ಮನೆ ಮನಗಳಿಗೆ ಕಿಚ್ಚ ಸುದೀಪ್: ಅಮೇಜಾನ್‌ನಲ್ಲಿ 'ಕೋಟಿಗೊಬ್ಬ3'
ಕೊರೊನಾ ಲಾಕ್‌ಡೌನ್ ನಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದವು. ಆದರೆ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಕನ್ನಡದ ಸಾಕಷ್ಟು ಸಿನಿಮಾಗಳು ತೆರೆಗೆ ಬಂದವು. ಜೊತೆಗೆ ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸುತ್ತಿವೆ. ಹೀಗೆ ಎರಡನೇ ಲಾಕ್‌ಡೌನ್ ಬಳಿಕ ತೆರೆಗೆ ಬಂದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಕನ್ನಡದ ಸಿನಿಮಾ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3'.
ಕೋಟಿಗೊಬ್ಬ3 ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ಮೇಲೆ ಅಪ್ಪಳಿಸಿದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಇದೀಗ ಕೋಟಿಗೊಬ್ಬ ಎಲ್ಲರ ಮನೆ ಮನಕ್ಕೆ ಬರುತ್ತಿದ್ದಾನೆ. 'ಕೋಟಿಗೊಬ್ಬ3' ಓಟಿಟಿಯಲ್ಲಿ ರಿಲೀಸ್ ಆಗಿದೆ. ಹಾಗಾಗಿ ಬೆಳ್ಳಿ ಪರದೆ ಮೇಲೆ ಕೋಟಿಗೊಬ್ಬ ಸಿನಿಮಾವನ್ನು ನೋಡದೇ ನಿರಾಶರಾದವರು ಈಗ ಯಾವ ಅಡೆತಡೆ ಇಲ್ಲದೆ ಚಿತ್ರವನ್ನು ನೋಡಬಹುದಾಗಿದೆ.

ರಿಲೀಸ್ ಆಗಿ ತಿಂಗಳ ಬಳಿಕ ಓಟಿಟಿಗೆ 'ಕೋಟಿಗೊಬ್ಬ3'!
'ಕೋಟಿಗೊಬ್ಬ3' ಚಿತ್ರವನ್ನು ಚಿತ್ರ ಮಂದಿರಗಳಲ್ಲಿ ನೋಡಲು ಮಿಸ್ ಮಾಡಿಕೊಂಡವರು ಈಗ ಮನೆಯಲ್ಲೇ ಕುಳಿತು ಕೋಟಿಗೊಬ್ಬನನ್ನು ಕಣ್ತುಂಬಿಕೊಳ್ಳಬಹುದು. ಇಂದಿನಿಂದ( ನವೆಂಬರ್ 29) ಕೋಟಿಗೊಬ್ಬ ಓಟಿಟಿಯಲ್ಲಿ ಲಭ್ಯವಿದೆ.
ಕಳೆದ ಅಕ್ಟೋಬರ್ 15ಕ್ಕೆ 'ಕೋಟಿಗೊಬ್ಬ3' ಪರದೆಯ ಮೇಲೆ ಅಪ್ಪಳಿಸಿತು. ಚಿತ್ರ ಮಂದಿರಕ್ಕೆ ಬಂದ ಕೋಟಿಗೊಬ್ಬನಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಈಗ ಈ ಚಿತ್ರ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. 'ಕೋಟಿಗೊಬ್ಬ3' ಚಿತ್ರ ಭಾರಿ ಮೊತ್ತಕ್ಕೆ ಒಟ್ಟಿಗೆ ಸೇಲ್ ಆಗಿದೆ. 'ಅಮೇಜಾನ್ ಪ್ರೈಮ್ ವೀಡಿಯೋ' ಕೋಟಿಗೊಬ್ಬ ಸಿನಿಮಾವನ್ನು ಖರೀದಿ ಮಾಡಿದ್ದು, ಇಂದಿನಿಂದ ಚಿತ್ರ ಪ್ರಸಾರವಾಗುತ್ತಿದೆ.

