Kantara- 1 OTT: ವಾರೆವ್ಹಾ.. ತಿಂಗಳಿಗೂ ಮುನ್ನ ದಿಢೀರ್ ಓಟಿಟಿಗೆ ಬಂತು 'ಕಾಂತಾರ- 1'
ಚಿತ್ರಮಂದಿರಕ್ಕೆ ಬಂದ ಸಿನಿಮಾ ಓಟಿಟಿಗೆ ಬರಲೇಬೇಕು. ಕೆಲ ಸಿನಿಮಾಗಳು ಬರುವುದು ಕೊಂಚ ತಡವಾಗಬಹುದು ಅಷ್ಟೆ. ಆದರೆ ಟಿವಿಗೆ ಬರೋಕು ಮುನ್ನ ಬಹುತೇಕ ಎಲ್ಲಾ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುತ್ತದೆ. ಇದೀಗ 'ಕಾಂತಾರ- 1' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ.
ಸದ್ಯ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿ 'ಕಾಂತಾರ -1' ಸಿನಿಮಾ 50ನೇ ದಿನದತ್ತ ಮುಖ ಮಾಡಿದೆ. ನೂರಾರು ಚಿತ್ರಮಂದಿರಗಳಲ್ಲಿ ಸಿನಿಮಾ ಇನ್ನು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ನಡುವೆ ಸಿನಿಮಾ ಓಟಿಟಿಗೆ ಬರುವ ಬಗ್ಗೆ ಚರ್ಚೆ ಶುರುವಾಗಿತ್ತು. ಇದೀಗ ಅದು ಖಚಿತವಾಗಿದೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬರ್ತಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ.

ಇಂಗ್ಲೀಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಆದರೆ ಅದಕ್ಕೂ ಮುನ್ನ ಯಾಕೆ ಓಟಿಟಿಗೆ ಬಿಡ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. 20 ದಿನಗಳ ಬಳಿಕ ಸಿನಿಮಾ ಟಿಕೆಟ್ ದರ ಇಳಿಸಲಾಗಿದೆ. ಹಾಗಾಗಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆ ಇತ್ತು. ಅಷ್ಟರಲ್ಲೇ ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ.
ಬಹಳ ಹಿಂದೆಯೇ ಅಮೇಜಾನ್ ಪ್ರೈಂ ಸಂಸ್ಥೆಗೆ 'ಕಾಂತಾರ- 1' ರೈಟ್ಸ್ ಮಾರಾಟವಾಗಿದೆ. ಪೈರಸಿ ಆಗುವ ಭಯದಿಂದ ಬೇಗನೆ ಸಿನಿಮಾ ಓಟಿಟಿಗೆ ತರುತ್ತಿದ್ದಾರೆ ಎನ್ನಲಾಗ್ತಿದೆ. ಅಥವಾ ತಿಂಗಳಿಗೂ ಮುನ್ನ ಓಟಿಟಿ ಸ್ಟ್ರೀಮಿಂಗ್ ಮಾತುಕತೆ ಆಗಿರುವ ಸಾಧ್ಯತೆಯಿದೆ. ಅಕ್ಟೋಬರ್ 31ರಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಪ್ರೈಂ ವೀಡಿಯೋದಲ್ಲಿ ರಿಲೀಸ್ ಆಗಲಿದೆ.
ಹಿಂದಿ ವರ್ಷನ್ ಮಾತ್ರ 8 ವಾರಗಳ ಬಳಿಕ ಓಟಿಟಿಗೆ ಬರುವ ನಿರೀಕ್ಷೆಯಿದೆ. ಪ್ರೈಂ ವೀಡಿಯೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಬಹುದು ಎಂದು ಹೇಳಲಾಗ್ತಿದೆ. ಇತ್ತೀಚೆಗೆ ದೀಪಾವಳಿ ಸಂಭ್ರಮದಲ್ಲಿ 'ಥಮ್ಮ' ಸೇರಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿತ್ತು. ಅದನ್ನೆಲ್ಲಾ ಮೀರಿ ರಿಷಬ್ ಶೆಟ್ಟಿ ಸಿನಿಮಾ ಸದ್ದು ಮಾಡ್ತಿದೆ. ಆದರೂ ಯಾಕೆ ಇಷ್ಟು ಬೇಗ ಓಟಿಟಿಗೆ ಬಿಡ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಾಜು 125 ಕೋಟಿ ರೂ.ಗೆ 'ಕಾಂತಾರ- 1' ಓಟಿಟಿ ರೈಟ್ಸ್ ಮಾರಾಟವಾಗಿದೆ. ಜೀ-ನೆಟ್‌ವರ್ಕ್ ಸಂಸ್ಥೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಬಾಚಿಕೊಂಡಿದೆ. 80 ಕೋಟಿ ರೂ. ಡೀಲ್ ಕುದುರಿಸಲಾಗಿದೆ. ಬರೀ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್‌ನಿಂದಲೇ 200 ಕೋಟಿ ರೂ. ಆದಾಯ ಬಂದಿರುವ ಲೆಕ್ಕಾಚಾರ ನಡೆದಿದೆ. ಇನ್ನು 800 ಕೋಟಿ ರೂ.ಗ್ರಾಸ್ ಕಲೆಕ್ಷನ್, ಭಾರತದಲ್ಲಿ 500 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.
'ಛಾವ' ಚಿತ್ರದ ಕಲೆಕ್ಷನ್ ದಾಖಲೆ ಮುರಿದು ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ಕಾಂತಾರ- 1' ಪಾತ್ರವಾಗಿದೆ. ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ರುಕ್ಮಿಣಿ ವಸಂತ್, ಗುಲ್ಷನ್ ದೇವಯ್ಯ, ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿ ಗೆದ್ದಿದೆ. ಸಿನಿಮಾ ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಸಿನಿರಸಿಕರ ಮನಗೆದ್ದು ಸಿನಿಮಾ ಕಮಾಲ್ ಮಾಡಿದೆ.


Click it and Unblock the Notifications











