Maaveeran: ಶಿವ ಕಾರ್ತಿಕೇಯನ್ ಲೇಟೆಸ್ಟ್ ಹಿಟ್ ಚಿತ್ರ 'ಮಾವೀರನ್' ಓಟಿಟಿ ಬಿಡುಗಡೆ ದಿನಾಂಕ ಪ್ರಕಟ
ಈ ವರ್ಷ ತಮಿಳು ಚಿತ್ರರಂಗದಿಂದ ಒಳ್ಳೊಳ್ಳೆ ಕಥಾ ಹಂದರವಿರುವ ಸಿನಿಮಾಗಳು ಹೊರಬರುತ್ತಿದ್ದು, ಹಿಟ್ ಲಿಸ್ಟ್ ಸಹ ದೊಡ್ಡದಾಗುತ್ತಲೇ ಸಾಗುತ್ತಿದೆ. ಹೀಗೆ ತಮಿಳು ಸಿನಿಮಾದ ಹಿಟ್ ಲಿಸ್ಟ್‌ಗೆ ಹೊಸ ಸೇರ್ಪಡೆಯಾಗಿರುವ ಹೊಸ ಚಿತ್ರ ಶಿವ ಕಾರ್ತಿಕೇಯನ್ ನಟನೆಯ ಮಾವೀರನ್. ಹೌದು, ಜುಲೈ 14ರಂದು ಬಿಡುಗಡೆಗೊಂಡ ಮಾವೀರನ್ ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಸದ್ದು ಮಾಡಿದ ನಂತರ ಈಗ ಓಟಿಟಿಗೆ ಲಗ್ಗೆ ಇಡಲು ಮುಂದಾಗಿದೆ.
ಹೌದು, ಮಾವೀರನ್ ಚಿತ್ರ ಇದೇ ತಿಂಗಳ 11ರಂದು ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ಈ ಮಾವೀರನ್ ಚಿತ್ರ ಒಂದು ಪೊಲಿಟಿಕಲ್ ಕಾಮಿಡಿ ಎಂಟರ್‌ಟೈನರ್ ಆಗಿದ್ದು, ಕಳೆದ ವರ್ಷ ಬಿಗ್ ಬಜೆಟ್‌ನ ಪ್ರಿನ್ಸ್ ಚಿತ್ರದಲ್ಲಿ ನಟಿಸಿ ದೊಡ್ಡ ನಷ್ಟ ಅನುಭವಿಸಿ ಕೈಸುಟ್ಟುಕೊಂಡಿದ್ದ ನಟ ಶಿವ ಕಾರ್ತಿಕೇಯನ್ ಈ ಮಾವೀರನ್ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.

ಚಿತ್ರದ ಕಥೆ ಏನು?
ಇನ್ನು ಮಾವೀರನ್ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಗೆಲ್ಲಲು ಕಾರಣ ಚಿತ್ರದ ವಿಭಿನ್ನ ಹಾಗೂ ನೂತನ ಕಥೆ ಎಂದರೆ ತಪ್ಪಾಗಲಾರದು. ಮಾಡೋನ್ ಅಶ್ವಿನ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಸ್ಲಂನಲ್ಲಿ ತನ್ನ ತಾಯಿ ಹಾಗೂ ತಂಗಿ ಜತೆ ಬದುಕು ಬಂದಂತೆ ಸ್ವೀಕರಿಸಿ ಜೀವನ ಸಾಗಿಸಬೇಕು ಎನ್ನುವ ಫಿಲಾಸಫಿ ಹೊಂದಿರುವ ನಾಯಕ ವಾಸ ಮಾಡುತ್ತಿರುತ್ತಾನೆ. ಯಾರಿಗೂ ಎದುರು ಮಾತನಾಡಲು ಧೈರ್ಯವಿರದ ನಾಯಕ ಹಾಗೂ ಇಡೀ ಸ್ಲಂನ ಜನರನ್ನು ವಸತಿ ಯೋಜನೆಯಡಿಯಲ್ಲಿ ಹೊಸ ಅಪಾರ್ಟ್‌ಮೆಂಟ್‌ವೊಂದಕ್ಕೆ ಅಲ್ಲಿನ ಎಂಎಲ್ಎ ಸ್ಘಳಾಂತರಿಸುತ್ತಾನೆ. ವೃತ್ತಿಯಲ್ಲಿ ವ್ಯಂಗ್ಯ ಚಿತ್ರಕಾರನಾಗಿರುವ ನಾಯಕನಿಗೆ ನಡೆಯುವ ಒಂದು ಘಟನೆಯಿಂದ ತಾನೇ ಬರೆಯುವ ಊಹಾ ವ್ಯಂಗ್ಯ ಚಿತ್ರ ಸರಣಿಯ ನಾಯಕನಾದ ಮಾವೀರನ್‌ನ ಶಕ್ತಿ ಬರುತ್ತದೆ. ಅಶರೀರವಾಣಿ ಹೇಳುವ ಪ್ರತಿಯೊಂದು ವಿಷಯವೂ ಜರುಗಲು ಆರಂಭಿಸುತ್ತದೆ. ಇನ್ನು ಜನರಿಗೆ ಎಂಎಲ್ಎ ನೀಡಿರುವ ಮನೆಗಳು ಕಳಪೆ ಎಂಬ ಸತ್ಯ ಹೊರಬೀಳುತ್ತೆ. ಆದರೆ ಎಂಎಲ್ಎ ಗೂಂಢಾಗಿರಿಯ ಮುಂದೆ ಯಾರೊಬ್ಬರೂ ಸಹ ದನಿ ಎತ್ತಲಾಗುವುದಿಲ್ಲ.
ಹೀಗಿರುವಾಗ ಎಲ್ಲರಿಗೂ ನಾಯಕ ತನಗೆ ಸಿಗುವ ಮಾವೀರನ್ ಶಕ್ತಿಯಿಂದ ಚಮತ್ಕಾರಗಳನ್ನು ಮಾಡಲು ಆರಂಭಿಸುತ್ತಾನೆ. ಹೀಗೆ ತನಗೇ ತಿಳಿಯದೇ ಸಿಗುವ ಶಕ್ತಿಯಿಂದ ನಾಯಕ ಏನೆಲ್ಲಾ ಮಾಡ್ತಾನೆ, ಆ ಶಕ್ತಿಯಿಂದ ಎಂಎಲ್ಎ ವಂಚನೆಗೆ ಪಾಠ ಕಲಿಸುತ್ತಾನಾ ಅಥವಾ ಆ ಶಕ್ತಿ ಕೆಲ ದಿನಗಳ ಬಳಿಕ ಮಾಯವಾಗಿ ಮತ್ತೆ ನಾಯಕ ಪೀಕಲಾಟಕ್ಕೆ ಸಿಲುಕಿಕೊಳ್ತಾನಾ ಎಂಬುದೇ ಚಿತ್ರದ ಕಥೆ. ಇಷ್ಟು ಒಳ್ಳೆಯ ಕಥೆಯನ್ನು ನಿರ್ದೇಶಕ ಹಾಸ್ಯ ರೂಪದಲ್ಲಿ ತೆರೆ ಮೇಲೆ ತಂದಿರುವುದು ಚಿತ್ರ ಜನರಿಗೆ ಇಷ್ಟವಾಗಲು ಪ್ರಮುಖ ಕಾರಣವಾಗಿದೆ. ಆರಂಭದಿಂದ ಅಂತ್ಯದವರೆಗೂ ಡಬಲ್ ಮೀನಿಂಗ್ ಇಲ್ಲದೇ ನಗಿಸುವ ಪೊಲಿಟಿಕಲ್ ಕಾಮಿಡಿ ಎಂಟರ್‌ಟೈನರ್ ಚಿತ್ರ ಇದಾಗಿದ್ದು, ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಸಿನಿಮಾವಾಗಿದೆ.


Click it and Unblock the Notifications











