Kannada Films OTT: ವಾರೆವ್ಹಾ.. 5 ಹೊಸ ಕನ್ನಡ ಚಿತ್ರಗಳು ಓಟಿಟಿಗೆ ಬಂದಿವೆ, ಈಗ್ಲೇ ನೋಡಿ
ಕನ್ನಡ ಸಿನಿಮಾಗಳನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳಲ್ಲ ಎನ್ನುವ ಆರೋಪ ಇದೆ. ಒಳ್ಳೆ ಸಿನಿಮಾ ಮಾಡಿದ್ರೆ, ಜನ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ರೆ ಕಂಡಿತ ಕೊಂಡುಕೊಳ್ಳುತ್ತಾರೆ ಎನ್ನುವ ವಾದ ಕೂಡ ಇದೆ. ಓಟಿಟಿಗೆ ಕನ್ನಡ ಸಿನಿಮಾಗಳು ಬರೋದೇ ಅಪರೂಪ ಎನ್ನುವಂತಾಗಿದೆ. ಆದರೆ ಕಳೆದೊಂದು ವಾರದಲ್ಲಿ ನಾಲ್ಕೈದು ಕನ್ನಡ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ.
ಕಳೆದ ತಿಂಗಳು ಬಿಡುಗಡೆಯಾಗಿದ್ದ 'ಡೆವಿಲ್', '45' ಹಾಗೂ 'ಮಾರ್ಕ್' ಸಿನಿಮಾಗಳು ಓಟಿಟಿಗೆ ಬರೋದು ಯಾವಾಗ ಎನ್ನುವ ಪ್ರಶ್ನೆ ಎದ್ದಿದೆ. ಇನ್ನೊಂದು ವಾರದಲ್ಲಿ 'ಡೆವಿಲ್' ಸಿನಿಮಾ ಡಿಜಿಟಲ್ ವೇದಿಕೆಗೆ ಬರಲಿದೆ. ಆದರೆ ಸದ್ಯ ಹೊಸದಾಗಿ ಸ್ಟ್ರೀಮಿಂಗ್ ಆರಂಭಿಸಿರುವ ಕನ್ನಡ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಿ ಎಂಜಾಯ್ ಮಾಡಿ. ಒಂದು ಕನ್ನಡ ವೆಬ್ ಸೀರಿಸ್ ಕೂಡ ಲಿಸ್ಟ್‌ನಲ್ಲಿದೆ.

1. ರಾಧೇಯ
ವೇದ ಗುರು ನಿರ್ದೇಶನದ 'ರಾಧೇಯ' ಸಿನಿಮಾ ಓಟಿಟಿಗೆ ಬಂದಿದೆ. ಅಜಯ್ ರಾವ್ ಹಾಗೂ ಸೋನಲ್ ಮಂಥೆರೋ ಚಿತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 21ರಂದು ತೆರೆಗೆ ಬಂದಿದ್ದ ಸಿನಿಮಾ ಇದೀಗ ಸನ್‌ನೆಕ್ಸ್ಟ್ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅಜಯ್ ರಾವ್ ಜೈಲಿನಲ್ಲಿರುವ ಕ್ರಿಮಿನಲ್ ಪಾತ್ರದಲ್ಲಿ ನಟಿಸಿದ್ದು ಸೋನಲ್ ಕ್ರೈಂ ರಿಪೋರ್ಟರ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
2. ರೋನಿ
ಕಿರಣ್ ರಾಜ್ ನಟನೆಯ 'ರೋನಿ' ಸಿನಿಮಾ ಕೊನೆಗೂ ಓಟಿಟಿಗೆ ಬಂದಿದೆ. ಇದೊಂದು ಗ್ಯಾಂಗ್‌ಸ್ಟರ್ ಕಥೆ ಆಧರಿತ ಸಿನಿಮಾ. ಮಾಸ್ ಲುಕ್‌ನಲ್ಲಿ ಕಿರಣ್ ರಾಜ್ ಅಬ್ಬರಿಸಿದ್ದಾರೆ. ವರ್ಷದ ಹಿಂದೆ ಈ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಗುರುತೇಜ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗಡೆ ಸಿನಿಮಾ ನಿರ್ಮಾಣ ಮಾಡಿದ್ದಾರೆ.

3. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ನಟ ದೀಕ್ಷಿತ್ ಶೆಟ್ಟಿ ಮತ್ತು ಬೃಂದಾ ಆಚಾರ್ಯ ನಟನೆಯ ಕ್ರೈಮ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಇದು. ಅಭಿಷೇಕ್ ಎಮ್ ನಿರ್ದೇಶನದ ಈ ಸಿನಿಮಾ ನವೆಂಬರ್ 27ಕ್ಕೆ ತೆರೆಗೆ ಬಂದಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಬ್ಯಾಂಕ್ ದರೋಡೆಗೆ ಯತ್ನಿಸುವ ಸ್ನೇಹಿತರ ಕಥೆ ಈ ಚಿತ್ರದಲ್ಲಿದೆ. ಜನವರಿ 12ರಂದು ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
4. ಉಡಾಳ
ಪೃಥ್ವಿ ಶಾಮನೂರು ನಟನೆಯ ಪಕ್ಕಾ ಜವಾರಿ ಶೈಲಿಯ 'ಉಡಾಳ' ಸಿನಿಮಾ ನವೆಂಬರ್ 14ರಂದು ತೆರೆಗೆ ಬಂದಿತ್ತು. ಅಮೋಲ್ ಪಾಟೀಲ್ ನಿರ್ದೇಶನದ ಚಿತ್ರಕ್ಕೆ ರವಿ ಶಾಮನೂರು ಹಾಗೂ ನಿರ್ದೇಶಕ ಯೋಗರಾಜ್ ಭಟ್ ಹಣ ಹೂಡಿದ್ದರು. ಉತ್ತರ ಕರ್ನಾಟಕದ ಸೊಗಡನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಬಿಜಾಪುರದ ಹಿನ್ನೆಲೆಯಲ್ಲಿ ಈ ಸಿನಿಮಾ ಕಥೆ ಸಾಗುತ್ತದೆ. ಸದ್ಯ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಬಿಡುಗಡೆ ಆಗಿದೆ.
5. ಏಕಂ
ಪರಂವಾ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾನದ 'ಏಕಂ' ವೆಬ್ ಸೀರಿಸ್ ಕೂಡ ಜೀ-5ನಲ್ಲಿ ಬಿಡುಗಡೆಯಾಗಿದೆ. ಪ್ರಕಾಶ್ ರೈ ಹಾಗೂ ರಾಜ್. ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮಾನಸಿ ಸುಧೀರ್, ಶೈನ್ ಶೆಟ್ಟಿ, ಪ್ರಕಾಶ್ ತಮಿನಾಡು, ಶನಿಲ್ ಗುರು ಕೂಡ ತಾರಾಗಣದಲ್ಲಿದ್ದಾರೆ. 7 ಬೇರೆ ಬೇರೆ ಕಥೆಗಳನ್ನು ಇದರಲ್ಲಿ ನೋಡಬಹುದು.
ಇನ್ನು ಕಳೆದ ವಾರ ಬಿಡುಗಡೆ ಆಗಿದ್ದ ಫುಲ್ ಮೀಲ್ಸ್(ಪ್ರೈಂ ವೀಡಿಯೋ) ಹಾಗೂ ನಾನು ಮತ್ತು ಗುಂಡ-2(ಜೀ-5) ಸಿನಿಮಾಗಳನ್ನು ವೀಕೆಂಡ್ ಮನೆಯಲ್ಲೇ ನೋಡಬಹುದು. ಕನ್ನಡ ಸಿನಿರಸಿಕರಿಗೆ ಒಟ್ಟಾರೆ ಈ ವಾರ ಓಟಿಟಿಯಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.


Click it and Unblock the Notifications











