Krishnam Pranaya Sakhi OTT: ಸೂಪರ್ ಹಿಟ್ 'ಕೃಷ್ಣಂ ಪ್ರಣಯ ಸಖಿ' ಓಟಿಟಿ ಸ್ಟ್ರೀಮಿಂಗ್ ಎಲ್ಲಿ? ಯಾವಾಗ?
ನಿಧಾನವಾಗಿ ಕನ್ನಡ ಸಿನಿಮಾಗಳು ಸದ್ದು ಮಾಡಲು ಆರಂಭಿಸಿವೆ. ಆಗಸ್ಟ್ 9ಕ್ಕೆ ತೆರೆಕಂಡ 'ಭೀಮ' ಭರ್ಜರಿ ಸಕ್ಸಸ್ ಬೆನ್ನಲ್ಲೇ ಬಂದ 'ಕೃಷ್ಣಂ ಪ್ರಣಯ ಸಖಿ' ಕೂಡ ಗೆಲುವಿನ ಓಟ ಮುಂದುವರೆಸಿದೆ. 6ನೇ ವಾರವೂ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಗಣೇಶ ಹಬ್ಬದ ಸಂಭ್ರಮದಲ್ಲಿ ಬಂದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಕ್ಕೂ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೊಸಬರ 'ಶಾಲಿವಾಹನ ಶಕೆ' ಕೂಡ ಪ್ರೇಕ್ಷಕರನ್ನು ನಿಧಾನವಾಗಿ ಸೆಳೆಯುತ್ತಿದೆ. ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕರು ಕೈಬಿಡಲ್ಲ ಎನ್ನುವುದು ಸಾಬೀತಾಗುತ್ತಿದೆ. ಆದರೆ ಸ್ಟಾರ್ ನಟರ ಚಿತ್ರಗಳಿಗೆ ಸಿಗುವ ಪ್ರತಿಕ್ರಿಯೆ ಎಲ್ಲಾ ಚಿತ್ರಗಳಿಗೂ ಸಿಗುತ್ತಿಲ್ಲ.

ಓಟಿಟಿ ಟ್ರೆಂಡ್ ಶುರುವಾದ ಬಳಿಕ ಕನ್ನಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಮೀನಾಮೇಷ ಎಣಿಸುವಂತಾಗಿದೆ. ದೊಡ್ಡ ಸಿನಿಮಾಗಳು 20 ದಿನಕ್ಕೆಲ್ಲಾ ಓಟಿಟಿಗೆ ಬರ್ತಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ 'ಭೀಮ' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಬಿಡುಗಡೆಗೂ ಮುನ್ನ ಡಿಜಿಟಲ್ ರೈಟ್ಸ್ ಕೊಂಡುಕೊಳ್ಳಲು ಯಾರು ಮುಂದೆ ಬರಲಿಲ್ಲ. ಆದರೆ ಸಿನಿಮಾ ತೆರೆಕಂಡ 25 ದಿನಕ್ಕೆ ಅಮೇಜಾನ್ ಪ್ರೈಂಗೆ ಬಂದುಬಿಟ್ಟಿತ್ತು.
ಡ್ರಗ್ಸ್, ಗಾಂಜಾ ದಂಧೆಯ ಸುತ್ತಾ 'ಭೀಮ' ಸಿನಿಮಾ ಕಥೆ ಸುತ್ತಿತ್ತು. ಒಂದೊಳ್ಳೆ ಸಂದೇಶ ಹೊತ್ತು ಬಂದಿದ್ದ ಚಿತ್ರ ಮಾಸ್ ಪ್ರೇಕ್ಷಕರ ಮನಗೆದ್ದಿತ್ತು. ಆದರೆ 25 ದಿನಕ್ಕೆ ಓಟಿಟಿಗೆ ಬಂದಿದ್ದು ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಇಷ್ಟು ಬೇಗ ಓಟಿಟಿ ಸ್ಟ್ರೀಮಿಂಗ್ ಮಾಡಿದ್ದು ಸರಿಯಲ್ಲ ಎಂದು ಕೆಲವರ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಓಟಿಟಿ ರಿಲೀಸ್ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ.
ಶ್ರೀನಿವಾಸ್ ರಾಜು ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನದಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಿಂದೆ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕರು ಈ ಬಾರಿ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ತೆರೆಗೆ ತಂದು ಗೆದ್ದು ಬೀಗಿದ್ದಾರೆ.

