ಮತ್ತೊಂದು ಕನ್ನಡ ಸಿನಿಮಾ ಓಟಿಟಿಗೆ ಬಂದಿದೆ; ಭಾನುವಾರ ಮನೆಯಲ್ಲೇ ಸಿನಿಮಾ ನೋಡಿ
ಕನ್ನಡ ಸಿನಿಮಾಗಳು ಓಟಿಟಿಗೆ ಬರೋದೆ ಕಮ್ಮಿ. ಆದರೆ ಈ ವಾರ 3 ಸಿನಿಮಾಗಳು ಒಟ್ಟೊಟ್ಟಿಗೆ ಓಟಿಟಿ ವೀಕ್ಷಕರ ಮುಂದೆ ಬಂದಿವೆ. ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ' ಹಾಗೂ ದೀಪಿಕಾ ದಾಸ್ ನಟನೆಯ 'ಪಾರು ಪಾರ್ವತಿ' ಚಿತ್ರಗಳು 2 ದಿನಗಳಿಂದ ವೀಕ್ಷಣೆಗೆ ಲಭ್ಯವಿದೆ. ಆ ಲಿಸ್ಟ್‌ಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದ 'ಶಿವಮ್ಮ' ಸಿನಿಮಾ ಸನ್‌ನೆಕ್ಸ್ಟ್‌ನಲ್ಲಿದೆ. ಇನ್ನು ಅಡ್ವೆಂಚರ್ ಸಿನಿಮಾ 'ಪಾರು ಪಾರ್ವತಿ' ಅಮೇಜಾನ್ ಪ್ರೈಂ ವೀಡಿಯೋದಲ್ಲಿದೆ. ಈಗಾಗಲೇ 2 ಸಿನಿಮಾಗಳನ್ನು ಸಾಕಷ್ಟು ಜನ ಓಟಿಟಿಯಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಈ 2 ಚಿತ್ರಗಳ ಜೊತೆಗೆ ಶುಕ್ರವಾರ(ಏಪ್ರಿಲ್ 4) ಬೇರೆ ಭಾಷೆಗಳ 15ಕ್ಕೂ ಅಧಿಕ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್ ಆಗಿತ್ತು. ಕಳೆದ ವರ್ಷ ಆಗಸ್ಟ್ 15ಕ್ಕೆ ತೆರೆಗೆ ಬಂದಿದ್ದ ಮ್ಯೂಸಿಕಲ್ ಲವ್ ಸ್ಟೋರಿ ಕನ್ನಡ ಸಿನಿಮಾ ಇದೀಗ ಪ್ರೈಂ ವೀಡಿಯೋಗೆ ಬಂದಿದೆ.
ಇಂದ್ರಜಿತ್ ಲಂಕೇಶ್ ಮಗನಿಗಾಗಿ ನಿರ್ಮಿಸಿ ನಿರ್ದೇಶಿಸಿದ್ದ 'ಗೌರಿ' ಸಿನಿಮಾ ಈಗ ಓಟಿಟಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಜೋಡಿಯಾಗಿ ಸಾನ್ಯ ಅಯ್ಯರ್ ಮಿಂಚಿದ್ದರು. ಈ ಹಿಂದೆ ಕವಿತಾ ಲಂಕೇಶ್ ನಿರ್ದೇಶನದ 'ಸಮ್ಮರ್ ಹಾಲಿಡೇಸ್' ಚಿತ್ರದಲ್ಲಿ ಸಮರ್ಜಿತ್ ಬಾಲನಟನಾಗಿ ನಟಿಸಿದ್ದ. ಹೀರೊ ಆಗಿ 'ಗೌರಿ' ಆತನ ಚೊಚ್ಚಲ ಸಿನಿಮಾ. ಸಾನ್ಯಗೂ ಇದು ಮೊದಲ ಪ್ರಯತ್ನ ಆಗಿತ್ತು.
