'ಲೂಪ್ ಲಪೇಟಾ'ಗೆ ವಿದೇಶದಲ್ಲೂ ಮೆಚ್ಚುಗೆಯ ಮಹಾಪೂರ
ಆಗೊಮ್ಮೆ ಈಗೊಮ್ಮೆ ಭಾರತೀಯ ಸಿನಿಮಾಗಳು ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದವು. ಆದರೆ ಈಗ ಒಟಿಟಿ ಕೃಪೆಯಿಂದ ಭಾರತದ ಹಲವು ಭಾಷೆಯ ಸಿನಿಮಾಗಳು ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸುಲಭವಾಗಿ ತಲುಪುತ್ತಿವೆ ಹಾಗೂ ಮೆಚ್ಚುಗೆ ಗಳಿಸುತ್ತಿವೆ.
ಕೆಲವು ದಿನಗಳ ಹಿಂದಷ್ಟೆ ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿಯ 'ಲೂಪ್ ಲಪೇಟಾ' ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾವು ಭಾರತ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಮೆಚ್ಚುಗೆ ಗಳಿಸಿದೆ.
ಫೆಬ್ರವರಿ 4 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದ ಈ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಭಾರತದಲ್ಲಿ ಟ್ರೆಂಡಿಂಗ್ ನಂಬರ್ 1 ಸ್ಥಾನದಲ್ಲಿದೆ. ಇದೀಗ ನೆಟ್‌ಫ್ಲಿಕ್ಸ್‌ನ ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿರುವುದು ವಿಶೇಷ. ಭಾರತ ಮಾತ್ರವೆ ಅಲ್ಲದೆ ಹತ್ತು ದೇಶಗಳಲ್ಲಿನ ಟಾಪ್ ಹತ್ತು ಸಿನಿಮಾಗಳ ಪಟ್ಟಿಯಲ್ಲಿ 'ಲೂಪ್ ಲಪೇಟಾ' ಸಿನಿಮಾ ಸ್ಥಾನ ಪಡೆದಿದೆ.
ಅರಬ್, ಶ್ರೀಲಂಕಾ, ಬಾಂಗ್ಲಾದೇಶ ಇನ್ನೂ ಹಲವು ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ ಹತ್ತರ ಸ್ಥಾನದಲ್ಲಿದೆ 'ಲೂಪ್ ಲಪೇಟಾ'.

'ಲೂಪ್ ಲಪೇಟಾ' ಸಿನಿಮಾ ಭಿನ್ನ ಮಾದರಿಯ ಕತೆ ಹಾಗೂ ದೃಶ್ಯ ಸಂಯೋಜನೆಯನ್ನು ಹೊಂದಿದೆ. ಭಾರಿ ಮೊತ್ತದ ಹಣ ಕಳೆದುಕೊಂಡು ಡಾನ್ ಒಬ್ಬನಿಂದ ಸಮಸ್ಯೆಗೆ ಸಿಲುಕಿದ ಬಾಯ್‌ಫ್ರೆಂಡ್ ಅನ್ನು ರಕ್ಷಿಸುವ ಪಾತ್ರವನ್ನು ತಾಪ್ಸಿ ಪನ್ನು 'ಲೂಟ್ ಲಪೇಟಾ' ನಿರ್ವಹಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಹೊಂದಿದ್ದು, ನೋಡಿರುವ ಘಟನೆಗಳನ್ನೇ ಮತ್ತೆ ಮತ್ತೆ ಭಿನ್ನ ರೀತಿಯಲ್ಲಿ ತೋರಿಸುವ ಭಿನ್ನ ಟ್ರಿಕ್ ಅನ್ನು ಈ ಸಿನಿಮಾದಲ್ಲಿ ಬಳಸಲಾಗಿದೆ. ಟೈಂ ಟ್ರಾವೆಲ್ ಕತೆಯನ್ನೂ ಸಹ ಈ ಸಿನಿಮಾ ಒಳಗೊಂಡಿದೆ.
ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿರುವ ನಟಿ ತಾಪ್ಸಿ ಪನ್ನು, ''ಈ ಸಿನಿಮಾ ಬಿಡುಗಡೆ ಆಗಲೆಂದು ನಾನು ಕಾತರಳಾಗಿ ಕಾಯುತ್ತಿದ್ದೆ. ಇದು ಸಾಮಾನ್ಯ ಸಿನಿಮಾ ಅಲ್ಲ ಎಂಬುದು ಗೊತ್ತಿತ್ತು. ಜನ ಈ ಸಿನಿಮಾದಲ್ಲಿ ನನ್ನ ಅಭಿನಯ ನೋಡಲೆಂದು ಕಾಯುತ್ತಿದ್ದೆ. ನಮ್ಮ ಈ ಸಿನಿಮಾ ಭಾರತದ ಹಾಗೂ ವಿದೇಶಗಳಲ್ಲಿ ಟ್ರೆಂಡ್ ಆಗುತ್ತಿರುವುದು ನೋಡಲು ಬಹಳ ಖುಷಿಯಾಗುತ್ತದೆ. ಸಿನಿಮಾ ಬಗ್ಗೆ ಪ್ರೀತಿ ಹರಿದು ಬರುತ್ತಿರುವುದು ಸಂತಸ ತಂದಿದೆ'' ಎಂದಿದ್ದಾರೆ.
ಸಿನಿಮಾದ ನಟ ತಾಹಿರ್ ರಾಜ್ ಮಾತನಾಡಿ, ''ಕೇವಲ ಒಂದು ತಿಂಗಳ ಅಂತರದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ ಇದು. 'ಲೂಪ್ ಲಪೇಟ' ಸಿನಿಮಾ ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿ ಟ್ರೆಂಡ್ ಆಗುತ್ತಿರುವುದು ಬಹಳ ಖುಷಿ ತಂದಿದೆ. ಭಾರತ ಮಾತ್ರವೇ ಅಲ್ಲದೆ ಇನ್ನೂ ಹತ್ತು ಹಲವು ದೇಶಗಳಲ್ಲಿ ನಮ್ಮ ಸಿನಿಮಾ ಟಾಪ್ ಹತ್ತರಲ್ಲಿ ಟ್ರೆಂಡ್ ಆಗುತ್ತಿರುವುದು ಖುಷಿಯ ವಿಚಾರ. ನಮ್ಮ ಸಿನಿಮಾ ಬಗ್ಗೆ ಪ್ರೀತಿ ಹೆಚ್ಚುತ್ತಲೇ ಇದೆ'' ಎಂದಿದ್ದಾರೆ.
'ಲೂಪ್ ಲಪೇಟ' ಸಿನಿಮಾವನ್ನು ಆಕಾಶ್ ಭಾಟಿಯಾ ನಿರ್ದೇಶನ ಮಾಡಿದ್ದು, ಈ ಸಿನಿಮಾವು 'ರನ್ ಲೋಲಾ ರನ್' ಸಿನಿಮಾವನ್ನು ಆಧರಿಸಿದೆ. ಸಿನಿಮಾವನ್ನು ಸೋನಿ ಪಿಕ್ಚರ್ಸ್ ಮತ್ತು ಎಲಿಪ್ಸಿಸ್ ಎಂಟರ್ಟೈನ್‌ಮೆಂಟ್ ನಿರ್ಮಾಣ ಮಾಡಿದೆ.


Click it and Unblock the Notifications