Sidlingu 2 Ott: ಓಟಿಟಿಗೆ ಬಂದ 'ಸಿದ್ಲಿಂಗು'- 2; ಈಗ್ಲೇ ನೋಡಿ ನಕ್ಕು ಹಗುರಾಗಿ
ಲೂಸ್ ಮಾದ ಯೋಗಿ ನಟನೆಯ 'ಸಿದ್ಲಿಂಗು'-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ ಈಗ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 13 ವರ್ಷಗಳ ಹಿಂದೆ ಬಂದಿದ್ದ 'ಸಿದ್ಲಿಂಗು' ಸೀಕ್ವೆಲ್ ಇದು. ವಿಜಯ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಯೋಗಿ ಜೊತೆ ಸೋನು ಗೌಡ, ಸುಮನ್ ರಂಗನಾಥ್ ಸಹ ಮಿಂಚಿದ್ದಾರೆ.
ಶ್ರೀಹರಿ ಹಾಗೂ ರಾಜು ಶ್ರೇಗರ್ 'ಸಿದ್ಲಿಂಗು'-2 ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅನೂಪ್ ಸಿಳೀನ್ ಸಂಗೀತ, ಪ್ರಸನ್ನ ಗುರ್ಲಕರೆ ಛಾಯಾಗ್ರಹಣ ಚಿತ್ರಕ್ಕಿತ್ತು. ಫೆಬ್ರವರಿ 14ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ವಿಫಲವಾಗಿತ್ತು. ಬರೋಬ್ಬರಿ 5 ತಿಂಗಳ ಬಳಿಕ ಸಿನಿಮಾ ಓಟಿಟಿಗೆ ಬಂದಿದೆ. ಬಹಳ ಹಿಂದೆಯೇ ಪ್ರೈಂ ವೀಡಿಯೋದಲ್ಲಿ ಸಿನಿಮಾ ಬಿಡುಗಡೆಗೆ ಒಪ್ಪಂದ ಆಗಿತ್ತು. ಆದರೆ ಸಿನಿಮಾ ತಡವಾಗಿ ಬಂದಿದೆ.

ಮೊದಲ ಭಾಗದಲ್ಲಿ ಎಲ್ಲಿ ಕತೆ ನಿಂತಿತ್ತೋ ಅಲ್ಲಿಂದಲೇ ಪಾರ್ಟ್-2 ಕಥೆ ಆರಂಭವಾಗುತ್ತದೆ. ಕಾರ್ ಖರೀದಿ ಮಾಡುವ ಸಿದ್ಲಿಂಗು ಕನಸಿನ ಸುತ್ತಾ 13 ವರ್ಷಗಳ ಹಿಂದೆ ಕಥೆ ಬಂದಿತ್ತು. ಇನ್ನೇನು ಕಾರ್ ಸಿಕ್ತು ಎನ್ನುವ ವೇಳೆಗೆ ಎಡವಟ್ಟಾಗಿತ್ತು. ಮತ್ತೊಂದು ಕಡೆ ಮಂಗಳಾ ಟೀಸರ್(ರಮ್ಯಾ) ಕೂಡ ಸತ್ತು ಸಿದ್ಲಿಂಗು ಒಂಟಿಯಾಗಿದ್ದ. ಸೀಕ್ವೆಲ್‌ನಲ್ಲಿ ಮತ್ತಷ್ಟು ಹೊಸ ಜೀವಗಳು ಅವನ ಬದುಕಿಗೆ ಎಂಟ್ರಿ ಕೊಡುತ್ತವೆ. ಮತ್ತೆ ಕಾರು ಕೊಂಡುಕೊಳ್ಳುವ ಪ್ರಯತ್ನ ಮುಂದುವರೆಯುತ್ತದೆ. ಮುಂದೇನು? ಎನ್ನುವುದು ಇನ್ನುಳಿದ ಕಥೆ.
ವಿಜಯ ಪ್ರಸಾದ್ ಸಿನಿಮಾ ಅಂದ್ರೆ ಕಾಮಿಡಿ ಕಿಕ್ ಜೋರಾಗಿರುತ್ತದೆ. ಅದೇ ಕಾರಣಕ್ಕೆ ಓಟಿಟಿಯಲ್ಲಿ 'ಸಿದ್ಲಿಂಗು'-2 ಸಿನಿಮಾ ನೋಡಲು ಸಾಕಷ್ಟು ಜನ ಕಾಯುತ್ತಿದ್ದರು. ಸದ್ಯ ಈಗ ಅಮೇಜಾನ್ ಪ್ರೈಂ ವೀಡಿಯೋಗೆ ಸಿನಿಮಾ ಬಂದಿದ್ದು ವೀಕ್ಷಣೆಗೆ ಲಭ್ಯವಿದೆ. ಎರಡು ದಿನಗಳಿಂದ ಯುಕೆ ಹಾಗೂ ಯುಎಸ್ ಪ್ರೈಂ ಚಂದಾದಾರರಿಗೆ ಮಾತ್ರ ಸಿನಿಮಾ ವೀಕ್ಷಣೆಗೆ ಲಭ್ಯವಿತ್ತು. ಈ ಭಾರತದಲ್ಲಿ ಕೂಡ ನೋಡಬಹುದು.
ಸಾಮಾನ್ಯವಾಗಿ ನಿರ್ದೇಶಕ ವಿಜಯ ಪ್ರಸಾದ್ ಸಿನಿಮಾಗಳಲ್ಲಿ ಪೋಲಿ, ಡಬಲ್ ಮೀನಿಂಗ್ ಡೈಲಾಗ್ಸ್ ಹೆಚ್ಚು ಇರುತ್ತಿತ್ತು. ಆದರೆ ಈ ಚಿತ್ರದಲ್ಲಿ ಅದಕ್ಕೆ ಬ್ರೇಕ್ ಆಗಿ ಒಂದು ನೀಟ್ ಸಿನಿಮಾ ಕೊಡುವ ಪ್ರಯತ್ನ ಮಾಡಿದ್ದರು. ಈ ವಾರ ಸಾಕಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ. ಕನ್ನಡ ಸಿನಿರಸಿಕರು 'ಸಿದ್ಲಿಂಗು -2' ಸಿನಿಮಾ ನೋಡಲು ಕಾಯುವಂತಾಗಿದೆ.

