Kranti OTT : 28 ದಿನಕ್ಕೆ ಓಟಿಟಿಗೆ ಕ್ರಾಂತಿ; ಜೇಮ್ಸ್, ವಿಕ್ರಾಂತ್ ರೋಣ, ಕೆಜಿಎಫ್, ವೇದ ಎಷ್ಟು ದಿನಕ್ಕೆ ಬಂದಿದ್ವು?
ಸದ್ಯ ನಾವೆಲ್ಲರೂ ಓಟಿಟಿ ಜಮಾನದಲ್ಲಿದ್ದೇವೆ. ಈ ಹಿಂದೆ ಚಿತ್ರಗಳನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ತೆರಳುತ್ತಿದ್ದ ಹಲವಾರು ಸಿನಿ ರಸಿಕರು ಈಗ ಚಿತ್ರಗಳು ಓಟಿಟಿಗೆ ಬಂದ ನಂತರ ವೀಕ್ಷಿಸುವುದನ್ನು ರೂಢಿ ಮಾಡಿಕೊಂಡುಬಿಟ್ಟಿದ್ದಾರೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ಯಾವ ಚಿತ್ರವಾದರೂ ಸರಿ, ಮುಂದಿನ ಮೂರ್ನಾಲ್ಕು ವಾರಗಳಲ್ಲಿ ಓಟಿಟಿಗೆ ಬರುತ್ತವೆ, ನೋಡಿದರಾಯಿತು ಬಿಡಿ ಎನ್ನುವ ದೊಡ್ಡ ಸಿನಿ ರಸಿಕರ ವರ್ಗವೇ ಇದೆ.
ಇನ್ನು ಈ ಹಿಂದೆ ನೂರು ದಿನಗಳ ಯಶಸ್ವಿ ಪ್ರದರ್ಶನ ಕಂಡ ಚಿತ್ರ ಗೆದ್ದ ಹಾಗೆ ಎಂಬ ಲೆಕ್ಕಾಚಾರವಿತ್ತು. ಆದರೆ ಈಗ ಹಾಗಿಲ್ಲ, ಚಿತ್ರಮಂದಿರಗಳಲ್ಲಿ ಹೆಚ್ಚು ಕೋಟಿ ಗಳಿಸಿದರೆ ಆ ಚಿತ್ರ ಗೆದ್ದಂತೆ. ಚಿತ್ರ ಆಡಿಯೊ, ಟಿವಿ ಹಾಗೂ ಓಟಿಟಿ ಹಕ್ಕುಗಳಿಂದ ಎಷ್ಟು ಬ್ಯುಸಿನೆಸ್ ಮಾಡಿದೆ ಎಂಬುದನ್ನು ಲೆಕ್ಕ ಹಾಕಿ ಚಿತ್ರಕ್ಕೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಅಳೆದುಬಿಡ್ತಾರೆ.
ಹೀಗೆ ದಿನದಿಂದ ದಿನಕ್ಕೆ ಪ್ರಾಮುಖ್ಯತೆಯನ್ನು ಏರಿಸಿಕೊಳ್ಳುತ್ತಿರುವ ಈ ಓಟಿಟಿಗೆ ಇಂಡಸ್ಟ್ರಿ ಮಂದಿ ಸಹ ಹೊಂದಿಕೊಂಡುಬಿಟ್ಟಿದ್ದಾರೆ. ಅದೆಷ್ಟೋ ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ತೆರೆ ಕಾಣುವ ಚಿತ್ರಗಳನ್ನು ಇಂತಿಷ್ಟು ದಿನಗಳ ನಂತರ ಓಟಿಟಿಯಲ್ಲಿ ಸ್ಟ್ರೀಮ್ ಮಾಡುವುದಾಗಿ ಓಟಿಟಿ ಅಪ್ಲಿಕೇಶನ್‌ನವರು ಚಿತ್ರತಂಡದ ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ. ಚಿತ್ರ ಚಿತ್ರಮಂದಿರದಲ್ಲಿ ಒಳ್ಳೆಯ ಗಳಿಕೆ ಮಾಡಿದರೆ ನಿಗದಿನ ದಿನಕ್ಕಿಂತ ತುಸು ನಿಧಾನವಾಗಿ ಆ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕಾಂತಾರ. ಇನ್ನು ಸದ್ಯ ಕ್ರಾಂತಿ ಸಿನಿಮಾದ ಓಟಿಟಿ ಬಿಡುಗಡೆ ದಿನಾಂಕವೂ ಸಹ ಘೋಷಣೆಯಾಗಿದ್ದು, ಚಿತ್ರ ಫೆಬ್ರವರಿ 23ರಿಂದ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗಲಿದೆ. ಕಳೆದ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡಿದ್ದ ಕ್ರಾಂತಿ ಚಿತ್ರ ತಿಂಗಳಿಗೂ ಮುನ್ನವೇ ಓಟಿಟಿಗೆ ಬರುತ್ತಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕ್ರಾಂತಿ 28 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಬಳಿಕ ಓಟಿಟಿಗೆ ಬರುತ್ತಿದೆ. ಇನ್ನು ಕನ್ನಡದ ಸ್ಟಾರ್ ನಟರ ಕೊನೆಯ ಚಿತ್ರಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಎಷ್ಟು ದಿನಗಳ ಬಳಿಕ ಓಟಿಟಿಗೆ ಲಗ್ಗೆ ಇಟ್ಟವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ವಿಕ್ರಾಂತ್ ರೋಣ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರವಾಗಿದ್ದ ವಿಕ್ರಾಂತ್ ರೋಣ ಕಳೆದ ವರ್ಷದ ಜುಲೈ 22ರಂದು ಭರ್ಜರಿಯಾಗಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಿತ್ತು. ಈ ಚಿತ್ರ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 2ರಂದು ಜೀ 5ನಲ್ಲಿ ಸ್ಟ್ರೀಮ್ ಆಗಿತ್ತು. ಈ ಮೂಲಕ ಚಿತ್ರಮಂದಿರಗಳಲ್ಲಿ 37 ದಿನಗಳ ಪ್ರದರ್ಶನ ಕಂಡ ಬಳಿಕ ವಿಕ್ರಾಂತ್ ರೋಣ ಓಟಿಟಿಗೆ ಲಗ್ಗೆ ಇಟ್ಟಿತ್ತು.

