Guntur Kaaram OTT: 'ಸಲಾರ್' ಹಾದಿಯಲ್ಲಿ 'ಗುಂಟೂರು ಖಾರಂ'; 28 ದಿನಕ್ಕೆ ಓಟಿಟಿಗೆ ಎಂಟ್ರಿ!
ಕಂಟೆಂಟ್ ಚೆನ್ನಾಗಿದ್ದರೆ ದೊಡ್ಡ ಸಿನಿಮಾ, ಚಿಕ್ಕ ಸಿನಿಮಾ ಅನ್ನೋದು ಲೆಕ್ಕಕ್ಕೆ ಬರಲ್ಲ. ಕೆಲವೊಮ್ಮೆ ಸ್ಟಾರ್ ನಟ, ನಿರ್ದೇಶಕ, ಭಾರೀ ಬಂಡವಾಳ ಇಲ್ಲದಿದ್ದರೂ ಸಣ್ಣ ಬಜೆಟ್‌ನ ಹೊಸಬರ ಸಿನಿಮಾ ಗೆದ್ದು ಬಿಡುತ್ತದೆ. ಟಾಲಿವುಡ್‌ನಲ್ಲಿ ಸ್ಟಾರ್‌ಗಳ ದೊಡ್ಡ ಸಿನಿಮಾಗಳ ಎದುರು ಸಣ್ಣ ಬಜೆಟ್ಟಿನ 'ಹನುಮಾನ್' ಸಿನಿಮಾ ಅಬ್ಬರಿಸುತ್ತಿದೆ.
ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಆ ಅವಕಾಶವನ್ನು ಪ್ರಶಾಂತ್ ವರ್ಮಾ ನಿರ್ದೇಶನದ 'ಹನುಮಾನ್' ಸಿನಿಮಾ ಪಡೆದುಕೊಂಡಿದೆ. ಸದ್ಯ 'ಗುಂಟೂರು ಖಾರಂ' ಸಿನಿಮಾ ಸ್ಕ್ರೀನ್‌ಗಳನ್ನು 'ಹನುಮಾನ್' ಆವರಿಸಿಕೊಳ್ಳುತ್ತಿದೆ. ತೇಜ ಸಜ್ಜ ನಟನೆಯ ಸೂಪರ್ ಹೀರೊ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಹ್ಯಾಟ್ರಿಕ್ ಕಾಂಬಿನೇಷನ್ 'ಗುಂಟೂರು ಖಾರಂ' ಭಾರೀ ಹೈಪ್ ಕ್ರಿಯೇಟ್ ಮಾಡಿದ್ದು ಸುಳ್ಳಲ್ಲ. ಬಹಳ ತಡವಾಗಿ ಬಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಆದರೆ ಬಳಿಕ ಸಿನಿಮಾ ಗಳಿಕೆ ಇಳಿಯುತ್ತಾ ಸಾಗಿತು. ಮಹೇಶ್ ಬಾಬು ನಟನೆ ಬಿಟ್ಟರೆ ಸಿನಿಮಾದಲ್ಲಿ ಹೇಳಿಕೊಳ್ಳುವ ಅಂಶಗಳು ಏನು ಇಲ್ಲ ಎಂದು ಪ್ರೇಕ್ಷಕರು ಸರ್ಟಿಫಿಕೇಟ್ ಕೊಟ್ಟುಬಿಟ್ಟರು.
ಮಹೇಶ್ ಬಾಬು ಅಭಿಮಾನಿಗಳನ್ನು ರಂಜಿಸಲು ಕೂಡ 'ಗುಂಟೂರು ಖಾರಂ' ಯಶ ಕಾಣಲಿಲ್ಲ. ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಿ ಶ್ರೀಲೀಲಾ ಮಿಂಚಿದ್ದಾರೆ. ರಮ್ಯಾಕೃಷ್ಣ, ಪ್ರಕಾಶ್ ರಾಜ್, ಜಗಪತಿ ಬಾಬು, ಆರ್ಮುಗ ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಕೆಲ ಸಿನಿಮಾಗಳಲ್ಲಿ ನೋಡಿರುವ ಕಥೆಯನ್ನೇ ಹೊಸದಾಗಿ ಹೇಳಲು ತ್ರಿವಿಕ್ರಮ್ ಪ್ರಯತ್ನಿಸಿದ್ದರು. ಆದರೆ ಆ ಹಾದಿಯಲ್ಲಿ ಸಕ್ಸಸ್ ಆಗಲಿಲ್ಲ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಕೆಲವರು ಮುಗಿಬಿದ್ದು ಸಿನಿಮಾ ವೀಕ್ಷಿಸಿದರು. ಹಾಗಾಗಿ ಕೊಂಚ ಮಟ್ಟಿಗೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಬಿಟ್ಟರೆ ಸಿನಿರಸಿಕರ ಮನಗೆಲ್ಲಲಿಲ್ಲ.
