KD: The Devil Ott: ಡಿಜಿಟಲ್ ಪಾರ್ಟ್ನರ್ ಬದಲಾಗಿ ಟ್ವಿಸ್ಟ್; ಕೊನೆಗೂ ಓಟಿಟಿಗೆ 'ಕೆಡಿ' ಎಂಟ್ರಿ
ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಸಿನಿಮಾ ಓಟಿಟಿಗೆ ಬರುವ ಸಮಯ ಬಂದಿದೆ. ಏಪ್ರಿಲ್ 30ರಂದು ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕೂಡ ಆಗಲಿಲ್ಲ.
ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆಕ್ಷನ್ ಥ್ರಿಲ್ಲರ್ 'ಕೆಡಿ' ಸಿನಿಮಾ ನಿರ್ಮಾಣವಾಗಿತ್ತು. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿತ್ತು. ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಬೂಸ್ಟ್ ಕೊಟ್ಟಿದ್ದರು. ಸಿನಿಮಾ ಒಂದಷ್ಟು ವಿವಾದಗಳಿಂದ ಸುದ್ದಿ ಆಗಿತ್ತು. ಬಳಿಕ ಎಲ್ಲವನ್ನು ನಿವಾರಿಸಿಕೊಂಡು ಪ್ರೇಕ್ಷಕರ ಮುಂದೆ ಬಂದಿತ್ತು.

ಮತ್ತೊಮ್ಮೆ ಮಾಸ್ ಅವತಾರದಲ್ಲಿ ಧ್ರುವ ಸರ್ಜಾ ಅಬ್ಬರಿಸಿ ಗೆದ್ದರು. ಬಹಳ ದಿನಗಳ ಬಳಿಕ ಪ್ರೇಮ್ ನಿರ್ದೇಶನಕ್ಕೂ ಮೆಚ್ಚುಗೆ ವ್ಯಕ್ತವಾಯಿತು. ಪಾರ್ಟ್- 2 ಮಾಡುವುದಾಗಿ ಕೂಡ ಚಿತ್ರತಂಡ ಘೋಷಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಒಮ್ಮೆಲೆ ಎಲ್ಲಾ ಕಡೆ ಬಿಡುಗಡೆ ಆಗಲಿಲ್ಲ. ಕನ್ನಡದಲ್ಲಿ ಮಾತ್ರ ಪ್ರೇಕ್ಷಕರ ಮುಂದೆ ಬಂದಿತ್ತು. 3 ವಾರಗಳ ಬಳಿಕ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ತೆರೆಕಂಡಿತ್ತು.
'ಕೆಡಿ' ಸಿನಿಮಾ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿಲ್ಲ ಎನ್ನುವ ಊಹಾಪೋಹ ಶುರುವಾಗಿತ್ತು. ಕೊನೆಗೆ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಮೇ 28ಕ್ಕೆ ಸಿನಿಮಾ ಓಟಿಟಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಡಿಜಿಟಲ್ ಪಾರ್ಟ್ನರ್ ಬದಲಾಗಿದ್ದಾರೆ. ಪ್ರೈಂ ವೀಡಿಯೋ ಬದಲು ಜೀ-5ನಲ್ಲಿ 'ಕೆಡಿ' ಸಿನಿಮಾ ಸ್ಟ್ರೀಮಿಂಗ್ ಆಗುವುದು ಖಚಿತವಾಗಿದೆ. ಸಣ್ಣ ಟೀಸರ್ ಸಮೇತ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ.
ಭಾರೀ ನಷ್ಟ?
