ಒಂದೇ ವಾರದ ಅಂತರದಲ್ಲಿ 'ಕ್ಷೇತ್ರಪತಿ', 'ಬ್ಯಾಡ್ ಮ್ಯಾನರ್ಸ್' ಓಟಿಟಿ ಎಂಟ್ರಿ!; ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಗೆ ಕಾಯುವುದು ಮಾತ್ರವಲ್ಲ, ಇತ್ತೀಚೆಗೆ ಜನ ಓಟಿಟಿ ಸ್ಟ್ರೀಮಿಂಗ್‌ಗೂ ಕಾದು ಕೂರುತ್ತಾರೆ. ಓಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಒಳ್ಳೆ ಚಿತ್ರಗಳನ್ನು ಅದಾಗಲೇ ಥಿಯೇಟರ್‌ನಲ್ಲಿ ನೋಡಿದವರು ಮತ್ತೆ ಸ್ಮಾಲ್ ಸ್ಕ್ರೀನ್‌ನಲ್ಲಿ ನೋಡಲು ಬಯಸುತ್ತಾರೆ. ಇನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಸಹಜವಾಗಿಯೇ ಕಾಯುತ್ತಾರೆ.
ದೊಡ್ಡ ಸಿನಿಮಾಗಳನ್ನು ಮಾತ್ರ ಜನ ಥಿಯೇಟರ್‌ನಲ್ಲಿ ನೋಡಲು ಬಯಸುತ್ತಾರೆ. ಚಿಕ್ಕ ಸಿನಿಮಾಗಳನ್ನು ಓಟಿಟಿಗೆ ಬಂದಮೇಲೆ ನೋಡೋಣ ಬಿಡು ಎನ್ನುವವರು ಇದ್ದಾರೆ ಎನ್ನುವುದು ಹೊಸ ಚರ್ಚೆ. ಕೆಲವೊಮ್ಮೆ ಸಿನಿಮಾ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಜನ ಥಿಯೇಟರ್‌ಗೆ ಬರಲು ಹಿಂದೇಟು ಹಾಕುತ್ತಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ ಕಳೆದ ವರ್ಷ ಬಿಡುಗಡೆಯಾಗಿದ್ದ 'ಕ್ಷೇತ್ರಪತಿ' ಹಾಗೂ 'ಬ್ಯಾಡ್ ಮ್ಯಾನರ್ಸ್' ಸಿನಿಮಾಗಳು ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ.

ಆಗಸ್ಟ್ 18ಕ್ಕೆ ನವೀನ್ ಶಂಕರ್ ನಟನೆಯ 'ಕ್ಷೇತ್ರಪತಿ' ಸಿನಿಮಾ ಬಿಡುಗಡೆಯಾಗಿತ್ತು. ಉತ್ತರ ಕರ್ನಾಟಕ ಸೊಗಡಿನ ಈ ಚಿತ್ರಕ್ಕೆ ಶ್ರೀಕಾಂತ್ ಕಟಗಿ ಆಕ್ಷನ್ ಕಟ್ ಹೇಳಿದ್ದರು. ನವೀನ್ ಶಂಕರ್ ಜೊತೆ ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್ ತಾರಾಗಣದಲ್ಲಿದ್ದರು. ರೈತ ಹೋರಾಟದ ಕಥೆಯಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಯಶಸ್ವಿಯಾಗಲಿಲ್ಲ.
ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ನವೆಂಬರ್ 24ಕ್ಕೆ ತೆರೆಗಪ್ಪಳಿಸಿತ್ತು. ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದರು. ಸೂರಿ ತಮ್ಮದೇ ಶೈಲಿಯಲ್ಲಿ ಕಂಟ್ರಿ ಪಿಸ್ತೂಲ್ ಕಥೆಯನ್ನು ಚಿತ್ರದಲ್ಲಿ ಹೇಳಿದ್ದರು. ಕೆಲವರಿಗೆ ಸಿನಿಮಾ ಇಷ್ಟವಾದರೆ ಮತ್ತೆ ಕೆಲವರಿಗೆ ನಿರಾಸೆ ಮೂಡಿಸಿತ್ತು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿತ್ತು.
ಇದೀಗ 'ಕ್ಷೇತ್ರಪತಿ' ಹಾಗೂ 'ಬ್ಯಾಡ್ ಮ್ಯಾನರ್ಸ್' ಸಿನಿಮಾಗಳು ಒಂದು ವಾರದ ಅಂತರದಲ್ಲಿ ಓಟಿಟಿಗೆ ಬರ್ತಿವೆ. ಫೆಬ್ರವರಿ 9ಕ್ಕೆ ಅಭಿಷೇಕ್ 'ಬ್ಯಾಡ್ ಮ್ಯಾನರ್ಸ್' ಅಮೇಜಾನ್ ಪ್ರೈಂಗೆ ಬರುತ್ತದೆ ಎನ್ನಲಾಗ್ತಿದೆ. ಅದಾಗಿ ಒಂದು ವಾರಕ್ಕೆ ಅಂದರೆ ಫೆಬ್ರವರಿ 16ಕ್ಕೆ 'ಕ್ಷೇತ್ರಪತಿ' ಅಮೇಜಾನ್ ಪ್ರೈಂಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಈ ಎರಡೂ ಸಿನಿಮಾಗಳು ಓಟಿಟಿಯಲ್ಲಿ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.

