3 ವರ್ಷಗಳ ಬಳಿಕ ಓಟಿಟಿ ಟ್ರೆಂಡಿಂಗ್‌ನಲ್ಲಿ ಕನ್ನಡ ಬ್ಲಾಕ್‌ಬಸ್ಟರ್ ಸಿನಿಮಾ
ಓಟಿಟಿಯಲ್ಲಿ ಕನ್ನಡ ಸಿನಿಮಾಗಳ ಹವಾ ಶುರುವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕೆಲ ಹಿಟ್ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದೆ. 'ಸು ಫ್ರಮ್ ಸೋ', 'ಎಕ್ಕ' ಸಿನಿಮಾಗಳು ಓಟಿಟಿ ಸ್ಟ್ರೀಮಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. 'ಶೋಧ' ವೆಬ್ ಸೀರಿಸ್ ಕೂಡ ಸದ್ದು ಮಾಡ್ತಿದೆ.
ಅದೇನೋ ಗೊತ್ತಿಲ್ಲ ಓಟಿಟಿ ಸಂಸ್ಥೆಗಳು ಹಿಂದಿನಿಂದಲೂ ಕನ್ನಡ ಸಿನಿಮಾಗಳಿಗೆ ಮಲತಾಯಿ ಧೋರಣೆ ತೋರುತ್ತಿವೆ. ಸ್ಟಾರ್ ನಟರ ಸಿನಿಮಾಗಳನ್ನು ಬಿಟ್ಟರೆ ಬೇರೆ ಸಿನಿಮಾಗಳ ರೈಟ್ಸ್ ಖರೀದಿಸಲು ಹಿಂದೇಟು ಹಾಕುತ್ತವೆ. ವೆಬ್ ಸೀರಿಸ್ ನಿರ್ಮಾಣಕ್ಕೆ ಕೈಜೋಡಿಸುವುದಿಲ್ಲ. ಈ ಬಗ್ಗೆ ಕನ್ನಡ ಫಿಲ್ಮ್ ಮೇಕರ್ಸ್ ಆಗಾಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ ಚಾಪ್ಟರ್-1' ಸಿನಿಮಾ ಬಿಡುಗಡೆಗೆ 25 ದಿನ ಮಾತ್ರ ಬಾಕಿಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ತೆರೆಗೆ ಬಂದು ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇದೀಗ ಪ್ರೀಕ್ವೆಲ್ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗಪ್ಪಳಿಸಲಿದೆ. ಪ್ರೀ ರಿಲಿಸ್ ಬ್ಯುಸಿನೆಸ್ ದಾಖಲೆ ಮಟ್ಟದಲ್ಲಿ ನಡೀತಿದೆ.
ಪ್ರೀಕ್ವೆಲ್ ಬಿಡುಗಡೆಗೆ ಸಜ್ಜಾಗಿರುವ ಹೊತ್ತಲ್ಲೇ 'ಕಾಂತಾರ' ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಸಿನಿಮಾ ತೆರೆಕಂಡು 45 ದಿನಗಳ ಬಳಿಕ ಪ್ರೈಂ ವೀಡಿಯೋಗೆ ಬಂದಿತ್ತು. ಇದೀಗ ಸಿನಿಮಾ ಪ್ರೈಂ ವಿಡಿಯೋ ನಂಬರ್ ವನ್ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದೆ. ಪ್ರೀಕ್ವೆಲ್ ರಿಲೀಸ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸಿನಿರಸಿಕರು ಮತ್ತೆ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ ಎನ್ನಲಾಗ್ತಿದೆ.

ಕರಾವಳಿಯ ದೈವಾರಾಧನೆಯ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದ 'ಕಾಂತಾರ' ಸಿನಿಮಾ ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದರು. ಕಿಶೋರ್, ಅಚ್ಯುತ್ ಕುಮಾರ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಜೀವಾಳವಾಗಿತ್ತು. ಅಂದಾಜು 15 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು ವಿಶೇಷ.
ಕನ್ನಡದಲ್ಲಿ ಮಾತ್ರ ನಮ್ಮ ಮಣ್ಣಿನ ಕತೆಯನ್ನು ಪ್ರೇಕ್ಷಕರಿಗೆ ಹೇಳಲು ರಿಷಬ್ ಶೆಟ್ಟಿ ತೀರ್ಮಾನಿಸಿದ್ದರು. ಆದರೆ ಸಿನಿಮಾ ಬಿಡುಗಡೆ ಬಳಿಕ ಪರಭಾಷಿಕರಿಂದ ಡಬ್ ಮಾಡುವಂತೆ ಡಿಮ್ಯಾಂಡ್ ಹೆಚ್ಚಾಗಿತ್ತು. ಹಾಗಾಗಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಕಂಡಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಕೂಡ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡು ರಿಷಬ್ ಶೆಟ್ಟಿಗೆ ಸನ್ಮಾನ ಮಾಡಿದ್ದರು.
ಬಳಿಕ ಇಂಗ್ಲೀಷ್ ಹಾಗೂ ತುಳು ಭಾಷೆಗೂ 'ಕಾಂತಾರ' ಸಿನಿಮಾ ಡಬ್ ಆಗಿತ್ತು. ಅಂದಹಾಗೆ ಪ್ರೀಕ್ವೆಲ್ ಸಿನಿಮಾ ರೈಟ್ಸ್ ಕೂಡ ಪ್ರೈಂ ವಿಡಿಯೋ ಪಾಲಾಗಿದೆ. 150 ಕೋಟಿ ರೂ.ಗೆ ಡೀಲ್ ಕುದುರಿಸಲಾಗಿದೆ. ಚಿತ್ರದ ಬಜೆಟ್ 100 ಕೋಟಿ ರೂ. ಎನ್ನಲಾಗ್ತಿದ್ದು ಓಟಿಟಿ ರೈಟ್ಸ್‌ನಿಂದಲೇ ಹಾಕಿರುವ ದುಡ್ಡ ವಾಪಸ್ ಬಂದಂತೆ ಆಗಿದೆ. ಇನ್ನು ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ 100 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗ್ತಿದೆ.
'ಕಾಂತಾರ ಚಾಪ್ಟರ್-1' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಗುಲ್ಶನ್ ದೇವಯ್ಯ ಕೂಡ ತಾರಾಗಣದಲ್ಲಿದ್ದಾರೆ. ಇನ್ನುಳಿದಂತೆ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಆಗುವ ಸಾಧ್ಯತೆಯಿದೆ. ಆ ಮೂಲಕ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಪ್ಲ್ಯಾನ್ ನಡೀತಿದೆ.


Click it and Unblock the Notifications











