ಓಟಿಟಿಯಲ್ಲಿ ಲಭ್ಯವಿರುವ ಮಲಯಾಳಂನ ಬೆಸ್ಟ್ ಹಾರರ್ ಥ್ರಿಲ್ಲರ್ ಚಿತ್ರಗಳಿವು
ಹಾರರ್ ಥ್ರಿಲ್ಲರ್.. ಈ ಕೆಟಗರಿಯ ಸಿನಿಮಾಗಳಿಗೆ ಒಂದು ಪ್ರತ್ಯೇಕವಾದ ದೊಡ್ಡ ಅಭಿಮಾನಿ ಬಳಗವೇ ಇದೆ. ಹಾರರ್ ಚಿತ್ರ ಎಂದು ಪ್ರೇಕ್ಷಕರ ಎದುರು ಬರುವ ಸಿನಿಮಾಗಳೆಲ್ಲಾ ಪ್ರೇಕ್ಷಕರನ್ನು ಹೆದರಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಕೆಲ ಚಿತ್ರಗಳು ಹೆದರಿಸುವ ಬದಲು ಪ್ರೇಕ್ಷಕರು ನಕ್ಕು ಇದೆಂತ ಹಾರರ್ ಸಿನಿಮಾ ಗುರೂ ಎಂದು ಕೆಟ್ಟ ಪ್ರತಿಕ್ರಿಯೆ ಪಡೆದುಕೊಂಡದ್ದೂ ಸಹ ಇದೆ.
ಒಂದು ಹಾರರ್ ಚಿತ್ರ ಗೆಲ್ಲಬೇಕೆಂದರೆ ಆ ಚಿತ್ರ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕನ ಗಮನ ಆಚೀಚೆ ಹೋಗದ ಹಾಗೆ ಹಿಡಿದಿಟ್ಟುಕೊಳ್ಳಬೇಕು, ಬ್ಯಾಕ್‌ಗ್ರೌಂಡ್‌ನಲ್ಲಿ ಭಯಾನಕ ಸಂಗೀತವಿರಬೇಕು, ಅದಕ್ಕೆ ತಕ್ಕಂತೆ ಪ್ರೇಕ್ಷಕರ ಎದೆಬಡಿತ ಜೋರಾಗುವಂತಹ ದೃಶ್ಯಗಳಿರಬೇಕು. ಇಷ್ಟು ಎಫೆಕ್ಟ್ ಇಲ್ಲದಿದ್ದರೆ ಆ ಚಿತ್ರ ಗೆಲ್ಲುವುದು ಕಷ್ಟ. ಇನ್ನು ಕೆಲ ಚಿತ್ರಗಳು ಕಮರ್ಷಿಯಲ್ ಸಿನಿಮಾಗಳ ಕಥೆಯಲ್ಲಿಯೇ ಹಾರರ್ ಎಲಿಮೆಂಟ್ ಸೇರಿಸಿ ಕಾಮಿಡಿ ಜತೆ ಹಾರರ್ ಅಂಶಗಳನ್ನು ಹೊಂದಿದ್ದರೆ, ಇನ್ನೂ ಕೆಲ ಚಿತ್ರಗಳು ಆರಂಭದಿಂದ ಅಂತ್ಯದವರೆಗೂ ಬರೀ ಹಾರರ್ ಅಂಶಗಳನ್ನೇ ಹೊಂದಿರುತ್ತವೆ.