ಜೂನ್ 5ರಂದು 'ಕೆಡಿ: ದಿ ಡೆವಿಲ್' ಸಿನಿಮಾ ಓಟಿಟಿಗೆ ಬರಲಿದೆ. ಕನ್ನಡ ವರ್ಷನ್ ಮಾತ್ರ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಾ? ಅಥವಾ ಹಿಂದಿ, ತಮಿಳು, ತೆಲುಗು, ಮಲಯಾಳಂ ವರ್ಷನ್ ಕೂಡ ಬರುತ್ತಾ ಕಾದು ನೋಡಬೇಕಿದೆ. ಅಂದಾಜು 80 ಕೋಟಿ ರೂ. ಬಜೆಟ್‌ನಲ್ಲಿ 'ಕೆಡಿ' ಸಿನಿಮಾ ನಿರ್ಮಾಣವಾಗಿರುವುದಾಗಿ ಹೇಳಲಾಗ್ತಿದೆ. ಆದರೆ 25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಆ ಲೆಕ್ಕದಲ್ಲಿ ಸಿನಿಮಾ ಭಾರೀ ನಷ್ಟ ಎದುರಿಸಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.
'ಸರ್ಸೆ ಸರ್ಸೆ' ಸಾಂಗ್ ಇರುತ್ತಾ?
'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ಭಾರೀ ವಿವಾದಕ್ಕೆ ಕಾರಣವಾಗಿದ್ದು ಗೊತ್ತೇಯಿದೆ. ಸಾಹಿತ್ಯ ಬಹಳ ಅಶ್ಲೀಲವಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ದೂರು ಸಹ ದಾಖಲಾಗಿತ್ತು. ಬಳಿಕ ನಿರ್ದೇಶಕ ಪ್ರೇಮ್ ಹಾಗೂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದ ಸಂಜಯ್ ದತ್ ಕ್ಷಮೆ ಕೇಳಿದ್ದರು. ಹೊಸ ಸಾಹಿತ್ಯ ರಚಿಸಿ ಸಾಂಗ್ ಚಿತ್ರದಲ್ಲಿ ಸೇರಿಸುವುದಾಗಿ ಪ್ರೇಮ್ ಹೇಳಿದ್ದರು. ಆದರೆ ಸಿನಿಮಾದಲ್ಲಿ ಸಾಂಗ್ ಇರಲಿಲ್ಲ. ಮುಂದಿನ ವಾರ ಸಾಂಗ್ ಸೇರಿಸ್ತೀವಿ ಎಂದು ಸಿನಿಮಾ ಬಿಡುಗಡೆ ದಿನ ಕೂಡ ಪ್ರೇಮ್ ಹೇಳಿದ್ದರು. ಆದರೆ ಸಾಧ್ಯವಾಗಲಿಲ್ಲ. ಓಟಿಟಿಯಲ್ಲಿ ಸಾಂಗ್ ಸಮೇತ ಸಿನಿಮಾ ಸ್ಟ್ರೀಮಿಂಗ್ ಆಗುತ್ತಾ ಕಾದು ನೋಡಬೇಕಿದೆ.
'ಕೆಡಿ- 2' ಯಾವಾಗ?
ಕ್ಲೈಮ್ಯಾಕ್ಸ್‌ನಲ್ಲಿ ಸುದೀಪ್ ಪಾತ್ರ ಪರಿಚಯಿಸಿ ಭಾರೀ ಟ್ವಿಸ್ಟ್ ಕೊಟ್ಟು ಮೊದಲ ಭಾಗ ಮುಗಿಸಿದ್ದಾರೆ. 'ಪಾರ್ಟ್- 2' ಸಿನಿಮಾ ಬರುತ್ತದೆ ಎಂದು ಘೋಷಿಸಿದ್ದಾರೆ. ಒಂದೇ ವರ್ಷದಲ್ಲಿ ಸಿನಿಮಾ ತೆರೆಗೆ ಬರುತ್ತದೆ ಎಂದು ಪ್ರೇಮ್ ಹೇಳಿದ್ದಾರೆ. ಆದರೆ 'ಕೆಡಿ' ಸಿನಿಮಾ ಫಲಿತಾಂಶ ನೋಡಿದ ಮೇಲೆ ಸೀಕ್ವೆಲ್ ಬಗ್ಗೆ ಅನುಮಾನ ಮೂಡಿದೆ.


Click it and Unblock the Notifications