'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ಮಿಂಚಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್, ಶಶಿಕುಮಾರ್, ಶ್ರುತಿ ಸೇರಿ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿದೆ. ಸಿನಿಮಾ ಮೊದಲ 2 ವಾರಕ್ಕೆ 15 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು. ಸದ್ಯ ಗಳಿಕೆ 20 ಕೋಟಿ ರೂ. ಗಡಿ ದಾಟಿರುವ ಅಂದಾಜಿದೆ.
ಬಹಳ ದಿನಗಳ ನಂತರ ಗಣೇಶ್ ಪ್ರೇಕ್ಷಕರನ್ನು ರಂಜಿಸಿ ಗೆದ್ದಿದ್ದಾರೆ. ಒಂದೊಳ್ಳೆ ಬ್ರೇಕ್ ಸಿಕ್ಕಂತಾಗಿದೆ. ಶ್ರೀಮಂತ ಮನೆತನದ ಯುವಕ ಕೃಷ್ಣ(ಗಣೇಶ್). ಅನಾಥಾಶ್ರಮದ ಯುವತಿ ಪ್ರಣಯ (ಮಾಳವಿಕಾ ನಾಯಕ್) ಮೇಲೆ ಆತನಿಗೆ ಲವ್ ಆಗುತ್ತದೆ. ತನ್ನ ಪ್ರೀತಿ ಪಡೆಯಲು ಕೃಷ್ಣ ಹಾಕುವ ವೇಷ ಎಂಥದ್ದು? ಮುಂದೆ ಇದು ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಒನ್‌ಲೈನ್ ಸ್ಟೋರಿ.
ಕಾಮಿಡಿ ಟಚ್ ಕೊಟ್ಟು ಶ್ರೀನಿವಾಸ್ ರಾಜು ಕಥೆ ಹೇಳಿದ್ದಾರೆ. ಬೇರೆ ಭಾಷೆಯ ಕೆಲ ಸಿನಿಮಾಗಳನ್ನು 'ಕೃಷ್ಣಂ ಪ್ರಣಯ ಸಖಿ' ಕಣ್ಮುಂದೆ ತರುವಂತಿದೆ. ಆದರೆ ಅದನ್ನೆಲ್ಲಾ ಮೀರಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. 'ದ್ವಾಪರ' ಸಾಂಗ್ ಪ್ಲಸ್ ಆಗಿದೆ. 6ನೇ ವಾರವೂ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಅದಕ್ಕೆ ನಿದರ್ಶನ. ಸದ್ಯ ಚಿತ್ರ 50 ದಿನದತ್ತ ದಾಪುಗಾಲು ಇಟ್ಟಿದೆ. ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲಿ ಕೂಡ ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದಾರೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಆಗುತ್ತಲೇಯಿದೆ.
'ಭೀಮ' ಸಿನಿಮಾ ಬೇಗ ಓಟಿಟಿಗೆ ಬಂದಿದ್ದು ನೋಡಿ 'ಕೃಷ್ಣಂ ಪ್ರಣಯ ಸಖಿ' ಕೂಡ ಬೇಗ ಬರುತ್ತದೆ ಎಂದು ಕಾದವರಿಗೆ ನಿರಾಸೆಯಾಗಿದೆ. ಸದ್ಯಕ್ಕೆ ಸಿನಿಮಾ ಓಟಿಟಿಗೆ ಬರುವಂತೆ ಕಾಣುತ್ತಿಲ್ಲ. ಅಮೇಜಾನ್ ಪ್ರೈಂ ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಆದರೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಸದ್ಯಕ್ಕೆ ಓಟಿಟಿ ರಿಲೀಸ್ ಬೇಡ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ.
Disclaimer:
ಪ್ರೈಂ ವೀಡಿಯೋಗೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ, ಅಕ್ಟೋಬರ್ 11ಕ್ಕೆ ಸ್ಟ್ರೀಮಿಂಗ್ ಆಗಬಹುದು ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.


Click it and Unblock the Notifications











