ಓಟಿಟಿಗೆ ಬಂತು ಸಂಗೀತಾ ಭಟ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕ್ಲಾಂತ, ಆದರೆ ಷರತ್ತು ಏನ್ಗೊತ್ತಾ..?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರ ನೋಡಲು ನೆಟ್‌ಫ್ಲಿಕ್ಸ್ , ಅಮೆಜಾನ್, ಜೀ 5 ಹಾಟ್ ಸ್ಟಾರ್ ಹೀಗೆ ಹತ್ತು ಹಲವು ಓಟಿಟಿ ವೇದಿಕೆಗಳಿವೆ.
ಆದರೆ.. ಹೀಗೆ ಇರುವ ಬಹುತೇಕ ಓಟಿಟಿಗಳು ಕನ್ನಡ ಚಿತ್ರಕ್ಕೆ ಮಣೆ ಹಾಕುವುದು ಕಡಿಮೆ. ಇರುವುದರಲ್ಲಿ ಜೀ 5 ಮತ್ತು ಅಮೆಜಾನ್ ಪ್ರೈಮ್‌ನಲ್ಲಿ ಆಗಾಗ ಕನ್ನಡ ಹೊಸ ಚಿತ್ರಗಳು ಪ್ರಸಾರವಾಗುತ್ತವೆ. ಅಲ್ಲಿಯೂ ಕೂಡ ಸ್ಟಾರ್ ವ್ಯಾಲ್ಯೂ ಚಿತ್ರಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತೆ. ಚೂರು ಪಾರು ಪ್ರಚಾರವನ್ನು ಮಾಡಿ ಬಿಡುಗಡೆ ಮಾಡಲಾಗುತ್ತೆ. ಮಿಕ್ಕಂತೆ ಹೊಸಬರ ಚಿತ್ರ ಇದ್ದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗಿದ್ದು ಕೂಡ ಬಹುತೇಕರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಕ್ಲಾಂತ ಸದ್ಯದ ಉದಾಹರಣೆ.

ಹೌದು, ಕ್ಲಾಂತ.. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ. ತುಳು ಚಿತ್ರ ದಗಲ್ ಬಾಜಿಲು ಮೂಲಕ ಚಿತ್ರರಂಗಕ್ಕೆ ಬಂದ ವಿಘ್ನೇಶ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರೆ, ಕನ್ನಡದ ಮೋಹಕ ಚೆಲುವೆ ಸಂಗೀತಾ ಭಟ್ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರಂಗನ್ ಸ್ಟೈಲ್, ದಗಲು ಬಾಜಿ ಸೇರಿ ಬಗೆ ಬಗೆಯ ಚಿತ್ರ ನಿರ್ದೇಶಿಸಿರುವ ವೈಭವ್ ಪ್ರಶಾಂತ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ದಟ್ಟಾರಣಕ್ಕೆ ತೆರಳುವ ಪ್ರಣಯ ಪಕ್ಷಿಗಳ ಮೇಲೆ ಗ್ಯಾಂಗ್ ಒಂದು ಅಟ್ಯಾಕ್ ಮಾಡಿದಾಗ ಆ ದಾಳಿಯ ವಿರುದ್ಧ ಜೋಡಿಯ ಹೋರಾಟದ ಕಥೆಯನ್ನು ಹೇಳುವ ಪ್ರಯತ್ನವನ್ನು ಮಾಡಿದ್ದರು.
