'ಕಾಫಿ ವಿತ್ ಕರಣ್ ಶೋ'ನ ಸೀಸನ್ 7 ರಲ್ಲಿ 'ಪುಷ್ಪ' ಜೋಡಿ ಕಮಾಲ್?
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಇತ್ತೀಚಿಗಷ್ಟೇ 'ಕಾಫಿ ವಿತ್ ಕರಣ್ ಶೋ' ಪ್ರಸಾರವಾಗಲ್ಲ ಅಂತ ಹೇಳಿ ಶಾಕ್ ಕೊಟ್ಟಿದ್ದರು. ಆ ಬಳಿಕ ಟಿವಿಯಲ್ಲಿ ಪ್ರಸಾರವಾಗಲ್ಲ, ಬದಲಾಗಿ ಒಟಿಟಿಯಲ್ಲಿ ಪ್ರಸಾರವಾಗುತ್ತೆ ಅಂತ ಹೇಳಿ ಅಭಿಮಾನಿಗಳಿಗೆ ಚಮಕ್ ಕೊಟ್ಟಿದ್ದರು. ಕಳೆದ ಆರು ಆವೃತ್ತಿಗಳು ಟಿವಿಯಲ್ಲಿ ಪ್ರಸಾರವಾಗಿದ್ದು, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಈಗ ಒಟಿಟಯಲ್ಲಿ ಸೀಸನ್ 7 ಪ್ರಸಾರವಾಗಲಿದ್ದು, ಈ ಬಾರಿಯ 7ನೇ ಸಂಚಿಕೆಯಲ್ಲಿ ಯಾವ ಸೆಲೆಬ್ರೆಟಿಗಳು ಬರಬಹುದು ಎಂಬ ಚರ್ಚೆಗಳು ಈಗಿನಿಂದಲೇ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ.
ಸದ್ಯ ಈ ಎಲ್ಲ ಗುಸು ಗುಸು, ಪಿಸು ಪಿಸು ಮಾತುಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಇದ್ದು, ಈ ಬಾರಿಯ ಸೀಸನ್‌ನಲ್ಲಿ ಟಾಲಿವುಡ್ ಸ್ಟಾರ್‌ಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಾರಿ ಸೀಸನ್‌ನಲ್ಲಿ ಹೆಚ್ಚಾಗಿ ಟಾಲಿವುಡ್ ನಟ ನಟಿಯರನ್ನೇ ಕರೆತರುವ ಪ್ಲಾನ್ ನಡೆಯುತ್ತಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಲಿಸ್ಟ್‌ನಲ್ಲಿ ಈಗ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬರಬಹುದು. ಕರಣ್ ಜೋಹರ್ ಕೇಳುವ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಬಹುದು ಎಂಬ ಮಾತುಗಳು ಶುರುವಾಗಿದೆ.
'ಪುಷ್ಪ' ಬಳಿಕ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಮತ್ತೆ ಹೊಸ ಶೋನಲ್ಲಿ ಭಾಗವಹಿಸುತ್ತಿರುವುದು ಎಲ್ಲರಲ್ಲೂ ಕುತುಹೂಲವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಆರು ಆವೃತ್ತಿ ಮಾಡಿರುವ 'ಕಾಫಿ ವಿತ್ ಕರಣ್ ಶೋ' ಹಲವು ಬಾಲಿವುಡ್ ಸ್ಟಾರ್‌ಗಳ ಜೊತೆ ಮಾತನಾಡಿ ಅವರ ಜೀವನ ಶೈಲಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಸದ್ಯ ಈಗ ಬಾಲಿವುಡ್ ಬಿಟ್ಟು ಟಾಲಿವುಡ್ ನಟ ನಟಿಯರನ್ನು ಕರೆತರುವ ಮೂಲಕ ಜನರಿಗೆ ಮತ್ತಷ್ಟು ಮನರಂಜನೆಯನ್ನ ನೀಡಲು 'ಕಾಫಿ ವಿತ್ ಕರಣ್ ಶೋ' ತಂಡ ಮುಂದಾಗಿದೆ.

ಕರಣ್ ಶೋನಲ್ಲಿ ಭಾಗಿಯಾಗಲು ಪುಷ್ಪ ಜೋಡಿ ಉತ್ಸುಕ
ಈಗಾಗಲೇ 'ಕಾಫಿ ವಿತ್ ಕರಣ್ ಶೋ' ತಂಡ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದ್ದು, ಇಬ್ಬರು ತಾರೆಯರು ಕೂಡ ಶೋನಲ್ಲಿ ಭಾಗವಹಿಸಲು ಬಹಳ ಉತ್ಸುಕತೆಯನ್ನು ತೋರಿದ್ದಾರೆ. ಇತ್ತೀಚಿಗಷ್ಟೇ ರಿಲೀಸ್ ಆದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಒಟ್ಟಾಗಿ ನಟಿಸಿದ್ದರು. ಅಲ್ಲದೆ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೀಗಾಗಿ ಈ ಸ್ಟಾರ್ ನಟ ನಟಿಯರನ್ನೇ ಸೀಸನ್ 7ರ ಮೊದಲ ಸೆಲೆಬ್ರೆಟಿಯಾಗಿ ಕರೆತರಲು ತಂಡ ನಿರ್ಧರಿಸಿದೆ. ಸದ್ಯ ವೀಕ್ಷಕರೂ ಸಹ 'ಪುಷ್ಪ' ಜೋಡಿ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸುವುದನ್ನು ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ.