ಇನ್ನು ಥ್ರಿಲ್ಲರ್ ಸಿನಿಮಾಗಳೆಂದ ಕೂಡಲೇ ತಲೆಗೆ ಬರುವ ಮಲಯಾಳಂ ಚಿತ್ರರಂಗದಲ್ಲಿ ಎವರ್‌ಗ್ರೀನ್ ಹಾರರ್ ಥ್ರಿಲ್ಲರ್ ಸಿನಿಮಾಗಳಿಗೆ. ಸಾಮಾನ್ಯ ಥ್ರಿಲ್ಲರ್ ಸಿನಿಮಾಗಳನ್ನೇ ವಿಭಿನ್ನವಾಗಿ ಕಟ್ಟಿಕೊಡುವ ಮಲಯಾಳಂ ಚಿತ್ರರಂಗದವರು ಹಾರರ್ ಸಿನಿಮಾಗಳನ್ನು ಮಾಡುವುದರಲ್ಲಿಯೂ ನಿಸ್ಸೀಮರು. ಅಂತಹ ಮಲಯಾಳಂ ಚಿತ್ರರಂಗದಿಂದ ಬಂದಿರುವ ಹಾರರ್ ಥ್ರಿಲ್ಲರ್ ಸಿನಿಮಾಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿದೆ..
1. ಮಣಿಚಿತ್ರತಳು: ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಾರರ್ ಥ್ರಿಲ್ಲರ್ ಆಪ್ತಮಿತ್ರ ಚಿತ್ರದ ಮೂಲ ಚಿತ್ರವೇ ಈ ಮಣಿಚಿತ್ರತಳು. ಹೌದು, 1993ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ನಂತರ ಕನ್ನಡ, ತಮಿಳು, ಬೆಂಗಾಲಿ ಹಾಗೂ ಹಿಂದಿ ಭಾಷೆಗಳಿಗೆ ರಿಮೇಕ್ ಆಯಿತು. ಆಪ್ತಮಿತ್ರ ಕಥೆ ಬಗ್ಗೆ ಬಹುತೇಕರಿಗೆ ತಿಳಿದಿರುವುದಿಂದ ಈ ಚಿತ್ರದ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಈ ಚಿತ್ರ ಅಮೆಜಾನ್ ಪ್ರೈಮ್ ಹಾಗೂ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.
2. ಭಾರ್ಗವಿ ನಿಲಯಂ: ಭಾರ್ಗವಿ ನಿಲಯ ಮಲಯಾಳಂ ಚಿತ್ರ ಇತಿಹಾಸದ ಭಯಾನಕ ಚಿತ್ರಗಳಲ್ಲಿ ಒಂದಾಗಿದೆ. ವೈಕ್ಕೊಮ್ ಮುಹಮ್ಮದ್ ಬಷೀರ್ ಬರೆದಿರುವ ಕಿರುಕಥೆ ನೀಲವೆಲಿಚಂ ಆಧಾರಿತ ಚಿತ್ರ ಇದಾಗಿದೆ. ಮಧು ಎಂಬ ಬರಹಗಾರ ವಿಜಯ ಭಾರ್ಗವಿ ಎಂಬ ಪ್ರೇತಮಹಿಳೆಯ ಮೇಲೆ ಆಸಕ್ತಿಯಿಂದ ಕಥೆ ಬರೆಯಲು ಮುಂದಾಗಿ ಅವರಿಬ್ಬರ ನಡುವೆ ಆಕರ್ಷಣೆ ಹಾಗೂ ಸ್ನೇಹ ಬೆಳೆಯುತ್ತದೆ. ಬಳಿಕ ಇದು ಯಾವ ಹಂತ ತಲುಪಲಿದೆ ಎಂಬುವುದೇ ಚಿತ್ರದ ಕಥೆ. ಈ ಚಿತ್ರ ಯುಟ್ಯೂಬ್‌ನಲ್ಲಿ ಲಭ್ಯವಿದೆ.