ವೈಭವ್ ಪ್ರಶಾಂತ್ ಈ ಪ್ರಯತ್ನ ಆಗ ಕೆಲವರಿಗೆ ಇಷ್ಟವಾಗಿತ್ತು. ಕೆಲವರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೂ ಚಿತ್ರಮಂದಿರಕ್ಕಿಂತ ಚಿತ್ರವನ್ನು ಓಟಿಟಿಯಲ್ಲಿ ನೋಡಿದರೆ ಆಯ್ತು ಎಂದು ಕೂಡ ಅನೇಕರು ಈ ಚಿತ್ರ ಬಂದಾಗ ಚಿತ್ರಮಂದಿರದಿಂದ ಅಂತರವನ್ನು ಕಾಪಾಡಿಕೊಂಡಿದ್ದರು. ಆದರೆ, ಚಿತ್ರ ಇಲ್ಲಿಯವರೆಗೆ ಓಟಿಟಿ ಅಂಗಳಕ್ಕೆ ಬಂದಿರಲಿಲ್ಲ. ಆದರೆ ಈಗ ಈ ಚಿತ್ರ ಬಿಡುಗಡೆಯಾಗಿ ಒಂಬತ್ತು ತಿಂಗಳ ನಂತರ ಕ್ಲಾಂತ ಅಮೆಜಾನ್ ಪ್ರೈಮ್‌ಗೆ ಬಂದಿದೆ. ಸದ್ದು ಗದ್ದಲ ಮಾಡದೇ ಪ್ರಸಾರವಾಗುತ್ತಿದೆ.
ಇನ್ನೂ ಚಿತ್ರ ಅಮೆಜಾನ್‌ಗೆ ಬಂದಿದೆಯಾದರೂ ಈ ಚಿತ್ರವನ್ನು ನೋಡಲು 99 ರೂಪಾಯಿಯನ್ನು ನೀಡಬೇಕು. ಇದು ಕೆಲವರಿಗೆ ಬೇಸರವನ್ನು ಉಂಟು ಮಾಡಿದೆ. ಸಬ್ ಸ್ಕ್ರಿಪ್ಷನ್ ಪಡೆಯುವುದಲ್ಲದೇ ಮತ್ತೆ ಚಿತ್ರ ನೋಡಲು 99 ರೂಪಾಯಿಯನ್ನು ನೀಡಿ ಎಂದರೆ ಹೇಗೆ ಎನ್ನುವ ಪ್ರಶ್ನೆಯನ್ನು ಕೂಡ ಹುಟ್ಟು ಹಾಕಿದೆ. ಮಿಕ್ಕಂತೆ ಕುಕ್ಕೆ ಸುಬ್ರಹ್ಮಣ್ಯ, ಗುಂಡ್ಯ, ಕಳಸ ಸುತ್ತ ಮುತ್ತ ಚಿತ್ರೀಕರಣಗೊಂಡ ಕ್ಲಾಂತ ಚಿತ್ರದಲ್ಲಿ ಶೋಭರಾಜ್, ವೀಣಾ ಸುಂದರ್, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್ ಜೈನ್, ಸ್ವಪ್ನ, ತಿಮ್ಮಪ್ಪ ಕುಲಾಲ್, ರಾಘವೇಂದ್ರ ಕಾರಂತ್, ಪಂಚಮಿ ವಾಮಂಜೂರ್, ವಾಮದೇವ ಪುಣಿಂಚತ್ತಾಯ, ಹೀಗೆ ಅನೇಕರು ಇದ್ದಾರೆ. ಎಸ್.ಪಿ.ಚಂದ್ರಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉದಯ್ ಅಮ್ಮಣ್ಣಾಯ ಚಿತ್ರಕ್ಕೆ ಹಣವನ್ನು ಹೂಡಿದ್ದಾರೆ. ಇನ್ನೂ ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಸದ್ಯಕ್ಕೆ ಕ್ಲಾಂತ ಚಿತ್ರಕ್ಕೆ 99 ರೂಪಾಯಿ ದರವನ್ನು ಅಮೆಜಾನ್ ಪ್ರೈಮ್ ನಿಗಧಿ ಮಾಡಿದ್ದು, ಆಸಕ್ತ ಚಿತ್ರಪ್ರೇಮಿಗಳು ಚಿತ್ರವನ್ನು ನೋಡಬಹುದು.


Click it and Unblock the Notifications