'ಶಕೀಲಾ' ಬಯೋಪಿಕ್ ಸಿನಿಮಾ ಬಳಿಕ ಇಂದ್ರಜಿತ್ ಲಂಕೇಶ್ 'ಗೌರಿ' ಸಿನಿಮಾ ಕೈಗೆತ್ತಿಕೊಂಡಿದ್ದರು. ಡ್ಯಾನ್ಸ್, ಫೈಟ್ಸ್, ಆ್ಯಕ್ಟಿಂಗ್ ತರಬೇತಿ ಪಡೆದು ಸಮರ್ಜಿತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಿರೀಕ್ಷಿತ ಮಟ್ಟದಲ್ಲಿ ಚಿತ್ರಕ್ಕೆ ಪ್ರತಿಕ್ರಿಯೆ ಸಿಗಲಿಲ್ಲ. ಸಿಂಪಲ್ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

ಹಳ್ಳಿ ಹೈದ 'ಗೌರಿ'ಶಂಕರ್(ಸಮರ್ಜಿತ್)ಗೆ ಸಂಗೀತಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು. ಆದರೆ ಆತನಿಗೆ ಶ್ರವಣ ದೋಷ ಇರುತ್ತದೆ. ಹಾಗಾಗಿ ಗಾಯಕನಾಗುವುದು ಅಷ್ಟು ಸುಲಭವಾಗಿರುವುದಿಲ್ಲ. ಸಾಕಷ್ಟು ಅವಮಾನ ಎದುರಿಸಿ ಪಟ್ಟಣ ಸೇರುವ ಗೌರಿಗೆ ಸಮಂತಾ(ಸಾನ್ಯ ಅಯ್ಯರ್) ಜೊತೆಯಾಗುತ್ತಾಳೆ. ಆತನಿಗೆ ಮುಂದೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಮುಂದೆ ಆತನ ತನ್ನ ಸಮಸ್ಯೆ ಮೆಟ್ಟಿ ಹೇಗೆ ಗೆಲ್ಲುತ್ತಾನೆ ಎನ್ನುವುದು ಇನ್ನುಳಿದ ಕಥೆ.
'ಗೌರಿ' ಚಿತ್ರಕ್ಕೆ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ
ಶಿವು ಬರ್ಗಿ, ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಮ್ಯಾಥ್ಯೂಸ್ ಮನು ಹಿನ್ನೆಲೆ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು ಹಾಗೂ ಚಿಕ್ಕಮಗಳೂರು ಸುತ್ತಾಮುತ್ತಾ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಮಾನಸಿ ಸುಧೀರ್, ಸಂಪತ್ ಮೈತ್ರೇಯಾ, ರಾಜೀವ್ ಪಿಳೈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಪ್ರಿಯಾಂಕ ಉಪೇಂದ್ರ, ಚಂದನ್ ಕುಮಾರ್, ರಿಕ್ಕಿ ಕೇಜ್, ವಸುಂದರಾ ದಾಸ್, ಅಕುಲ್ ಬಾಲಾಜಿ 'ಗೌರಿ' ಚಿತ್ರದ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಮಗ ಸಮರ್ಜಿತ್‌ನನ್ನು ಚಿತ್ರರಂಗಕ್ಕೆ ಅದ್ಧೂರಿ ಪರಿಚಯಿಸಲು ಇಂದ್ರಜಿತ್ ಕಟ್ಟಿಕೊಟ್ಟಿದ್ದ ಸಿನಿಮಾ ಇದು. ಹೊಸ ನಾಯಕನ ಚಿತ್ರಕ್ಕೆ ಬೇಕಾದ ಡ್ಯಾನ್ಸ್, ಫೈಟ್ಸ್, ಸೆಂಟಿಮೆಂಟ್, ಮ್ಯೂಸಿಕ್ ಹೀಗೆ ಎಲ್ಲಾ ಅಂಶಗಳು ಚಿತ್ರದಲ್ಲಿದೆ.
'ಗೌರಿ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಸಿಗುತ್ತಿದೆ. ಆದರೆ ಸದ್ಯಕ್ಕೆ ಚಂದಾದಾರರು ಉಚಿತವಾಗಿ ಸಿನಿಮಾ ನೋಡಲು ಸಾಧ್ಯವಿಲ್ಲ. 99 ರೂಪಾಯಿ ಹಣ ಪಾವತಿಸಿ ವೀಕ್ಷಿಸಬಹುದು. ಮುಂದಿನ ವೀಕೆಂಡ್ ಸಿನಿಮಾ ಉಚಿತವಾಗಿ ವೀಕ್ಷಣೆಗೆ ಸಿಗುವ ಸಾಧ್ಯತೆಯಿದೆ.


Click it and Unblock the Notifications