ಹಲವು ಸವಾಲುಗಳು ಎದುರಿಸಿದ್ದ ಕೋಟಿಗೊಬ್ಬ!
ರಿಲೀಸ್ ಸಮಯದಲ್ಲಿ 'ಕೋಟಿಗೊಬ್ಬ3' ಚಿತ್ರಕ್ಕೆ ಹಲವು ಸವಾಲುಗಳು ಎದುರಾದವು. ಆದರೆ ಎಲ್ಲಾ ಸವಾಲುಗಳನ್ನು ದಾಟಿ ಕೋಟಿಗೊಬ್ಬ ಪರದೆಯ ಮೇಲೆ ಅಬ್ಬರಿಸಿದ್ದಾನೆ. ಇದೀಗ ಓಟಿಟಿ ಪ್ಲ್ಯಾಟ್ ಫಾರ್ಮ್ ಅಮೇಜಾನ್‌ನಲ್ಲಿ ಕೂಡ ತೆರೆಕಾಣುತ್ತಿದೆ. ಅಕ್ಟೋಬರ್ 14ಕ್ಕೆ ಸಿನಿಮಾದ ರಿಲೀಸ್ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಆದರೆ ಅಂದು ಕೊಂಡ ಹಾಗೆ ಅಂದು ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡಕ್ಕೆ ಸಾಧ್ಯವಾಗಿರಲಿಲ್ಲ. ವಿತರಕರ ಎಡವಟ್ಟಿನಿಂದಾಗಿ ಸಿನಿಮಾ ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್ 15ಕ್ಕೆ ತೆರೆಗೆ ಬಂತು.
ಆದರೆ ಕಿಚ್ಚ ಸುದೀಪ್‌ಗೆ ದೊಡ್ಡ ಅಭಿಮಾನಿ ಬಳಗವೇ ಇರುವುದರಿಂದ, ಮೊದಲ ದಿನವೇ ಚಿತ್ರ ಮಂದಿರದಲ್ಲಿ ಸಹಸ್ರಾರು ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಸಾಕಷ್ಟು ಜನ ಸುದೀಪ್ ಅವರ ಸಿನಿಮಾ ರಿಲೀಸ್ ಮಾಡದಂತೆ ಹುನ್ನಾರ ನಡೆಸಲಾಗುತ್ತಿದೆ ಎನ್ನುವ ಬಗ್ಗೆಯೂ ಧ್ವನಿ ಎತ್ತಿದ್ದರು.

ಸತ್ಯ ಮತ್ತು ಶಿವನಾಗಿ ಕಿಚ್ಚ ಸುದೀಪ್!
ಈ ಸಿನಿಮಾದಲ್ಲಿ ಸುದೀಪ್ 2 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯ ಮತ್ತು ಶಿವ ಎನ್ನುವ ಎರಡು ಪಾತ್ರಗಳು ಕೋಟಿಗೊಬ್ಬ-2 ಸಿನಿಮಾದ ಮೂಲಕ ನಿಮಗೂ ಪರಿಚಯ ಇರಬಹುದು. ಅದೇ ಸತ್ಯ ಮತ್ತು ಶಿವ 'ಕೋಟಿಗೊಬ್ಬ3' ಚಿತ್ರದಲ್ಲೂ ಕೂಡ ಜಾದು ಮಾಡ್ತಾರೆ.
ಸಿನಿಮಾದಲ್ಲಿ ಸತ್ಯ ಮತ್ತು ಶಿವ ಇವರಿಬ್ಬರ ನಡುವಿನ ಕನೆಕ್ಷನ್ ಏನು? ಶಿವನ ಪಾತ್ರವೇನು ಸತ್ಯನಾ ಪಾತ್ರವೇನು. ಶಿವ, ಸತ್ಯ ಒಬ್ಬನೇನಾ ಅಥವಾ ಇಬ್ಬರ ಏನ್ನುವ ಕುತೂಹಲದೊಂದಿಗೇನೆ ಸಿನಿಮಾ ಸಾಗುತ್ತದೆ. ಈಗಾಗಲೇ ಸಿನಿಮಾ ನೋಡಿದವರಿಗೆ ಸತ್ಯ, ಶಿವನ ಬಗ್ಗೆ ಗೊತ್ತಿರುತ್ತದೆ. ಆದರೆ ಇನ್ನೂ ಸಿನಿಮಾ ನೋಡದೆ ಇರುವವರು ಈಗ ಓಟಿಟಿ ಮೂಲಕ ಕೋಟಿಗೊಬ್ಬನನ್ನು ಕಣ್ತುಂಬಿ ಕೊಳ್ಳ ಬಹುದಾಗಿದೆ.

ಭಾರಿ ಮೊತ್ತಕ್ಕೆ 'ಕೋಟಿಗೊಬ್ಬ3' ಕೊಂಡುಕೊಂಡ ಅಮೇಜಾನ್ ಪ್ರೈಮ್!
ಇಂದಿನಿಂದ 'ಕೋಟಿಗೊಬ್ಬ3 'ಅಮೆಜಾನ್ ಪ್ರೈಮ್ ವಿಡಿಯೋ'ದಲ್ಲಿ ಲಭ್ಯವಿದೆ. ಸತ್ಯ ಶಿವನ ಜುಗಲ್ ಬಂದಿಗೆ ತಮಿಳು ನಿರ್ದೇಶಕ ಶಿವ ಕಾರ್ತಿಕ್ ನಿರ್ದೇಶನವಿದೆ. ಇನ್ನು ಚಿತ್ರದ ಕಥೆ ಎಳೆಯನ್ನು ಕಿಚ್ಚ ಸುದೀಪ್ ಅವರದ್ದು ಎನ್ನುವುದು ವಿಶೇಷ. ಇನ್ನೂ ಒಂದು ತಿಂಗಳ ಬಳಿಕ ಸಿನಿಮಾ ಓಟಿಟಿಗೆ ಬಂದಿದೆ. ಹಾಗಾಗಿ ಚಿತ್ರಕ್ಕೆ ಭಾರಿ ಮೊತ್ತ ಕೊಟ್ಟು ಅಮೇಜಾನ್ ಖರೀದಿಸಿದೆ ಎನ್ನುತ್ತೆ ಚಿತ್ರ ತಂಡದ ಮೂಲಗಳು.


Click it and Unblock the Notifications











