ಇನ್ನೇನು ಕೆಲವೇ ಗಂಟೆ, ಓಟಿಟಿಗೆ ಬರಲಿದೆ ಅಕ್ಷಯ್ ಕುಮಾರ್ ಸಿನಿಮಾ..!
ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.
ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಚಿತ್ರಮಂದಿರದಲ್ಲಿ ಚಿತ್ರ ಸೋತ ನಂತರ ಪ್ರೇಕ್ಷಕರನ್ನೇ ನೇರವಾಗಿ ಹೊಣೆಯಾಗಿಸುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಬಿಡುಗಡೆಯಾದ ಒಂದೂವರೆ ತಿಂಗಳಿಗೆ ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ಓಟಿಟಿಗೆ ಬಂದಿದೆ. ಈ ಜೂನ್ 13ರಿಂದ ಪ್ರಸಾರವಾಗಲಿದೆ.

ಇನ್ನು ಇದು ಪ್ಯಾನ್ ಇಂಡಿಯಾ ಕಾಲ. ಪ್ರತಿಯೊಬ್ಬರ ಚಿತ್ರಗಳು ಕೂಡ ಈಗ ಎಲ್ಲ ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿವೆ. ಆದರೂ ಕೂಡ ಕೇಸರಿ 2 ಚಿತ್ರವನ್ನು ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ರಯತ್ನ ಮಾಡಿರಲಿಲ್ಲ.
ಬದಲಿಗೆ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಈಗ ಈ ಚಿತ್ರ ಓಟಿಟಿಗೆ ಬರುತ್ತಿದೆ. ಇಲ್ಲಿ ಬೇರೆ ಭಾಷೆಗಳಲ್ಲಿ ನೋಡುವ ಸೌಲಭ್ಯ ಸಿಗುತ್ತಾ ? ಎನ್ನುವ ಪ್ರಶ್ನೆಗೆ ಚಿತ್ರದ ಪ್ರಸಾರ ಶುರುವಾದಾಗಲೇ ಗೊತ್ತಾಗಲಿದೆ.
ಅಂದ್ಹಾಗೇ ಕೇಸರಿ 2 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್‌ನ ಘನಘೋರ ದುರಂತವನ್ನು ನೆನಪಿಸುವ ಚಿತ್ರ. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಲಾಯರ್ ಶಂಕರನ್ ನಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ ಮಾಧವನ್ ಮೆಕೆನ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಕೋರ್ಟ್ ರೂಮ್‌ನಲ್ಲಿ ಇವರ ಇಬ್ಬರ ನಡುವೆ ನಡೆಯುವ ವಾದ ವಿವಾದವೇ ಈ ಚಿತ್ರದ ಆಕರ್ಷಣೆ. ಇನ್ನು ದಿಲ್ರೀತ್ ಗಿಲ್ ಪಾತ್ರದಲ್ಲಿ ಅನನ್ಯಾ ಪಾಂಡೆ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕರಣ್ ಸಿಂಗ್ ತ್ಯಾಗಿ ಈ ಚಿತ್ರದ ನಿರ್ದೇಶಕ. ಇದು ಇವರ ಮೊದಲ ಪ್ರಯತ್ನ. ವಿಶೇಷ ಅಂದರೆ ಹಾರ್ವಡ್ ಯುನಿವರ್ಸಿಟಿಯಲ್ಲಿ ಕರಣ್ ಸಿಂಗ್ ತ್ಯಾಗಿ ಲಾ ಶಿಕ್ಷಣವನ್ನು ಪಡೆದು ಬಂದಿದ್ದಾರೆ. ನಿರ್ದೇಶನದ ತಮ್ಮ ಮೊದಲ ಚಿತ್ರದ ಕಥೆಯನ್ನು ಕೂಡ ನ್ಯಾಯಾಂಗ ವ್ಯವಸ್ಥೆಯ ಸುತ್ತ ಮುತ್ತವೇ ಹೆಣೆದು ಹೇಳಿದ್ದಾರೆ.
ಇನ್ನು ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್‌ಗಳು ತಮ್ಮ ಚಿತ್ರ ಬಿಡುಗಡೆಯಾದ ನಂತರ ಚಿತ್ರಮಂದಿರಕ್ಕೆ ಹೋಗಲ್ಲ. ಅಭಿಮಾನಿಗಳನ್ನು ಭೇಟಿಯಾಗುವುದಿಲ್ಲ. ಚಿತ್ರದ ಕುರಿತು ಮಾತನಾಡಲು ಕೂಡ ಹೋಗುವುದಿಲ್ಲ. ಆದರೆ ಅಕ್ಷಯ್ ಕುಮಾರ್ ನಡೆ ಇದಕ್ಕೆ ತದ್ವಿರುದ್ದವಾಗಿತ್ತು.
ಚಿತ್ರಮಂದಿರಕ್ಕೆ ಅಕ್ಷಯ್ ಕುಮಾರ್ ಭೇಟಿ ನೀಡಿದ್ದರು. ಅಭಿಮಾನಿಗಳ ಜೊತೆ ಸಂವಾದ ಮಾಡಿದ್ದರು. ಚಿತ್ರದ ಕುರಿತು ಪ್ರೇಕ್ಷಕರಿಂದಲೇ ಅಭಿಪ್ರಾಯಗಳನ್ನು ಕೇಳಿ ತಿಳಿದುಕೊಂಡಿದ್ದರು.
ಆದರೂ ಈ ಚಿತ್ರದ ಗಳಿಕೆ ಅಷ್ಟಕಷ್ಟೇ ಎನ್ನುವಂತಾಯ್ತು. ಸತತ ಸೋಲುಗಳಿಂದ ಹೈರಾಣಾದ ಅಕ್ಷಯ್ ಕುಮಾರ್ ಅವರ ಖಾತೆಗೆ ಮತ್ತೊಂದು ಸೋಲು ಸೇರ್ಪಡೆಯಾಯ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಭಾರತದಲ್ಲಿ ಈ ಚಿತ್ರದಲ್ಲಿ ಗಳಿಸಿದ್ದು ಕೇವಲ 92.2 ಕೋಟಿ ಮಾತ್ರ.
ಒಟ್ನಲ್ಲಿ ಸದ್ಯ ಬಿಡುಗಡೆಗೊಂಡು ಎರಡು ತಿಂಗಳ ನಂತರ ಕೇಸರಿ ಚಾಪ್ಟರ್ 2 ಚಿತ್ರ ಓಟಿಟಿಗೆ ಲಗ್ಗೆ ಇಡುತ್ತಿದೆ. ಚಿತ್ರ ಇದೇ ಜೂನ್ 13ರಿಂದ ಜೀಯೋ ಹಾಟ್ ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಲಿದೆ. ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರುವವರು ಮನೆಯಲ್ಲಿಯೇ ಕುಳಿತು ಈ ಜೂನ್ 13ರಿಂದ ಈ ಚಿತ್ರವನ್ನು ನೋಡಬಹುದು.


Click it and Unblock the Notifications