3. ಇಜ್ರಾ: ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾ ಆನಂದ್ ನಟನೆಯ ಇಜ್ರಾ ಸಿನಿಮಾ ಸಹ ನೋಡಲೇಬೇಕಾದ ಹಾರರ್ ಥ್ರಿಲ್ಲರ್. ಪುರಾತನ ಬಾಕ್ಸ್ ಒಂದನ್ನು ಮನೆಯಲ್ಲಿ ಇಟ್ಟುಕೊಂಡವರೆಲ್ಲಾ ಸಾವನ್ನಪ್ಪುತ್ತಿರುತ್ತಾರೆ. ಈ ಬಾಕ್ಸ್ ನಾಯಕ ಹಾಗೂ ನಾಯಕಿ ಮನೆಗೂ ಬರಲಿದ್ದು, ಈ ಬಾಕ್ಸ್ ಹಿಂದಿನ ಮರ್ಮವೇನು, ಅದನ್ನು ಇಟ್ಟುಕೊಂಡರೆ ಸಾವು ಯಾಕೆ ಬರುತ್ತೆ ಎಂಬುದೇ ಚಿತ್ರದ ಕಥೆ. ಈ ಚಿತ್ರ ಹಿಂದಿಗೆ ಡಿಬಕ್ ಎಂಬ ಶೀರ್ಷಿಕೆಯಡಿಯಲ್ಲಿ ರಿಮೇಕ್ ಆಗಿದ್ದು, ಈ ಚಿತ್ರವೂ ಸಹ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.
4. ಆಕಾಶ ಗಂಗಾ: ನಿರ್ದೇಸಕ ವಿಜಯನ್ ನಿರ್ದೇಶನದ ಈ ಚಿತ್ರ ದೊಡ್ಡ ಹಿಟ್. ಇದೊಂದು ಸೇಡಿನ ಹಾರರ್ ಕಥೆಯಾಗಿದ್ದು ಕಪ್ಪು ಬೆಕ್ಕು ಹಾಗೂ ಬಿಳಿ ಸೀರೆಯುಟ್ಟ ಸುಂದರ ಮಹಿಳೆಯ ಆತ್ಮದ ದೃಶ್ಯಗಳುಳ್ಳ ಸಾಮಾನ್ಯ ಹಾರರ್ ಚಿತ್ರವಾಗಿದೆ. ಆದರೂ ಚಿತ್ರದ ಮೇಕಿಂಗ್ ಹಾಗೂ ಕಥೆ ಹೇಳಿರುವ ರೀತಿ ಪ್ರೇಕ್ಷಕರಿಗೆ ಕಿಕ್ ನೀಡಲಿದೆ. ಈ ಚಿತ್ರ ಯುಟ್ಯೂಬ್‌ನಲ್ಲಿ ಲಭ್ಯವಿದೆ.
5. ನೈನ್: ನೈನ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ಮಾಣದಲ್ಲಿ ಮೂಡಿಬಂದ ಮೊದಲ ಸಿನಿಮಾ. ಇದೊಂದು ಸೈನ್ಸ್ ಹಾರರ್ ಥ್ರಿಲ್ಲರ್. ಉಲ್ಕೆಯೊಂದು ಭೂಮಿಯನ್ನು ದಾಟಿ ಹೋಗುವ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಕತ್ತಲೆ ಆವರಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಜನರು ಹೇಗೆ ಪಾರಾಗುತ್ತಾರೆ ಎಂಬ ಪ್ರಶ್ನೆಯೊಂದಿಗೆ ಆರಂಭವಾಗುವ ಚಿತ್ರದಲ್ಲಿ ಬಳಿಕ ನಾಯಕ ಹಾಗೂ ಆತನ ಮಗನ ವೈಯಕ್ತಿಕ ವಿಚಾರದ ಸುತ್ತ ಸುತ್ತುತ್ತೆ. ನಾಯಕನ ಮಗನಿಗೆ ನೀಲಿ ಕಣ್ಣಿನ ಮಹಿಳೆಯೋರ್ವಳು ಕಾಣಿಸಿಕೊಳ್ಳಲಿದ್ದು, ಇದರಿಂದ ಅ ಬಾಲಕ ಹೇಗೆ ಪಾರಾಗುತ್ತಾನೆ ಎಂಬುದೇ ಚಿತ್ರ. ಇನ್ನು ಕ್ಲೈಮ್ಯಾಕ್ಸ್ ಟ್ವಿಸ್ಟ್ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸುವುದಂತೂ ಪಕ್ಕಾ. ಈ ಚಿತ್ರ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.


Click it and Unblock the Notifications











