ಓಟಿಟಿಯಲ್ಲಿ ಲಭ್ಯವಿರುವ ಈ 10 ಬೆಸ್ಟ್ ಮಲಯಾಳಂ ಥ್ರಿಲ್ಲರ್ ಸಿನಿಮಾಗಳನ್ನು ನೀವು ನೋಡಲೇಬೇಕು!
ಕಂಟೆಂಟ್ ಈಸ್ ಕಿಂಗ್ ಎನ್ನುವ ಸಿದ್ಧಾಂತವನ್ನು ಈ ಹಿಂದಿನಿಂದಲೂ ಪಾಲಿಸುತ್ತಾ ಬಂದಿರುವ ಚಿತ್ರರಂಗ ಎನಿಸಿಕೊಂಡಿರುವ ಮಲಯಾಳಂ ಚಿತ್ರರಂಗ ಒಳ್ಳೊಳ್ಳೆ ಸಿನಿಮಾಗಳನ್ನು ನೀಡಿದೆ. ಕಡಿಮೆ ಬಜೆಟ್‌ನಲ್ಲಿ ಅದ್ಭುತ ಸಿನಿಮಾಗಳನ್ನು ನಿರ್ಮಿಸುವ ಕಲೆಗೆ ಈ ಇಂಡಸ್ಟ್ರಿ ಫೇಮಸ್. ನಿಜ ಜೀವನದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಪುಟ್ಟ ಅಸಾಮಾನ್ಯ ವಿಷಯಗಳನ್ನೇ ಸಿನಿಮಾವನ್ನಾಗಿ ಮಾಡಿ ಹೌಸ್‌ಫುಲ್ ಆಗುವ ಹಾಗೆ ಚಿತ್ರಕಥೆಯನ್ನು ಹೆಣೆಯುವ ಕಲೆ ಇರುವ ಮಲಯಾಳಂ ಚಿತ್ರಗಳೆಂದರೆ ಸಿನಿ ರಸಿಕರಿಗೆ ಅಚ್ಚುಮೆಚ್ಚು.
ಬೇಸರವಾಗ್ತಿದೆ, ಯಾವುದಾದರೂ ಒಂದೊಳ್ಳೆ ಸಿನಿಮಾ ನೋಡಬೇಕು ಎಂದು ಚಿತ್ರಪ್ರೇಮಿಯನ್ನು ಕೇಳಿದರೆ ಆತ ಹೇಳುವ ಒಂದಷ್ಟು ಚಿತ್ರಗಳ ಪಟ್ಟಿಯಲ್ಲಿ ಮಲಯಾಳಂ ಸಿನಿಮಾಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಇಷ್ಟರ ಮಟ್ಟಿಗೆ ರೀಚ್ ಆಗಿವೆ ಮಲಯಾಳಂ ಚಿತ್ರಗಳು. ಅದರಲ್ಲಿಯೂ ಮಲಯಾಳಂ ಚಿತ್ರರಂಗದ ಥ್ರಿಲ್ಲರ್ ಕಥೆಗಳು ನೋಡುಗರಿಗೆ ಕೊಡುವ ಕಿಕ್ ಬೇರೆಯದ್ದೇ, ವಿಶೇಷವಾಗಿ ಕ್ರೈಮ್ ಥ್ರಿಲ್ಲರ್ ಕಥೆಗಳು. ಎಲ್ಲೂ ಬೋರ್ ಆಗದೇ ನಿಧಾನವಾಗಿ ಕಥೆ ಹೇಳಿಕೊಂಡು ಕುತೂಹಲ ಕೆರಳಿಸಿ ಕ್ಲೈಮ್ಯಾಕ್ಸ್‌ನಲ್ಲಿ ಸಿನಿ ರಸಿಕರನ್ನು ಸೀಟಿನ ಅಂಚಿಗೆ ತಂದು ಕೂರಿಸಿಬಿಡುತ್ತವೆ.

ಅಂತಹ 10 ಬೆಸ್ಟ್ ಮಲಯಾಳಂ ಥ್ರಿಲ್ಲರ್ ಸಿನಿಮಾಗಳ ಪಟ್ಟಿ ಈ ಕೆಳಕಂಡಂತಿದ್ದು, ನಾನೊಬ್ಬ ಸಿನಿ ಪ್ರೇಮಿ ಎನ್ನುವವರು ಈ ಸಿನಿಮಾಗಳನ್ನು ನೀವು ಒಂದೊಮ್ಮೆ ನೋಡಲೇಬೇಕು.
