Junior OTT: ಕಿರೀಟಿ- ಶ್ರೀಲೀಲಾ 'ಜ್ಯೂನಿಯರ್' ಸಿನಿಮಾ ಓಟಿಟಿಗೆ; ಮನೆಯಲ್ಲೇ ನೋಡಿ
ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟಿಸಿದ ಚೊಚ್ಚಲ ಸಿನಿಮಾ 'ಜ್ಯೂನಿಯರ್'. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಎರಡು ತಿಂಗಳ ಬಳಿಕ ಓಟಿಟಿಗೆ ಎಂಟ್ರಿ ಕೊಡ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರವನ್ನು ಸಾಯಿ ಕೊರಪಾಟಿ ನಿರ್ಮಾಣ ಮಾಡಿದ್ದರು.
ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿ 'ಜ್ಯೂನಿಯರ್' ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ದೇಶ್‌ಮುಖ್, ಸುಧಾರಾಣಿ, ಅಚ್ಯುತ್ ಕುಮಾರ್, ರಾವ್ ರಮೇಶ್, ಕುರಿ ಪ್ರತಾಪ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕನ್ನಡದಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡದಿದ್ದರೂ ತೆಲುಗಿನಲ್ಲಿ ಪ್ರೇಕ್ಷಕರ ಗಮನ ಸೆಳೆದಿತ್ತು. ದೇವಿಶ್ರೀ ಪ್ರಸಾದ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿತ್ತು.

ಮೊದಲ ಚಿತ್ರದಲ್ಲೇ ಡ್ಯಾನ್ಸ್ ಹಾಗೂ ಸ್ಟಂಟ್ಸ್‌ನಲ್ಲಿ ಕಿರೀಟಿ ಮೋಡಿ ಮಾಡಿದ್ದಾರೆ. 'ವೈರಲ್ ವಯ್ಯಾರಿ' ಸಾಂಗ್ ಸಖತ್ ಸದ್ದು ಮಾಡಿತ್ತು. ಕನ್ನಡದಲ್ಲಿ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಜೊತೆಗೆ 'ಜ್ಯೂನಿಯರ್' ತೆರೆಗೆ ಬಂದಿದ್ದ. ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ತಕ್ಕಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ವಿಫಲವಾಗಿತ್ತು. ಸದ್ಯ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.
ಕನ್ನಡದಲ್ಲಿ ಯಾವುದೇ ದೊಡ್ಡ ಓಟಿಟಿ ಸಂಸ್ಥೆಗಳು 'ಜ್ಯೂನಿಯರ್' ಚಿತ್ರದ ರೈಟ್ಸ್ ಕೊಂಡುಕೊಂಡಿಲ್ಲ. ಅಂತಿಮವಾಗಿ ನಮ್ಮ ಫ್ಲಿಕ್ಸ್ ಓಟಿಟಿ ಆಪ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲು ಸಜ್ಜಾಗುತ್ತಿದೆ.
ಸೆಪ್ಟೆಂಬರ್ 22ರಂದು ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿದೆ. ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತೆಲುಗು ವರ್ಷನ್ ರಿಲೀಸ್ ಆಗಲಿದೆ.
'ಜ್ಯೂನಿಯರ್' ಕಥೆ
ಕೊದಂಡಪಾಣಿ(ರವಿಚಂದ್ರನ್) ಪುತ್ರ ಅಭಿನವ್, ತಾಯಿ ಇಲ್ಲದೇ ತಂದೆ ಆಶ್ರಯದಲ್ಲೇ ಬೆಳೆದವನು. ತಂದೆಯ ಅತಿಯಾದ ಪ್ರೀತಿಯಿಂದ ಬೇಸತ್ತು ದೂರಾಗಿ ಇರಲು ಬಯಸುತ್ತಾನೆ. ತಾನು ಮಾಡುವ ಪ್ರತಿ ಕೆಲಸದಲ್ಲಿ ಹೊಸತನವನ್ನು ಹುಡುಕುವುದು ಅದಕ್ಕಾಗಿ ರಿಸ್ಕ್ ತೆಗೆದುಕೊಳ್ಳುವುದು ಅವನ ಗುಣ. ಇದೇ ಹಾದಿಯಲ್ಲಿ ಸ್ಫೂರ್ತಿ(ಶ್ರೀಲೀಲಾ) ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ.
ಬಳಿಕ ವಿಜಯಾ ಸೌಜನ್ಯ(ಜೆನಿಲಿಯಾ) ಕಂಪನಿಯಲ್ಲಿ ಅಭಿ ಕೆಲಸಕ್ಕೆ ಸೇರುತ್ತಾನೆ. ಮೊದಲ ನೋಟದಲ್ಲೇ ಅಭಿ ಬಗ್ಗೆ ವಿಜಯಾಗೆ ಅಸಮಾಧಾನ ಮೂಡುತ್ತದೆ. ಮುಂದೆ ಇದು ಪೈಪೋಟಿಯಾಗಿ ಬೆಳೆಯುತ್ತಾ ಹೋಗುತ್ತದೆ. ನಾನಾ, ನೀನಾ ಎನ್ನುವ ಹೋರಾಟ ಶುರುವಾಗುತ್ತದೆ. ಮುಂದೆ ವಿಜಯಾಳ ಬಗ್ಗೆ ಅಭಿಗೆ ಒಂದು ಅಚ್ಚರಿಯ ಸಂಗತಿ ಗೊತ್ತಾಗುತ್ತದೆ. ಅದು ಏನು? ಅಭಿಗೂ ವಿಜಯಾಗೂ ಇರುವ ಸಂಬಂಧ ಏನು? ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ.
ಹಾಡು, ಡ್ಯಾನ್ಸ್, ಫೈಟ್ ಎಲ್ಲವೂ ಪುಷ್ಕಳವಾಗಿ 'ಜ್ಯೂನಿಯರ್' ಚಿತ್ರದಲ್ಲಿದೆ. ಪ್ರತಿಫ್ರೇಮ್ ಅದ್ಧೂರಿತನದಿಂದ ಕೂಡಿದೆ. ಬಹಳ ಶ್ರೀಮಂತವಾದ ಚಿತ್ರದಲ್ಲಿ ಕಥೆ ಕೊಂಚ ಡಲ್ ಎನಿಸುತ್ತದೆ. ಸಿದ್ಧಸೂತ್ರಗಳಿಗೆ ಜೋತುಬಿದ್ದು ಕಥೆ ಪ್ರೇಕ್ಷಕರಿಗೆ ಅಷ್ಟೇನು ಕುತೂಹಲ ಉಳಿಸುವುದಿಲ್ಲ. ರವಿಚಂದ್ರನ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಚಿತ್ರದಲ್ಲಿದೆ. ಜೆನಿಲಿಯಾ ತೆರೆಮೇಲೆ ಸೊಗಸಾಗಿ ಮಿಂಚಿದ್ದಾರೆ. ಶ್ರೀಲೀಲಾ ಒಂದೆರಡು ದೃಶ್ಯಗಳು ಹಾಗೂ ಹಾಡಿಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.
ಒಟ್ಟಾರೆ ಜನಾರ್ಧನ ರೆಡ್ಡಿ ಅವರ ಪುತ್ರನನ್ನು ಮಾಸ್ ಹೀರೊ ಆಗಿ ಪರಿಚಯಬೇಕು ಎನ್ನುವ ಕಾರಣಕ್ಕೆ ಕಟ್ಟಿಕೊಟ್ಟಿರುವ ಕಮರ್ಷಿಯಲ್ ಸಿನಿಮಾ ಇದು. ಹಾಗಾಗಿ ಕಥೆಯಲ್ಲಿ ಹೆಚ್ಚು ಸ್ಕೋಪ್ ಅವರ ಪಾತ್ರಕ್ಕೆ ಸಿಕ್ಕಿದೆ.


Click it and Unblock the Notifications











