Landlord OTT: ಜೀ5ನಲ್ಲಿ ದುನಿಯಾ ವಿಜಯ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 'ಲ್ಯಾಂಡ್‌ಲಾರ್ಡ್'
ವರ್ಷದ ಎರಡೂವರೆ ವರ್ಷ ಕನ್ನಡ ಚಿತ್ರರಂಗ ಅಷ್ಟಾಗಿ ಸದ್ದು ಮಾಡಲಿಲ್ಲ. ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಒಂದೆರಡು ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗಲಿಲ್ಲ. ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸದ್ದು ಮಾಡಿತ್ತು. ಇದೀಗ ಸಿನಿಮಾ ಓಟಿಟಿಗೆ ಸ್ಟ್ರೀಮಿಂಗ್ ಸಮಯ ಬಂದಿದೆ.
ಜನವರಿ 23ರಂದು ಸಿನಿಮಾ ತೆರೆಗೆ ಬಂದಿತ್ತು. ಸಂವಿಧಾನದ ಮಹತ್ವ ಸಾರುವ ಪ್ರಯತ್ನ ಚಿತ್ರದಲ್ಲಿ ನಡೆದಿತ್ತು. ದಶಕಗಳ ಹಿಂದೆ ಹಳ್ಳಿಗಳಲ್ಲಿ ಚಾಲ್ತಿಯಲ್ಲಿದ್ದ ಊಳಿಗಮಾನ್ಯ ಪದ್ಧತಿ, ಜಮೀನ್ದಾರಿ ಪದ್ದತಿ, ಕೆಳವರ್ಗದವರ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ರೀತಿಯ ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. ರಾಜ್ ಬಿ ಶೆಟ್ಟಿ ಚಿತ್ರದಲ್ಲಿ ಜಮೀನ್ದಾರನಾಗಿ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ.

ನಾಯಕಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. ಇನ್ನುಳಿದಂತೆ ಉಮಾಶ್ರೀ, ಗೋಪಾಲಕೃಷ್ಣ ದೇಶಪಾಂಡೆ, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಭಾವನಾ ರಾವ್, ಶರತ್ ಲೋಹಿತಾಶ್ವ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸದಭಿರುಚಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಜಡೇಶ್ ಹೊಸ ಪ್ರಯತ್ನಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ಜನ ಮೆಚ್ಚಿ ಬರೆದರು. ಆದರೆ ಅದ್ಯಾವುದೂ ಚಿತ್ರವನ್ನು ದೊಡ್ಡದಾಗಿ ಗೆಲ್ಲಿಸಲಿಲ್ಲ.
ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ 'ಲ್ಯಾಂಡ್‌ಲಾರ್ಡ್' ಚಿತ್ರದ ಹೈಲೆಟ್. ಕೊಡಲಿ ರಾಚಯ್ಯನಾಗಿ ದುನಿಯಾ ವಿಜಯ್ ನಟನೆಗೆ ಒಳ್ಳೆ ಅಂಕಗಳು ಸಿಕ್ಕಿತ್ತು. ಆಕ್ಷನ್ ಮಾತ್ರವಲ್ಲದೇ ಭಾವೋದ್ವೇಗದ ಸನ್ನಿವೇಶಗಳಲ್ಲಿ ವಿಜಯ್ ನಟನೆ ಪ್ರೇಕ್ಷಕರ ಮನಗೆದ್ದಿತ್ತು. ಒಂದೆರಡು ಸನ್ನಿವೇಶಗಳಲ್ಲಿ ಬಂದು ಹೋಗುವ ಉಮಾಶ್ರೀ ಅವರ ಪಾತ್ರ ಕೂಡ ಹೈಲೆಟ್ ಆಗಿತ್ತು.

80ರ ದಶಕದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕೋಲಾರ ಭಾಗದ ಹಳ್ಳಿಯ ಹಿನ್ನೆಲೆಯಲ್ಲಿ 'ಲ್ಯಾಂಡ್‌ಲಾರ್ಡ್' ಕತೆ ಸಾಗುತ್ತದೆ. ಹಾಗಾಗಿ ಅದೇ ಭಾಗದ ಕನ್ನಡ ಭಾಷೆಯನ್ನು ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ. ರಾಮದುರ್ಗ ಹಾಗೂ ಹುಲಿದುರ್ಗ ಎಂಬ ಹಳ್ಳಿಗಳಲ್ಲಿ ಇಲ್ಲದವರ ಮೇಲೆ ಉಳ್ಳವರ ಆರ್ಭಟ, ಅದರ ವಿರುದ್ಧ ನಾಯಕ ಬಂಡಾಯವೇ ಚಿತ್ರದ ಕಥೆ.
ಬಹಳ ಅದ್ಧೂರಿಯಾಗಿ 'ಲ್ಯಾಂಡ್‌ಲಾರ್ಡ್' ಚಿತ್ರವನ್ನು ನಿರ್ಮಾಪಕರು ತೆರೆಗೆ ತಂದಿದ್ದರು. ಇದೀಗ ಯುಗಾದಿ ಸಂಭ್ರಮದಲ್ಲಿ ಸಿನಿಮಾ ಓಟಿಟಿಗೆ ಬರ್ತಿದೆ. ಹೌದು ಮಾರ್ಚ್ 19ರಂದು ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಟಿವಿಯಲ್ಲಿ ಕೂಡ ಸಿನಿಮಾ ಪ್ರೀಮಿಯರ್ ಆಗಲಿದೆ. ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕಿದೆ. ಎಲ್ಲಾ ವಿಭಾಗದಲ್ಲೂ ಜಡೇಶ್ ಒಳ್ಳೆ ಕೆಲಸ ತೆಗೆಸಿದ್ದರು. ಕಲಾವಿದರೆಲ್ಲಾ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ವಿಲನ್ ಆಗಿ ರಾಜ್ ಬಿ ಶೆಟ್ಟಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಸಾಕಷ್ಟು ಜನ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲಿಲ್ಲ. ಹಾಗಾಗಿ ಓಟಿಟಿಯಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ.
ಸರ್ಕಾರದಿಂದ ಲ್ಯಾಂಡ್‌ಲಾರ್ಡ್ ಚಿತ್ರಕ್ಕೆ ತೆರಿಗೆ ವಿನಾಯ್ತಿ ಸಿಕ್ಕಿತ್ತು. "ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ" ಹಾಗಾಗಿ ತೆರಿಗೆ ವಿನಾಯ್ತಿ ನೀಡುತ್ತಿರುವುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದರು.


Click it and Unblock the Notifications