1. ದೃಶ್ಯಂ - ಥ್ರಿಲ್ಲರ್ ಕಥೆಗಳಿಗೆ ಹೆಸರುವಾಸಿಯಾಗಿರುವ ಜೀತು ಜೋಸೆಫ್ ನಿರ್ದೇಶನದ ದೃಶ್ಯಂ ಚಿತ್ರ ಪ್ರತಿಯೊಬ್ಬ ಸಿನಿ ಪ್ರೇಮಿಯೂ ಸಹ ನೋಡಲೇಬೇಕಾದ ಚಿತ್ರ. ಈ ಚಿತ್ರ ಕನ್ನಡಕ್ಕೂ ಸಹ ರಿಮೇಕ್ ಆಗಿದ್ದು, ಬಹುತೇಕರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಒಂದುವೇಳೆ ಈ ಚಿತ್ರವನ್ನು ನೋಡದೇ ಇದ್ದವರು ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

2. ದೃಶ್ಯಂ 2 - ದೃಶ್ಯಂ ಸಿನಿಮಾದ ಮುಂದುವರೆದ ಭಾಗವೇ ದೃಶ್ಯಂ 2. ದೃಶ್ಯಂ ಚಿತ್ರದಲ್ಲಿ ರಕ್ಷಣೆಗಾಗಿ ತನ್ನ ಪತ್ನಿ ಹಾಗೂ ಮಗಳು ಮಾಡಿದ ಕೊಲೆಯನ್ನು ಮುಚ್ಚಿಹಾಕಿದ್ದ ನಾಯಕ ಜಾರ್ಜ್ ಕುಟ್ಟಿ ಎರಡನೇ ಭಾಗದಲ್ಲಿ ಹೇಗೆ ಮತ್ತೆ ಆ ಕೊಲೆಯನ್ನು ತನ್ನ ಕುಟುಂಬ ಮಾಡಿಲ್ಲ ಎಂದು ಸಾಬೀತುಪಡಿಸಿ ಪಾರಾಗ್ತಾನೆ ಎಂಬುದೇ ಚಿತ್ರದ ಕಥೆ. ಈ ಚಿತ್ರ ಮಲುಯಾಳಂನಲ್ಲಿ ಓಟಿಟಿಯಲ್ಲಿಯೇ ನೇರವಾಗಿ ಬಿಡುಗಡೆಯಾಗಿತ್ತು ಹಾಗೂ ಇದರ ಹಿಂದಿ ರಿಮೇಕ್ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.
3. ಮೊಮೊರಿಸ್ - ಜೀತು ಜೋಸೆಫ್ ನಿರ್ದೇಶನದ, ನೋಡಲೇಬೇಕಾದ ಮತ್ತೊಂದು ಥ್ರಿಲ್ಲರ್ ಸಿನಿಮಾ ಮೆಮೊರಿಸ್. ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕ ಪೊಲೀಸ್ ಹಾಗೂ ಆತ ತನ್ನ ಹೆಂಡತಿ ಹಾಗೂ ಮಗಳು ಕಣ್ಣೆದುರು ಕೊಲೆಯಾದ ಕಾರಣ ಕುಡುಕನಾಗಿ ಮಾರ್ಪಟ್ಟಿರುತ್ತಾನೆ. ಬೆಳಗ್ಗೆ, ಮಧ್ಯಾಹ್ನ ಎನ್ನದೇ ಕುಡಿಯುವ ನಾಯಕನಿಗೆ ಸೀರಿಯರ್ ಕಿಲ್ಲರ್ ಓರ್ವನನ್ನು ಪತ್ತೆಹಚ್ಚಲು ಸಹಾಯ ಬೇಕೆಂದು ಪೊಲೀಸ್ ಕೇಳಿಕೊಳ್ತಾರೆ. ಹೊಸದಾಗಿ ಮದುವೆಯಾದ ಹುಡುಗರನ್ನು ಆ ಕೊಲೆಗಾರ ಸಾಯಿಸುತ್ತಿರುತ್ತಾನೆ. ಇಲಾಖೆಯಲ್ಲಿ ಇಲ್ಲದಿದ್ದರೂ ನಾಯಕ ಯಾವ ರೀತಿ ತನ್ನ ಬುದ್ಧಿಯನ್ನು ಉಪಯೋಗಿಸಿ ಕೊಲೆಗಾರ ಯಾರೆಂದು ಪತ್ತೆಹಚ್ಚುತ್ತಾನೆ ಎಂಬುದೇ ಸಿನಿಮಾ. ಈ ಚಿತ್ರ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
