Kothalavadi OTT; ಯಶ್ ತಾಯಿ ಪುಷ್ಪಾ ನಿರ್ಮಾಣದ 'ಕೊತ್ತಲವಾಡಿ' ಓಟಿಟಿಗೆ; ಮಿಸ್ ಮಾಡ್ಬೇಡಿ
ನಿರೀಕ್ಷೆ ಹುಟ್ಟುಹಾಕುವ ಸಿನಿಮಾಗಳೆಲ್ಲಾ ಗೆಲ್ಲಲ್ಲ. ಯಾವುದೇ ಸಿನಿಮಾ ಭವಿಷ್ಯ ನಿರ್ಧಾರವಾಗುವುದು ತೆರೆಗೆ ಬಂದಮೇಲೆ. ಕೆಲ ಸಿನಿಮಾಗಳು ಭರ್ಜರಿ ಪ್ರಚಾರದಿಂದ ಸದ್ದು ಮಾಡಿದರೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಿರಾಸೆ ಮೂಡಿಸುತ್ತವೆ. ಯಶ್ ತಾಯಿ ಪುಷ್ಪಾ ನಿರ್ಮಾಣದ 'ಕೊತ್ತಲವಾಡಿ' ಚಿತ್ರ ಕೂಡ ಗೆಲ್ಲುವ ಭರವಸೆ ಮೂಡಿಸಿತ್ತು. ಆದರೆ ಅದು ನಿಜವಾಗಲಿಲ್ಲ.
ನಟ ಯಶ್ ಈಗಾಗಲೇ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆರಂಭಿಸಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಇತ್ತ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಕೂಡ ಪಿಎ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ವಿತರಣೆಗೂ ಕೈ ಹಾಕಿದ್ದಾರೆ.

ಪಿಎ ಪ್ರೊಡಕ್ಷನ್ಸ್ ಸಂಸ್ಥೆಯ ಚೊಚ್ಚಲ ಸಿನಿಮಾ 'ಕೊತ್ತಲವಾಡಿ'. ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಹಳ್ಳಿ ಹಿನ್ನಲೆಯ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಹಾಗೂ ರಾಜೇಶ್ ನಟರಂಗ ಕೂಡ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆಗಸ್ಟ್ 1ರಂದು ಸಿನಿಮಾ ತೆರೆಗೆ ಬಂದಿತ್ತು. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಆದರೆ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಶ್ರೀರಾಜ್ ಎಂಬುವವರು 'ಕೊತ್ತಲವಾಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ವಿಕಾಸ್ ವಸಿಷ್ಠ ಸಂಗೀತ, ಕಾರ್ತಿಕ್ ಛಾಯಾಗ್ರಹಣ ಚಿತ್ರಕ್ಕಿದೆ. ಕಾವೇರಿ ನದಿಯ ತಟದ 'ಕೊತ್ತಲವಾಡಿ' ಎಂಬ ಊರು. ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥೆ. ಅನಾಥ ಯುವ ಮೋಹನ. ಗುಜರಿ ವ್ಯಾಪಾರಿ ಬಾಬು(ಗೋಪಾಲಕೃಷ್ಣ ದೇಶಪಾಂಡೆ), ಪೊಲೀಸ್ ಅಧಿಕಾರಿ ಎಸ್‌ಪಿ ಪರಶುರಾಮ್(ರಾಜೇಶ್ ನಟರಂಗ) ಈ ಮೂರು ಪಾತ್ರಗಳ ನಡುವೆ ಕಥೆ ಸಾಗುತ್ತದೆ.

ಮೋಹನ ಪ್ರೀತಿಸುವ ಯುವತಿ ಮಂಜಿ ಪಾತ್ರದಲ್ಲಿ ಕಾವ್ಯ ಮಿಂಚಿದ್ದಾರೆ. ಒಂದ್ಕಡೆ ಗುಜರಿ ಬಾಬುಗೆ ಶಾಸಕನಾಗಿ ಅಧಿಕಾರ ಹಿಡಿಯುವ ಹಪಾಹಪಿ, ಮರಳು ಮಾಫಿಯಾಗೆ ಬ್ರೇಕ್ ಹಾಕಲು ಹೊರಡುವ ಎಸ್‌ಪಿ ಪರಶುರಾಮ್, ಹೀಗೆ ಕಥೆ ಸುತ್ತತ್ತದೆ. ಮೇಲ್ನೋಟಕ್ಕೆ ಕಥೆ ಚೆನ್ನಾಗಿದೆ ಎನಿಸಿದರೂ ಚಿತ್ರಕಥೆ ಪೇಲವ ಎನಿಸುತ್ತದೆ. ಲಾಜಿಕ್ ಇಲ್ಲದ ಕೆಲ ಸನ್ನಿವೇಶಗಳು ಬೇಸರ ಮೂಡಿಸುತ್ತದೆ. ಆದರೆ ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಅಭಿನಯದಿಂದ ಮೋಡಿ ಮಾಡುತ್ತಾರೆ.
'ಸು ಫ್ರಮ್ ಸೋ', 'ಮಹಾವೀರ್ ನರಸಿಂಹ' ಹಾಗೂ 'ಎಕ್ಕ' ಸಿನಿಮಾಗಳ ನಡುವೆ 'ಕೊತ್ತಲವಾಡಿ' ಸಿನಿಮಾ ತೆರೆಗೆ ಬಂದಿತ್ತು. ಅದು ಕೂಡ ಸಿನಿಮಾ ಭವಿಷ್ಯದ ಮೇಲೆ ಪರಿಣಾಮ ಬೀರಿತ್ತು. ದೊಡ್ಡ ಸಿನಿಮಾಗಳ ನಡುವೆ ಹೊಸಬರ ಸಿನಿಮಾ ಸೋತು ಹೋಗಿತ್ತು. "ಕಾರ್ತಿಕ್ ನಮಗೆ ಸರಿಯಾದ ಥಿಯೇಟರ್ ಕೊಡದೇ ಸಮಸ್ಯೆ ಮಾಡಿದ" ಎಂದು ಸ್ವತಃ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಆರೋಪ ಮಾಡಿದ್ದಾರೆ.
ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸೆಪ್ಟೆಂಬರ್ 5ರಂದು(ಇಂದು ಮಧ್ಯರಾತ್ರಿ) 'ಕೊತ್ತಲವಾಡಿ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡದಲ್ಲಿ ಸಿನಿಮಾಗಳು ಓಟಿಟಿಗೆ ಬರುವುದೇ ಅಪರೂಪ ಎನ್ನುವಂತಾಗಿದೆ. ಹಾಗಾಗಿ ವೀಕೆಂಡ್ ಮನೆಯಲ್ಲೇ ಕೂತು ಈ ಸಿನಿಮಾ ನೋಡಬಹುದು. ಇನ್ನು ಮೊದಲ ಸಿನಿಮಾ ಬಿಡುಗಡೆಗೂ ಮುನ್ನ ಪಿಎ ಪ್ರೊಡಕ್ಷನ್ಸ್ ಸಂಸ್ಥೆ ಎರಡನೇ ಚಿತ್ರಕ್ಕೆ ತಯಾರಿ ನಡೆಸಿದೆ. ಶ್ರೀರಾಜ್ ನಿರ್ದೇಶನದಲ್ಲಿ ಶರಣ್ ಹೀರೊ ಆಗಿ ಸಿನಿಮಾ ಪ್ರಯತ್ನ ನಡೀತಿದೆ.


Click it and Unblock the Notifications











