'ಲಕ್ಷ್ಮಿ' ಸಿನಿಮಾ ದಾಖಲೆ: ಅಕ್ಷಯ್ ಕುಮಾರ್ ಹೇಳಿದ್ದು ಹೀಗೆ
ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ' ಸಿನಿಮಾ ನವೆಂಬರ್ 9 ರಂದು ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಉತ್ತಮ ವಿಮರ್ಶೆಗಳೇನೂ ಬಂದಿಲ್ಲ. ಸಿನಿಮಾ 'ಸಾಧಾರಣ' ಎನ್ನಲಾಗುತ್ತಿದೆ. ಆದರೂ ಸಹ ಹೊಸ ದಾಖಲೆಯನ್ನು ನಿರ್ಮಿಸಿದೆ 'ಲಕ್ಷ್ಮಿ' ಸಿನಿಮಾ.
ತಮ್ಮದೇ ನಿರ್ದೇಶನದ ಕಾಂಚನಾ ಸಿನಿಮಾವನ್ನು ಹಿಂದಿಗೆ ತಂದಿದ್ದಾರೆ ರಾಘವ ಲಾರೆನ್ಸ್. ಸಿನಿಮಾದ ಕತೆಯಲ್ಲಿ ಅಲ್ಲಿಯಷ್ಟೆ ಬದಲಾವಣೆ ಮಾಡಿ ಹೆಚ್ಚು ಭಯಹುಟ್ಟಿಸಲು ತುಸು ಹೆಚ್ಚು ಗ್ರಾಫಿಕ್ಸ್, ಹಿನ್ನೆಲೆ ಸಂಗೀತ ಸೇರಿಸಲಾಗಿದೆ.
ನವೆಂಬರ್ 9 ರಂದು ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆ ಆದ 'ಲಕ್ಷ್ಮಿ' ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಲಕ್ಷ್ಮಿ ಸಿನಿಮಾವು ಡಿಸ್ನಿಹಾಟ್‌ಸ್ಟಾರ್‌ನಲ್ಲಿ ಅತಿ ಹೆಚ್ಚು ನೋಡಲ್ಪಟ್ಟ ಸಿನಿಮಾ ಅಂತೆ. ಈ ಹಿಂದಿನ ದಾಖಲೆಗಳನ್ನು ಅಳಿಸಿ ಹಾಕಿದೆ ಈ ಸಿನಿಮಾ.

ಅತಿ ಹೆಚ್ಚು ಮಂದಿ ಏಕಕಾಲಕ್ಕೆ ನೋಡಿದ ಸಿನಿಮಾ
ಡಿಸ್ನಿಹಾಟ್‌ಸ್ಟಾರ್ ಟ್ವಿಟ್ಟರ್‌ನಲ್ಲಿ ಈ ವಿಷಯ ಪ್ರಕಟಿಸಿದ್ದು, 'ಲಕ್ಷ್ಮಿ' ಸಿನಿಮಾವು ಡಿಸ್ನಿಹಾಟ್‌ಸ್ಟಾರ್ ವಿಐಪಿಯಲ್ಲಿ ಅತಿ ಹೆಚ್ಚು ಮಂದಿ ಏಕಕಾಲಕ್ಕೆ ನೋಡಿದ ಸಿನಿಮಾ. ಸಿನಿಮಾ ಬಿಡುಗಡೆಯ ಮೊದಲ ದಿನವೇ ಇಷ್ಟೋಂದು ಮಂದಿ ಇನ್ನಾವ ಸಿನಿಮಾವನ್ನೂ ಸಹ ನೋಡಿಲ್ಲ ಎಂದಿದೆ.

ದಿಲ್ ಬೇಚಾರಾ ಸಿನಿಮಾದ ಹೆಸರಲ್ಲಿದ್ದ ದಾಖಲೆ
ಈ ಹಿಂದೆ ಈ ದಾಖಲೆ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೇಚಾರ ಹೆಸರಿನಲ್ಲಿತ್ತು. ದಿಲ್ ಬೇಚಾರ ಸಿನಿಮಾವನ್ನು ಉಚಿತವಾಗಿ ನೋಡುವ ಅವಕಾಶವನ್ನು ಹಾಟ್‌ಸ್ಟಾರ್ ನೀಡಿತ್ತು. ಆದರೆ ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಸಿನಿಮಾ ದಿಲ್ ಬೇಚಾರಾ ದಾಖಲೆಯನ್ನು ಮುರಿದು ಹಾಕಿದೆ.

ಅಕ್ಷಯ್‌ಕುಮಾರ್ ಪ್ರತಿಕ್ರಿಯೆ
ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದು, 'ಲಕ್ಷ್ಮಿ' ಸಿನಿಮಾಕ್ಕೆ ದೊರಕಿರುವ ಅದ್ಭುತ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ. ನಮ್ಮ ಸಿನಿಮಾ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಹಲವಾರು ದೇಶಗಳಿಂದ ಜನರು ಸಿನಿಮಾ ನೋಡಲು ಡಿಸ್ನಿಹಾಟ್‌ಸ್ಟಾರ್‌ಗೆ ಲಾಗ್ ಇನ್ ಆಗಿದ್ದಾರೆ' ಎಂದಿದ್ದಾರೆ.

ಕೆಲವು ವಿವಾದಗಳಲ್ಲಿ ಸಿಲುಕಿದ್ದ ಸಿನಿಮಾ
'ಲಕ್ಷ್ಮಿ ಬಾಂಬ್' ಎಂದು ಸಿನಿಮಾಕ್ಕೆ ಮೊದಲು ಹೆಸರಿಡಲಾಗಿತ್ತು. ಆದರೆ ವಿರೋಧ ಬಂದ ಕಾರಣ, ಸಿನಿಮಾದ ಹೆಸರನ್ನು 'ಲಕ್ಷ್ಮಿ' ಎಂದು ಬದಲಾಯಿಸಲಾಯಿತು. ಸಿನಿಮಾವು ಲವ್ ಜಿಹಾದ್‌ಗೆ ಉತ್ತೇಜನ ನೀಡುತ್ತದೆ ಎಂದೂ ಸಹ ಆರೋಪಿಸಲಾಗಿತ್ತು. ಏನೇ ವಿವಾದವಾಗಲಿ ಲಕ್ಷ್ಮಿ ಸಿನಿಮಾವನ್ನು ಲಕ್ಷಾಂತರ ಮಂದಿ ನೋಡಿದ್ದಾರೆ.


Click it and Unblock the Notifications