4. ಇಜ್ರಾ - ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾ ಆನಂದ್ ನಟನೆಯ ಇಜ್ರಾ ಸಿನಿಮಾ ಸಹ ನೋಡಲೇಬೇಕಾದ ಕ್ರೈಮ್ ಥ್ರಿಲ್ಲರ್. ಪುರಾತನ ಬಾಕ್ಸ್ ಒಂದನ್ನು ಮನೆಯಲ್ಲಿ ಇಟ್ಟುಕೊಂಡವರೆಲ್ಲಾ ಸಾವನ್ನಪ್ಪುತ್ತಿರುತ್ತಾರೆ. ಈ ಬಾಕ್ಸ್ ನಾಯಕ ಹಾಗೂ ನಾಯಕಿ ಮನೆಗೂ ಬರಲಿದ್ದು, ಈ ಬಾಕ್ಸ್ ಹಿಂದಿನ ಮರ್ಮವೇನು, ಅದನ್ನು ಇಟ್ಟುಕೊಂಡರೆ ಸಾವು ಯಾಕೆ ಬರುತ್ತೆ ಎಂಬುದೇ ಚಿತ್ರದ ಕಥೆ. ಈ ಚಿತ್ರ ಹಿಂದಿಗೆ ಡಿಬಕ್ ಎಂಬ ಶೀರ್ಷಿಕೆಯಡಿಯಲ್ಲಿ ರಿಮೇಕ್ ಆಗಿದ್ದು, ಈ ಚಿತ್ರವೂ ಸಹ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.
5. ಅದಿರನ್ - ಫಾಹದ್ ಫಾಸಿಲ್ ಹಾಗೂ ಸಾಯಿ ಪಲ್ಲವಿ ನಟನೆಯ ಥ್ರಿಲ್ಲರ್ ಸಿನಿಮಾ ಅದಿರನ್. ಮನೋತಜ್ಞನೋರ್ವ ಕಾಡಿನೊಳಗಿನ ರಹಸ್ಯ ಮನೋರೋಗಿಗಳಿರುವ ಕೇಂದ್ರಕ್ಕೆ ಬರಲಿದ್ದು, ಅಲ್ಲಿನ ಅಡೆತಡೆಗಳನ್ನು ಎದುರಿಸಿ, ನಾಯಕಿಯನ್ನು ಹೇಗೆ ಕರೆದುಕೊಂಡು ಹೋಗುತ್ತಾನೆ ಎಂಬುದೇ ಸಿನಿಮಾ. ಈ ಚಿತ್ರ ಸಹ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
6. ನಾಯಟ್ಟು - ಮಾಡದ ಕೊಲೆಯ ಆಪಾದನೆಗೆ ಹಿರಿಯ ಭ್ರಷ್ಟ ಅಧಿಕಾರಿಗಳಿಂದಾಗಿ ಸಿಲುಕಿಕೊಳ್ಳುವ ಮೂವರು ಪೊಲೀಸರು ಎಲ್ಲರ ಕಣ್ತಪ್ಪಿಸಿ ಪಾರಾಗಲು ಯತ್ನಿಸುವ ಥ್ರಿಲ್ಲರ್ ಕಥೆಯೇ ನಾಯಟ್ಟು ಸಿನಿಮಾ. ಈ ಚಿತ್ರ ವೀಕ್ಷಿಸುವಾಗ ಮುಂದೇನಾಗುತ್ತೆ ಎಂಬ ಕುತೂಹಲವನ್ನು ಹೆಜ್ಜೆ ಹೆಜ್ಜೆಗೂ ಸೃಷ್ಟಿಸಲಿದ್ದು, ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
7. ಸಿ ಯು ಸೂನ್ - ಓರ್ವ ಸಾಫ್ಟ್‌ವೇರ್ ಕೆಲಸಗಾರನ ಸೋದರನ ಭಾವಿ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೊ ಮಾಡಿ ನಾಪತ್ತೆಯಾಗಿರುತ್ತಾಳೆ. ಈ ವಿಡಿಯೊ ಲಭಿಸಿದ ನಂತರ ಆಕೆಯ ಬಗ್ಗೆ ಹುಡುಕಾಟ ಶುರುವಾಗಲಿದ್ದು, ಆಕೆ ಸಾಯುವ ಮುನ್ನವೇ ಆಕೆಯನ್ನು ಹುಡುಕುತ್ತಾರಾ ಅಥವಾ ಆಕೆ ಸಾವನ್ನಪ್ಪುತ್ತಾಳಾ ಎಂಬುದೇ ಚಿತ್ರದ ಕಥೆ. ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.
