'ದೃಶ್ಯಂ 2' ಬಳಿಕ ಭಾರಿ ಮೊತ್ತದ ಆಫರ್ ಪಡೆದ ಮಲಯಾಳಂ ಸಿನಿಮಾ
ಮಲಯಾಳಂ ಸಿನಿಮಾಗಳು ಒಟಿಟಿಗಳಲ್ಲಿ ತಮ್ಮದೇ ಆದ ದೊಡ್ಡ ಮಟ್ಟ ಬೇಡಿಕೆ ಸೃಷ್ಟಿಸಿಕೊಂಡಿವೆ. ಈ ಮುಂಚೆ ಎಷ್ಟೇ ಒಳ್ಳೆಯ ಸಿನಿಮಾ ಮಾಡಿದರು ಕೇರಳದ ಹೊರಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ವಿಫಲವಾಗಿದ್ದ ಮಲಯಾಳಂ ಸಿನಿಮಾಕ್ಕೆ ಒಟಿಟಿ ವರವಾಗಿ ಪರಿಣಮಿಸಿದೆ.
ಕಡಿಮೆ ಬಜೆಟ್‌ನಲ್ಲಿಯೇ ಅಚ್ಚುಕಟ್ಟಾದ, ಸುಂದರ ಸಿನಿಮಾ ಮಾಡುವ ಕಲೆ ಸಿದ್ಧಿಸಿರುವ ಮಲಯಾಳಂ ಸಿನಿಮಾ ತಜ್ಞರು ಹಲವು ಅದ್ಭುತ ಸಿನಿಮಾಗಳನ್ನು ಕಳೆದ ಕೆಲ ವರ್ಷಗಳಲ್ಲಿ ನೀಡಿದ್ದಾರೆ. ಒಟಿಟಿಯಿಂದ ಭಾರಿ ಆದಾಯವನ್ನೂ ಪಡೆಯುತ್ತಿದ್ದಾರೆ.
ಮಲಯಾಳಂ ಸಿನಿಮಾ ಇತಿಹಾಸದಲ್ಲಿ ಒಟಿಟಿಯಿಂದ ಅತಿ ಹೆಚ್ಚು ಹಣ ಪಡೆದ ಸಿನಿಮಾ 'ದೃಶ್ಯಂ 2'. ಇದೀಗ ಫಹಾದ್ ಫಾಸಿಲ್ ನಟನೆಯ ಮತ್ತೊಂದು ಸಿನಿಮಾ ಸಹ ಭಾರಿ ಮೊತ್ತವನ್ನೇ ಒಟಿಟಿಯಿಂದ ಪಡೆದುಕೊಂಡು ಎರಡನೇ ಸ್ಥಾನಕ್ಕೆ ಬಂದು ನಿಂತಿದೆ.

ಫಹಾದ್ ಫಾಸಿಲ್ ನಟನೆಯ 'ಮಲಿಕ್' ನಟನೆಯ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದ್ದು, ಒಟಿಟಿಯಿಂದ ಅತಿ ಹೆಚ್ಚು ಹಣ ಪಡೆದ ಎರಡನೇ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾವು ಮುಸ್ಲಿಂ ಕೋಮುಗಲಭೆ ಕುರಿತಾದ ಸಿನಿಮಾ ಆಗಿದ್ದು ಫಹಾದ್ ಫಾಸಿಲ್ ಮುಸ್ಲಿಂ ನಾಯಕ ಸುಲೇಮಾನ್ ಮಲಿಕ್ ಪಾತ್ರದಲ್ಲಿ ನಟಿಸಿದ್ದಾರೆ.
ಸುಮಾರು 30 ಕೋಟಿ ಹಣವನ್ನು ಅಮೆಜಾನ್ ಪ್ರೈಂ 'ದೃಶ್ಯಂ 2' ಸಿನಿಮಾಕ್ಕಾಗಿ ನೀಡಿತ್ತು. ಸಿನಿಮಾದ ಸ್ಯಾಟಲೈಟ್ ಹಕ್ಕು 20 ಕೋಟಿಗೆ ಮಾರಾಟವಾಗಿತ್ತು. ಇದೀಗ 'ಮಲಿಕ್' ಸಿನಿಮಾಕ್ಕೆ 25 ಕೋಟಿ ಹಣವನ್ನು ಅಮೆಜಾನ್ ಪ್ರೈಂ ನೀಡಿದೆ ಎನ್ನಲಾಗುತ್ತಿದೆ.
ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಣಯಿಸಿತ್ತು. ಆದರೆ ಕೊರೊನಾ ಕಾರಣದಿಂದ ಕೇರಳದಲ್ಲಿ ಚಿತ್ರಮಂದಿರ ತೆರೆಯುವುದು ಇನ್ನಷ್ಟು ತೆಡವಾಗಲಿರುವ ಕಾರಣ ಹಾಗೂ ಫಹಾದ್ ಫಾಸಿಲ್‌ರ ಇನ್ನೆರಡು ಸಿನಿಮಾಗಳು ಸಹ ಚಿತ್ರಮಂದಿರದಲ್ಲಿ ಬಿಡುಗಡೆಗೆ ಆ ವೇಳೆಗೆ ರೆಡಿಯಾಗುವ ಕಾರಣ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲಾಗುತ್ತಿದೆ.
'ಮಲಿಕ್' ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆಗೆ ನಿಮಿಷಾ ಸಜಯನ್, ದಿಲೀಷ್ ಪೂತನ್, ಜೋಜು ಜಾರ್ಜ್, ಶರತ್ ಕುಮಾರ್ ಇನ್ನೂ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ 'ಟೇಕ್ ಆಫ್', ಫಹಾದ್ ನಟಿಸಿದ್ದ ಲಾಕ್‌ಡೌನ್‌ನಲ್ಲಿ ನಿರ್ಮಿಸಿದ ಸಿನಿಮಾ 'ಸಿಯು ಸೂನ್' ಅನ್ನು ನಿರ್ದೇಶಿಸಿರುವ ಮಹೇಶ್ ನಾರಾಯಣನ್ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