ಇದೀಗ 'ಗುಂಟೂರು ಖಾರಂ' ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ. ಚಿತ್ರತಂಡ ಸಿನಿಮಾ ತೆರೆಕಂಡ 28 ದಿನಕ್ಕೆ ಡಿಜಿಟಲ್ ಸ್ಟ್ರೀಮಿಂಗ್‌ಗೆ ಒಪ್ಪಂದ ಮಾಡಿಕೊಂಡಿದೆಯಂತೆ. ಹಾಗಾಗಿ ಫೆಬ್ರವರಿ 9ಕ್ಕೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರುತ್ತದೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಮೊದಲಿಗೆ ಬಾಡಿಗೆ ರೀತಿ ಸಿನಿಮಾ ವೀಕ್ಷಣೆಗೆ ಸಿಗಲಿದ್ದು ಬಳಿಕ ಚಂದಾದಾರರೆಲ್ಲರೂ ಸಿನಿಮಾ ವೀಕ್ಷಿಸುವ ಅವಕಾಶ ಸಿಗಬಹುದು ಎನ್ನುವ ಅಂದಾಜಿದೆ.

ಚಿಕ್ಕಂದಿನಲ್ಲೇ ತಾಯಿಯಿಂದ ದೂರಾಗುವ ರಮಣ(ಮಹೇಶ್ ಬಾಬು) ಅತ್ತೆ (ಈಶ್ವರಿ ರಾವ್) ಲಾಲನೆ ಪಾಲನೆಯಲ್ಲಿ ಬೆಳೆಯುತ್ತಾನೆ. ಗುಂಟೂರಿನಲ್ಲಿ ಮೆಣಸಿನ ಕಾಯಿ ಬ್ಯುಸಿನೆಸ್ ಮಾಡ್ತಾ ತನ್ನ ಪಾಡಿಗೆ ಇರುತ್ತಾನೆ. ಆತನನ್ನು ವೆಂಕಟಸ್ವಾಮಿ(ಪ್ರಕಾಶ್ ರಾಜ್) ಹೈದರಾಬಾದ್‌ಗೆ ಕರೆಸಿ ತಾಯಿ(ರಮ್ಯಾಕೃಷ್ಣ)ಯ ಆಸ್ತಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಬರೆದುಕೊಡಲು ಕೇಳುತ್ತಾನೆ. ಇದರಿಂದ ಗರಂ ಆದ ರಮಣ, ತಾತ ವೆಂಕಟಸ್ವಾಮಿ ಹಾಗೂ ತಾಯಿ ವಸುಂಧರಾ ವಿರುದ್ಧ ಶೀತಲ ಸಮರ ಸಾರುತ್ತಾನೆ. ತಾಯಿ ವಿರುದ್ದ ರಮಣ ತಿರುಗಿ ಬಿದ್ದಿದ್ಯಾಕೆ? ಏನಿದು ಆಸ್ತಿ ವಿವಾದ? ಇದಕ್ಕೆಲ್ಲಾ ಉತ್ತರ 'ಗುಂಟೂರು ಖಾರಂ' ಸಿನಿಮಾ.
ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತಿಂಗಳಿಗೂ ಮೊದಲೇ ಓಟಿಟಿ ಬರ್ತಿವೆ. ಪ್ರಭಾಸ್ ನಟನೆಯ 'ಸಲಾರ್'-1 ಸಿನಿಮಾ ಕೂಡ 28ಕ್ಕೆ ದಿನಕ್ಕೆ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಟ್ಟಿದೆ. 4 ಭಾಷೆಗಳಲ್ಲಿ ಸಿನಿಮಾ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿದೆ. ಅದೇ ಹಾದಿಯಲ್ಲಿ 'ಗುಂಟೂರು ಖಾರಂ' ಕೂಡ ಇದೆ ಎನ್ನಲಾಗ್ತಿದೆ. ಅಂದಹಾಗೆ ಸಿನಿಮಾ 8 ದಿನಕ್ಕೆ 185 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವ ಅಂದಾಜಿದೆ. ಇನ್ನು ಈ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ.


Click it and Unblock the Notifications











