕ್ಸಾಫೀಸ್ ಕೊಳ್ಳೆ ಹೊಡೆದು ಬಿಟ್ಟ.
ಸಿನಿಮಾ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿತ್ತು. ಹಾಗಾಗಿ ಸಿನಿಮಾ ಕಲೆಕ್ಷನ್ ಸಹಜವಾಗಿಯೇ ಜಾಸ್ತಿ ಆಗಿತ್ತು. ಅಲ್ಲು ಅರ್ಜುನ್ ಪರ್ಫಾರ್ಮನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರದ HD ಪ್ರಿಂಟ್ ಲೀಕ್ ಆಗಿದ್ದರೂ ಕೂಡ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು.
ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್ ಆಗಿದ್ದು ನೋಡಿ ಬಹಳ ಬೇಗ ಓಟಿಟಿಗೆ ಬರುತ್ತದೆ ಎಂದು ಕೆಲವರು ಭಾವಿಸಿದ್ದರು. ಆದರೆ 56 ದಿನಗಳ ಬಳಿಕವೇ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. 3 ಗಂಟೆ 23 ನಿಮಿಷಗಳ ಸುಧೀರ್ಘ ಕಾಲಾವಧಿಯ ಸಿನಿಮಾ ಇದು. ಇದೇ 'ಪುಷ್ಪ'- 2 ಚಿತ್ರದ ಹಿನ್ನಡೆಗೆ ಕಾರಣ ಎಂದು ಕೆಲವರು ಹೇಳಿದ್ದರು. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆದ್ದಿತ್ತು.
ಸಂಕ್ರಾಂತಿ ವೇಳೆಗೆ ಮತ್ತೆ 20 ನಿಮಿಷಗಳ ಫುಟೇಜ್ ಸೇರಿಸಿ 'ಪುಷ್ಪ'- 2 ರೀ-ಲೋಡೆಡ್ ಎಂದು ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಇದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 3 ಗಂಟೆ 44 ನಿಮಿಷ ಸಿನಿಮಾ ಓಟಿಟಿಗೆ ಬಂದಿದೆ. ತೆಲುಗು ಜೊತೆಗೆ ತಮಿಳು ಹಾಗೂ ಮಲಯಾಳಂ ವರ್ಷನ್ ವೀಕ್ಷಣೆಗೆ ಲಭ್ಯವಿದೆ. ಆದರೆ ಕನ್ನಡ ವರ್ಷನ್ ಸದ್ಯಕ್ಕೆ ಸಿಗುತ್ತಿಲ್ಲ. ಇದು ಸಹಜವಾಗಿಯೇ ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ.
ವರದರಾಜ್ ಚಿಕ್ಕಬಳ್ಳಾಪುರ ನೇತೃತ್ವದಲ್ಲಿ 'ಪುಷ್ಪ'- 2 ಕನ್ನಡ ಡಬ್ಬಿಂಗ್ ಮಾಡಲಾಗಿತ್ತು. ಚಿತ್ರದ ಡಬ್ಬಿಂಗ್ ಗುಣಮಟ್ಟದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಅಷ್ಟೇ ಅಲ್ಲ ಡಬ್ ಆಗಿ ಬಂದ ಸಿನಿಮಾಗಳಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೂ 'ಪುಷ್ಪ'- 2 ಪಾತ್ರವಾಗಿದೆ. ಆದರೆ ಓಟಿಟಿಯಲ್ಲಿ ಇನ್ನು ಯಾಕೆ ಕನ್ನಡ ವರ್ಷನ್ ಬಂದಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ತಾಂತ್ರಿಕ ಸಮಸ್ಯೆ ಆಗಿದೆ. ಕೆಲವೇ ಗಂಟೆಗಳಲ್ಲಿ ಕನ್ನಡ ಆಡಿಯೋದಲ್ಲಿ ಸಿನಿಮಾ ವೀಕ್ಷಿಸಬಹುದು ಎಂದು ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ ಎಂದು ವರದರಾಜ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಫಹಾಸ್ ಫಾಸಿಲ್ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ ಗೆದ್ದಿತ್ತು. 'ಪುಷ್ಪ'- 3 ಸಿನಿಮಾ ಮಾಡುವುದಾಗಿಯೂ ಹೇಳಿದ್ದಾರೆ.


Click it and Unblock the Notifications