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ
'ಪುಷ್ಪ' ಸಕ್ಸಸ್ ಬಳಿಕ ಅಲ್ಲು ಅರ್ಜುನ್‌ಗೆ ಪ್ಯಾನ್ ಇಂಡಿಯಾ ಮೂವಿಗಳ ಆಫರ್‌ಗಳು ಕೂಡ ಹೆಚ್ಚಾಗಿದೆ. ಇತ್ತ ರಶ್ಮಿಕಾ ಕೂಡ ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಂಜು ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ 'ಗುಡ್ ಬಾಯ್' ಹಾಗೂ ರಣಬೀರ್ ಕಪೂರ್ ಜೊತೆ 'ಎನಿಮಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಇಬ್ಬರು ಸ್ಟಾರ್‌ಗಳು ಈಗ ಟ್ರೆಂಡ್ ಆಗಿದ್ದು, ಈ ಬಾರಿಯ ಸೀಸನ್‌ನಲ್ಲಿ ಇವರಿಬ್ಬರನ್ನು ಕರೆಸಲು 'ಕಾಫಿ ವಿತ್ ಕರಣ್' ಶೋ ನಿರ್ಧರಿಸಿದೆ.

ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್
'ಕಾಫಿ ವಿತ್ ಕರಣ್ ಶೋ' ತಂಡ ಈ ಬಾರಿ ಹೆಚ್ಚಾಗಿ ಟಾಲಿವುಡ್ ಸ್ಟಾರ್ ಸೆಲೆಬ್ರೆಟಿಗಳನ್ನು ಕರೆತರುವ ಪ್ಲಾನ್ ಮಾಡಿಕೊಂಡಿದೆ. ಏಕೆಂದರೆ ದಕ್ಷಿಣ ಭಾರತದ ಸಿನಿಮಾಗಳು ಇತ್ತೀಚಿಗೆ ಬಾಲಿವುಡ್ ಸಿನಿಮಾಗಳನ್ನೇ ಮಕಾಡೆ ಮಲಗಿಸಿ ಮುನ್ನುಗುತ್ತಿದೆ. 'ಪುಷ್ಟ', 'RRR', 'ಬಾಹುಬಲಿ', 'ಬಾಹುಬಲಿ 2', 'ಕೆಜಿಎಫ್', 'ಕೆಜಿಎಫ್ 2' ಸಿನಿಮಾಗಳು ಬಾಕ್ಸಾಫೀಸ್ ಧೂಳೆಬ್ಬಿಸಿವೆ. ಹೀಗಾಗಿ ಇದೆಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು 'ಕಾಫಿ ವಿತ್ ಕರಣ್ ಶೋ' ತಂಡ ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳಯುವ ಸಲುವಾಗಿ ದಕ್ಷಿಣ ಭಾರತದ ಸ್ಟಾರ್ ನಟ ನಟಿಯರನ್ನು ಕಾರ್ಯಕ್ರಮಕ್ಕೆ ತರಲು ಪ್ಲಾನ್ ಮಾಡಿಕೊಂಡಿದೆ.

ಹಿಂದಿ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ದಕ್ಷಿಣ ಭಾರತದ ಚಿತ್ರಗಳೇ ಮುಂದು
ಇತ್ತೀಚಿಗೆ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಹಿಂದೆ ಸರಿಸಿ ಅಬ್ಬರಿಸುತ್ತಿವೆ. ಅದರಲ್ಲೂ ಭಾರತೀಯ ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಹೀಗಾಗಿ ಇಂತಹ ಸಿನಿಮಾಗಳ ಮಾರ್ಕೆಟ್ ಕೂಡ ಹೆಚ್ಚಾಗಿದ್ದು, ಎಲ್ಲಾ ದಾಖಲೆಗಳನ್ನು ಮುರಿದು ಬಾಕ್ಸಾಫೀಸ್ ಉಡೀಸ್ ಮಾಡ್ತಿದೆ. ಸದ್ಯ 'ಕೆಜಿಎಫ್ 2' ಸಿನಿಮಾ ಕೂಡ ಬಾಲಿವುಡ್‌ನ ಬಿಗ್ ಸ್ಟಾರ್‌ಗಳ ಸಿನಿಮಾಗಳನ್ನೇ ಧೂಳಿಪಟ ಮಾಡಿ ದಾಖಲೆ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಬಾಲಿವುಡ್‌ನ ಹಿಂದಿ ವರ್ಷನ್ 'ಕೆಜಿಎಫ್ 2' ಸಿನಿಮಾ 400 ಕೋಟಿ ಸಮೀಪಿಸುತ್ತಿದೆ.


Click it and Unblock the Notifications