ಕನ್ನಡದ ಕೆಲ ಸಿನಿಮಾಗಳನ್ನು ಹೀಗೆ ಮೊದಲು ಯುಕೆ ಹಾಗೂ ಯುಎಸ್‌ನಲ್ಲಿ ಪ್ರೈಂ ವೀಡಿಯೋ ರಿಲೀಸ್ ಮಾಡುತ್ತದೆ. ಬಳಿಕ ಭಾರತದಲ್ಲಿ ಸಿಗುವಂತಾಗುತ್ತದೆ. ಅಲ್ಲಿ ಬಿಡುಗಡೆಯಾದ ನಾಲ್ಕೈದು ದಿನಗಳ ಬಳಿಕ ಇಲ್ಲಿ ವೀಕ್ಷಣೆಗೆ ಲಭ್ಯವಾಗುತ್ತದೆ. ಅದೇ ರೀತಿ ಈಗ ಎಲ್ಲಾ ಕಡೆ ಸಿನಿಮಾ ನೋಡಬಹುದಾಗಿದೆ.
'ಸಿದ್ಲಿಂಗು'-2 ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಆದರೆ ಹಿಂದಿನ ಸಿನಿಮಾದಲ್ಲಿ ನಟಿ ರಮ್ಯಾ ನಾಯಕಿಯಾಗಿ ಮಿಂಚಿದ್ದರು. ಈ ಬಾರಿ ಅವರು ಇಲ್ಲದೇ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಕೊಂಚಮಟ್ಟಿಗೆ ವಿಫಲವಾಯಿತು. ಅದ್ಯಾಕೋ ಈ ವರ್ಷ ಕನ್ನಡದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದ ಕೆಲ ಸಿನಿಮಾಗಳು ಕೂಡ ಗೆಲ್ಲಲಿಲ್ಲ. ಜುಲೈ 18ಕ್ಕೆ ತೆರೆಗೆ ಬರಲಿರುವ 'ಎಕ್ಕ' ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಆ ಬಳಿಕ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಮುಂದೆ '45', 'ಡೆವಿಲ್', 'KD', 'ಕಾಂತಾರ- 1' ಸೇರಿ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.


Click it and Unblock the Notifications











