Mahavatar Narsimha OTT: ಕೊನೆಗೂ ಓಟಿಟಿಗೆ ಬಂದ 'ಮಹಾವತಾರ್ ನರಸಿಂಹ'; ಮಕ್ಕಳೊಟ್ಟಿಗೆ ಈಗ್ಲೇ ನೋಡಿ
ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ 'ಮಹಾವತಾರ್ ನರಸಿಂಹ' ಇದೀಗ ಓಟಿಟಿಗೆ ಬಂದಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಈ ಆನಿಮೇಷನ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ನರಸಿಂಹ ಅವತಾರ ತಾಳಿ ಹಿರಣ್ಯಕಶ್ಯಪುನನ್ನು ಶ್ರೀವಿಷ್ಣು ಸಂಹಾರ ಮಾಡಿದ ಕಥೆಯನ್ನು ಚಿತ್ರಕ್ಕೆ ಹೇಳಲಾಗಿದೆ. ಕ್ಲೀಮ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಿಡುಗಡೆ ಮಾಡಿತ್ತು.
ಸ್ಟಾರ್ ನಟರಿಲ್ಲದೇ ಬರೀ ಆನಿಮೇಷನ್ ಪಾತ್ರಗಳನ್ನು ತೆರೆಮೇಲೆ ಕಟ್ಟಿಕೊಟ್ಟು ಚಿತ್ರತಂಡ ಮ್ಯಾಜಿಕ್ ಮಾಡಿತ್ತು. ಜುಲೈ 25ರಂದು ತೆರೆಗೆ ಬಂದಿದ್ದ ಸಿನಿಮಾ 2 ತಿಂಗಳ ಬಳಿಕ ಓಟಿಟಿಗೆ ಬಂದಿದೆ. ಯಶಸ್ವಿಯಾಗಿ 50 ದಿನ ಪೂರೈಸಿದ ಸಿನಿಮಾ ಅಂದಾಜು 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಓಟಿಟಿಗೆ ಬಂದಿದ್ದರೂ ಕೂಡ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ.

ಎರಡು ತಿಂಗಳ ಹಿಂದೆ ತೆರೆಗಪ್ಪಳಿಸಿದ್ದ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಸಾಗರೋಪಾದಿಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಹೆಚ್ಚು ಪ್ರಚಾರ ಇಲ್ಲದೇ ಬರೀ ಮೌತ್ ಟಾಕ್‌ನಿಂದಲೇ 'ಮಹಾವತಾರ್ ನರಸಿಂಹ' ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಅಬಾಲವೃದ್ಧರಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸಿನಿಮಾ ರಂಜಿಸಿತ್ತು. ತೆರೆಮೇಲೆ ದೃಶ್ಯವೈಭವ ಕಂಡು ಸಿನಿರಸಿಕರು ಬೆರಗಾಗಿದ್ದರು.
ಮಲ್ಟಿಸ್ಟಾರರ್ ಸಿನಿಮಾಗಳೇ ಚಿತ್ರಮಂದಿರಗಳಲ್ಲಿ ಮುಗ್ಗರಿಸುತ್ತಿವೆ. ನೂರಾರು ಕೋಟಿ ಹಾಕಿ ಸಿನಿಮಾ ಮಾಡಿದವರು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಆನಿಮೇಷನ್ ಸಿನಿಮಾವೊಂದು ಈ ಪಾಟಿ ಸದ್ದು ಮಾಡುತ್ತದೆ ಎಂದು ಯಾರು ಊಹಿಸಿರಲಿಲ್ಲ. ಅಶ್ವಿನ್ ಕುಮಾರ್ ಹಾಗೂ ಮತ್ತವರ ತಂಡ ಬಹಳ ಕಷ್ಟಪಟ್ಟು 'ಮಹಾವತಾರ್ ನರಸಿಂಹ' ಸಿನಿಮಾ ನಿರ್ಮಾಣ ಮಾಡಿದ್ದರು. ಅಶ್ವಿನ್ ತಮ್ಮ ಆಸ್ತಿಯನ್ನು ಅಡಮಾನ ಇಟ್ಟು, ಸಾಲ ಸೋಲ ಮಾಡಿ ಹಣ ಹೂಡಿದ್ದರು. ಆದರೆ ಸಿನಿಮಾ ಯಶಸ್ಸು ಕಂಡು ಜಾಕ್‌ಪಾಟ್ ಹೊಡೆದಿದ್ದಾರೆ.