ಕೆಜಿಎಫ್ ಚಾಪ್ಟರ್ 2
ಕಳೆದ ವರ್ಷ ಬಿಡುಗಡೆಗೊಂಡು ಕನ್ನಡದ ಇಂಡಸ್ಟ್ರಿ ಹಿಟ್ ಆಗಿ ಹಾಗೂ ಕಳೆದ ವರ್ಷ ಅತಿಹೆಚ್ಚು ಗಳಿಸಿದ ಭಾರತದ ಚಿತ್ರ ಎಂಬ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಜೂನ್ 3ರಂದು ಓಟಿಟಿಗೆ ಬಂದಿತ್ತು. ಈ ಮೂಲಕ ಸರಿಯಾಗಿ 50 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕೆಜಿಎಫ್ ಚಾಪ್ಟರ್ 2 ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು.

ಜೇಮ್ಸ್
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಕಳೆದ ವರ್ಷ ಮಾರ್ಚ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿತ್ತು. ನೂರು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾದ ಈ ಚಿತ್ರ ಏಪ್ರಿಲ್ 14ರಂದು ಓಟಿಟಿಗೆ ಲಗ್ಗೆ ಇಟ್ಟಿತ್ತು. ಅಂದರೆ ಚಿತ್ರಮಂದಿರದಲ್ಲಿ 28 ದಿನಗಳ ಕಾಲ ಪ್ರದರ್ಶನಗೊಂಡ ಬಳಿಕ ಜೇಮ್ಸ್ ಸೋನಿ ಲಿವ್‌ನಲ್ಲಿ ಬಿಡುಗಡೆಗೊಂಡಿತ್ತು.

ವೇದ
ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ವೇದ ಚಿತ್ರ ಕಳೆದ ವರ್ಷದ ಡಿಸೆಂಬರ್ ತಿಂಗಳ 23ರಂದು ಬಿಡುಗಡೆಗೊಂಡಿತ್ತು. ಈ ಚಿತ್ರ ಫೆಬ್ರವರಿ 10ರಿಂದ ಜೀ 5 ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗ್ತಿದೆ. ಈ ಮೂಲಕ 49 ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಬಳಿಕ ವೇದ ಚಿತ್ರ ಓಟಿಟಿಗೆ ಬಂದಿತ್ತು.


Click it and Unblock the Notifications