8. ಒಪ್ಪಮ್ - ತನಗೆ ಶಿಕ್ಷೆಯಾಗುವಂತೆ ಮಾಡಿದ ಜಡ್ಜ್ ಓರ್ವನ ಕುಟುಂಬವನ್ನು ಸಾಯಿಸಲು ವ್ಯಕ್ತಿಯೊಬ್ಬ ತೀರ್ಮಾನಿಸುತ್ತಾನೆ ಹಾಗೂ ಆ ಜಡ್ಜ್ ಅನ್ನು ಕೊಂದು ಆತನ ಮಗಳನ್ನು ಸಾಯಿಸಲು ಯೋಜನೆ ಹಾಕ್ತಾನೆ. ಆದರೆ ಆ ಜಡ್ಜ್‌ಗೆ ಬಲು ನಿಷ್ಠೆಯಿಂದ ಇದ್ದ ಕುರುಡನೋರ್ವ ಜಡ್ಜ್ ಮಗಳನ್ನು ಕಾಪಾಡಲು ಮುಂದಾಗ್ತಾನೆ. ದೈತ್ಯ ಖಳನಿಂದ ಆ ಹುಡುಗಿಯನ್ನು ಕುರುಡ ರಕ್ಷಿಸ್ತಾನಾ ಎಂಬುದೇ ಒಪ್ಪಂ ಚಿತ್ರದ ಕಥೆ. ಈ ಚಿತ್ರ ಕನ್ನಡಕ್ಕೆ ಕವಚ ಎಂಬ ಹೆಸರಿನಡಿಯಲ್ಲಿ ರಿಮೇಕ್ ಆಗಿದ್ದು, ಇದರಲ್ಲಿ ಶಿವ ರಾಜ್‌ಕುಮಾರ್ ನಟಿಸಿದ್ದಾರೆ. ಈ ಸಿನಿಮಾ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
9. ಮುಂಬೈ ಪೊಲೀಸ್ - ಎಸಿಪಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ವೇಳೆ ಆತನನ್ನು ಸ್ನೈಪರ್ ಬಳಸಿ ಹತ್ಯೆಗೈಯ್ಯಲಾಗುತ್ತೆ. ಈ ಪ್ರಕರಣವನ್ನು ಭೇದಿಸಲು ಮುಂದಾಗುವ ನಾಯಕನಿಗೆ ಕೊಲೆಗಾರ ಯಾರು ಎಂಬ ವಿಷಯ ತಿಳಿಯುತ್ತೆ. ಆದರೆ ಕೊಲೆಗಾರ ಯಾರು ಎಂದು ತಿಳಿಸುವ ಮುನ್ನವೇ ಆತನಿಗೆ ಅಪಘಾತ ಸಂಭವಿಸಿ ಹಳೆಯದೆಲ್ಲಾ ಮರೆತು ಹೋಗುತ್ತೆ. ಹೀಗೆ ಹಳೆಯದ್ದನ್ನೆಲ್ಲಾ ಮರೆತ ಆ ಪೊಲೀಸ್ ಎಲ್ಲವನ್ನೂ ನೆನಪಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡ್ತಾನೆ ಹಾಗೂ ಅದರಲ್ಲಿ ಆತ ಯಶಸ್ವಿಯಾಗಿ ಕೊಲೆಗಾರ ಯಾರು ಎಂಬುದು ತಿಳಿಯುತ್ತಾ ಎಂಬುದೇ ಚಿತ್ರದ ಕಥೆ. ಈ ಚಿತ್ರ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
10. ನೈಟ್ ಡ್ರೈವ್ - ಜೋಡಿಯೊಂದು ರಾತ್ರಿ ಕಾರಿನಲ್ಲಿ ಮೋಜು ಮಸ್ತಿಗೆಂದು ಲಾಂಗ್ ಡ್ರೈವ್ ತೆರಳಿರುತ್ತಾರೆ. ಆದರೆ ಅಲ್ಲಿ ನಡೆಯುವ ಅಪಘಾತವೊಂದು ಅವರ ಜೀವನವನ್ನೇ ಅಂತ್ಯಗೊಳಿಸುವಂತಹ ಮಟ್ಟಕ್ಕೆ ತಂದುಬಿಡುತ್ತೆ. ಈ ಥ್ರಿಲ್ಲರ್ ಸಿನಿಮಾ ನೋಡಲೇಬೇಕಾದ ಮಲಯಾಳಂ ಥ್ರಿಲ್ಲರ್‌ಗಳಲ್ಲಿ ಒಂದು. ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಲಭ್ಯವಿದೆ.


Click it and Unblock the Notifications