ಬಾಕ್ಸಾಫೀಸ್ ಶೇಕ್ ಮಾಡಿದ್ದ ಚಿತ್ರದ ಓಟಿಟಿ ರೈಟ್ಸ್ ಭರ್ಜರಿ ಬೆಲೆ ಸೇಲ್ ಆಗಿತ್ತು. ನೆಟ್‌ಫ್ಲಿಕ್ಸ್ ರೈಟ್ಸ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಒಮ್ಮೆಲೆ ಸಿನಿರಸಿಕರು 'ಮಹಾವತಾರ್ ನರಸಿಂಹ' ದರ್ಶನಕ್ಕೆ ಮುಗಿಬಿದ್ದಿದ್ದಾರೆ. ನೀವು ಕೂಡ ವೀಕೆಂಡ್ ಮಿಸ್ ಮಾಡದೇ ಮಕ್ಕಳ ಜೊತೆ ಸಿನಿಮಾ ನೋಡಿ. ಈ ಪೌರಾಣಿಕ ಆನಿಮೇಷನ್ ಚಿತ್ರಕ್ಕೆ ಸ್ಯಾಮ್ ಸಿ. ಎಸ್ ಸಂಗೀತ ದೊಡ್ಡ ಬಲ ತುಂಬಿದೆ.
ಕೇವಲ 40 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಮಹಾವತಾರ್ ನರಸಿಂಹ' ವಿಶ್ವದಾದ್ಯಂತ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಸಂಸ್ಥೆಯೇ ಮಾಹಿತಿ ನೀಡಿದೆ. ಮುಂದೆ ಇಂತಹ ಮತ್ತಷ್ಟು ಸಿನಿಮಾಗಳನ್ನು ಮಾಡಲು ಕ್ಲೀಮ್ ಪ್ರೊಡಕ್ಷನ್ಸ್ ಜೊತೆ ಹೊಂಬಾಳೆ ಕೈ ಜೋಡಿಸಿದೆ. ಈಗಾಗಲೇ 7 ಸಿನಿಮಾಗಳನ್ನು ಘೋಷಿಸಿದ್ದಾರೆ.
ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ಮಹಾವತಾರ್ ನರಸಿಂಹ' ಸಿನಿಮಾ 4ನೇ ಸ್ಥಾನದಲ್ಲಿದೆ. 'ಛಾವ' ಮೊದಲ ಸ್ಥಾನದಲ್ಲಿದ್ದರೆ, 'ಸಯ್ಯಾರ' 2ನೇ ಸ್ಥಾನದಲ್ಲಿದೆ. 'ಕೂಲಿ' ಸಿನಿಮಾ 3ನೇ ಸ್ಥಾನ ಅಲಂಕರಿಸಿದೆ. ಇನ್ನು ಅತಿಹೆಚ್ಚು ಗಳಿಕೆ ಕಂಡ ಭಾರತದ ಆನಿಮೇಷನ್ ಸಿನಿಮಾಗಳಲ್ಲಿ 'ಮಹಾವತಾರ್ ನರಸಿಂಹ' ಮೊದಲ ಸ್ಥಾನಕ್ಕೇರಿದೆ. 'ಕೊಚಡಿಯನ್' 2ನೇ ಸ್ಥಾನಕ್ಕಿಳಿದಿದೆ.
ಮಹಾವತಾರ್ ಸರಣಿಯಲ್ಲಿ 'ಮಹಾವತಾರ್ ರಘುನಂದನ್' (2029), 'ಮಹಾವತಾರ್ ದ್ವಾರಕಾದೀಶ್'(2031), 'ಮಹಾವತಾರ್ ಗೋಕುಲನಂದ'(2033), 'ಮಹಾವತಾರ್ ಕಲ್ಕಿ ಪಾರ್ಟ್-1' (2035) ಹಾಗೂ 'ಮಹಾವತಾರ್ ಕಲ್ಕಿ ಪಾರ್ಟ್-2'(2037) ಹೀಗೆ 7 ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











