Kantara Chapter-1; ಹಿಂದಿ ಭಾಷಿಕರಿಗೆ ರಿಷಬ್ ಶೆಟ್ಟಿ 'ಕಾಂತಾರ- 1' ಬಿಗ್ ಸರ್‌ಪ್ರೈಸ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ-1' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಓಟಿಟಿಗೆ ಬಂದರೂ ಜನ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ರಿಷಬ್ ಶೆಟ್ಟಿ ಟೇಕಿಂಗ್, ಆಕ್ಟಿಂಗ್ ನೋಡಿ ಫಿದಾ ಆಗಿದ್ದರು. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ಮಾಡಿದೆ.
'ಕಾಂತಾರ- 1' ಸಿನಿಮಾ ತೆರೆಕಂಡ 4 ವಾರಗಳ ಬಳಿಕ ಓಟಿಟಿಗೆ ಬಂದಿತ್ತು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. ಇದು ಅಭಿಮಾನಿಗಳಿಗೆ ಬೇಸರ ತಂದಿದ್ದು ಸುಳ್ಳಲ್ಲ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಯಾಕೆ ದಿಢೀರನೆ ಓಟಿಟಿಗೆ ಬಿಟ್ಟಿದ್ದು ಎಂದು ಕೇಳಿದ್ದರು. ಮೊದಲೇ ಈ ಬಗ್ಗೆ ಒಪ್ಪಂದ ಆಗಿತ್ತು ಎಂದು ನಿರ್ಮಾಪಕರು ಸ್ಪಷ್ಟನೆ ಕೊಟ್ಟಿದ್ದರು.

ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬಂದರೂ ಹಿಂದಿ ವರ್ಷನ್ ಸ್ಟ್ರೀಮಿಂಗ್ ಆಗರಲಿಲ್ಲ. 8 ವಾರಗಳ ಬಳಿಕ ದಿಢೀರನೆ ಸಿನಿಮಾ ಹಿಂದಿ ಭಾಷಿಕರನ್ನು ಡಿಜಿಟಲ್ ವೇದಿಕೆಯಲ್ಲಿ ರಂಜಿಸುತ್ತಿದೆ. ಹೌದು 'ಕಾಂತಾರ- 1' ಹಿಂದಿ ವರ್ಷನ್ ಈಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ರಿಲೀಸ್ ಆಗಿದೆ. ಉತ್ತರ ಭಾರತದ ಬಹಳಷ್ಟು ಮಂದಿ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದರು.
ಅಕ್ಟೋಬರ್ 2ರಂದು ದಸರಾ ಹಬ್ಬದ ಸಂಭ್ರಮದಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು. ಪರಭಾಷಿಕರು ಸಿನಿಮಾ ನೋಡಿ ಕೊಂಡಾಡಿದ್ದರು. ದಕ್ಷಿಣದ 4 ರಾಜ್ಯಗಳಲ್ಲಿ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಕಾಂತಾರ- 1' ಪಾತ್ರವಾಗಿತ್ತು. ಉತ್ತರ ಭಾರತದಲ್ಲಿ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಓಪನಿಂಗ್ ಸಿಗದಿದ್ದರೂ ನಿಧಾನವಾಗಿ ಚಿತ್ರಮಂದಿರಗಳಲ್ಲಿ ಕಚ್ಚಿಕೊಂಡಿತ್ತು.
'ಕಾಂತಾರ- 1' ಸಿನಿಮಾ ಓಟಿಟಿಗೆ ಬಂದು ತಿಂಗಳು ಕಳೆದರೂ ಕೆಲವೆಡೆ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಬೆಂಗಳೂರಿನಲ್ಲಿ 12 ಅಧಿಕ ಶೋಗಳಲ್ಲಿ ಇಂದು ಕೂಡ ಸಿನಿಮಾ ಪ್ರದರ್ಶನವಾಗುತ್ತಿದೆ. ಹಿಂದಿ ವರ್ಷನ್ ಈಗ ಸ್ಟ್ರೀಮಿಂಗ್ ಆರಂಭಿಸಿದ್ದರೂ ಉತ್ತರ ಭಾರತದ ಹಲವು ಭಾಗಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಇದು 'ಕಾಂತಾರ- 1' ಚಿತ್ರಕ್ಕಿರುವ ಕ್ರೇಜ್ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ.
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಪ್ರೀಕ್ವೆಲ್ ಮಾಡುವ ಪ್ರಯತ್ನ ಶುರುವಾಗಿತ್ತು. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಈ ಚಿತ್ರವನ್ನು ಕಟ್ಟಿಕೊಡಲಾಗಿತ್ತು. ಕಥೆ, ಚಿತ್ರಕಥೆ, ನಿರ್ದೇಶನ, ನಟನೆ ಹೀಗೆ ಎಲ್ಲಾ ವಿಭಾಗಗಳಲ್ಲಿ ರಿಷಬ್ ಶೆಟ್ಟಿ ಕಮಾಲ್ ಮಾಡಿದ್ದರು. ಖ್ಯಾತನಾಮರು ಈ ಸಿನಿಮಾ ನೋಡಿ ಕೊಂಡಾಡಿದ್ದರು. 'ಕಾಂತಾರ- 2' ಸಿನಿಮಾ ಮಾಡುವುದಾಗಿಯೂ ಘೋಷಣೆ ಮಾಡಿದ್ದಾರೆ.
'KGF' ಸರಣಿ ಹಾಗೂ 'ಕಾಂತಾರ' ಬಳಿಕ ಉತ್ತರ ಭಾರತದಲ್ಲಿ ದೊಡ್ಡದಾಗಿ ಸದ್ದು ಮಾಡಿದ ಕನ್ನಡ ಸಿನಿಮಾ 'ಕಾಂತಾರ-1' ಮಾತ್ರ. ಹಿಂದಿ ವರ್ಷನ್ ಮಾತ್ರ 220 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ. ಕರ್ನಾಟಕದಲ್ಲಿ ಮಾತ್ರ 250 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು.
'ಕಾಂತಾರ- 1' ಬಳಿಕ ರಿಷಬ್ ಶೆಟ್ಟಿ 'ಜೈ ಹನುಮಾನ್' ಸಿನಿಮಾ ಕಡೆ ಮುಖ ಮಾಡಿದ್ದಾರೆ. ಜನವರಿಯಿಂದ ಜೂನ್‌ವರೆಗೆ 6 ತಿಂಗಳು ಕಾಲ್‌ಶೀಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಡಿವೈನ್ ಸ್ಟಾರ್ ಮಿಂಚಲಿದ್ದಾರೆ.


Click it and Unblock the Notifications