ಮೊದಲೇ ಹೇಳಿದಂತೆ 'ಕ್ಷೇತ್ರಪತಿ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಥಿಯೇಟರ್‌ನಲ್ಲಿ ನೋಡದವರು ಸಹಜವಾಗಿಯೇ ಓಟಿಟಿ ಸ್ಟ್ರೀಮಿಂಗ್‌ಗೆ ಕಾಯುತ್ತಿದ್ದಾರೆ. ಇನ್ನು ಸೂರಿ ಸಿನಿಮಾ ಆಗಿರುವುದರಿಂದ 'ಬ್ಯಾಡ್ ಮ್ಯಾನರ್ಸ್' ಕೂಡ ಕುತೂಹಲ ಮೂಡಿಸಿದೆ. ಫೆಬ್ರವರಿ 9ಕ್ಕೆ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅದೇ ದಿನ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಬರುತ್ತಾ ಕಾದು ನೋಡಬೇಕಿದೆ.
ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿಲ್ಲ ಎನ್ನುವ ಆರೋಪ ಇದೆ. ಇತ್ತೀಚೆಗೆ ಕೆಲ ಸಿನಿಮಾಗಳನ್ನು ಪೇ ಫಾರ್ ವೀವ್ ಲೆಕ್ಕಾಚಾರದಲ್ಲಿ ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿದೆ. 'ಬ್ಯಾಡ್ ಮ್ಯಾನರ್ಸ್' ಹಾಗೂ 'ಕ್ಷೇತ್ರಪತಿ' ಸಿನಿಮಾಗಳನ್ನು ಕೂಡ ಇದೇ ರೀತಿಯಲ್ಲಿ ಅಮೇಜಾನ್ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗ್ತಿದೆ. ವೀವ್ಸ್‌ಗೆ ತಕ್ಕಂತೆ ಶೇಕಡಾವಾರು ಲೆಕ್ಕದಲ್ಲಿ ನಿರ್ಮಾಪಕರು ಜೊತೆ ಓಟಿಟಿ ಸ್ಟ್ರೀಮಿಂಗ್ ಒಪ್ಪಂದ ಆಗಿದೆ ಎನ್ನುವ ಚರ್ಚೆ ನಡೀತಿದೆ.
'ಬ್ಯಾಡ್ ಮ್ಯಾನರ್ಸ್' ಹಿಂದಿ ಡಬ್ಬಿಂಗ್ ರೈಟ್ಸ್‌ಗೆ ಬೇಡಿಕೆ ಬಂದಿತ್ತು. ಈ ಬಗ್ಗೆ ನಿರ್ಮಾಪರಕರೇ ಮಾಹಿತಿ ನೀಡಿದ್ದರು. ಹಾಗಾಗಿ 'ಬ್ಯಾಡ್ ಮ್ಯಾನರ್ಸ್' ಹಿಂದಿ ವರ್ಷನ್ ಕೂಡ ಓಟಿಟಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ. ಒಟ್ನಲ್ಲಿ ಎರಡೂ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಲು ಕೆಲವರಂತೂ ಬಹಳ ಉತ್ಸುಕರಾಗಿದ್ದಾರೆ.


Click it and Unblock the Notifications










