Manada Kadalu OTT: ಯೋಗರಾಜ್ ಭಟ್ಟರ 'ಮನದ ಕಡಲು' ಓಟಿಟಿಗೆ ಬಂತು
ತಿಂಗಳ ಅಂತರದಲ್ಲಿ ಈಗ ಸಿನಿಮಾಗಳ ಓಟಿಟಿಗೆ ಬರ್ತಿವೆ. 'ವಿದ್ಯಾಪತಿ', 'ವಾಮನ', 'ಕೆರೆಬೇಟೆ', 'ಕಾಲಾಪತ್ಥರ್', 'ವಿಷ್ಣುಪ್ರಿಯ' ರೀತಿಯ ಇಂಟ್ರೆಸ್ಟಿಂಗ್ ಸಿನಿಮಾಗಳು ಕಳೆದೆರಡು ವಾರಗಳಿಂದ ಓಟಿಟಿಗೆ ಬಂದಿವೆ. ಅದೇ ಸಾಲಿಗೆ ಇದೀಗ 'ಮನದ ಕಡಲು' ಚಿತ್ರ ಸೇರಿಕೊಳ್ತಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಮನದ ಕಡಲು' ಕೂಡ ಒಂದಾಗಿತ್ತು. ಸೂಪರ್ ಹಿಟ್ 'ಮುಂಗಾರುಮಳೆ' ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದ್ದ ಸಿನಿಮಾ. ಮಾರ್ಚ್ 28ಕ್ಕೆ ತೆರೆಗೆ ಬಂದಿದ್ದ ಸಿನಿಮಾ 40 ದಿನಗಳ ಬಳಿಕ ಓಟಿಟಿಗೆ ಬಂದಿದೆ.

ಸುಮುಖ್ ಹೀರೊ ಆಗಿ ನಟಿಸಿರುವ ಚಿತ್ರದಲ್ಲಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ನಾಯಕಿಯರಾಗಿ ಮಿಂಚಿದ್ದಾರೆ. ಇದು ಪಕ್ಕಾ ಭಟ್ಟರ ಶೈಲಿಯ ರೊಮ್ಯಾಂಟಿಕ್ ಎಂಟರ್‌ಟೈನರ್. 'ಮುಂಗಾರುಮಳೆ' ಸಿನಿಮಾ ನಿರ್ಮಿಸಿದ್ದ ಇ. ಕೃಷ್ಣಪ್ಪ ಬಹಳ ವರ್ಷಗಳ ಬಳಿಕ ಈ ಚಿತ್ರಕ್ಕೆ ಹಣ ಹೂಡಿದ್ದರು. 'ಮನದ ಕಡಲು' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಐಪಿಎಲ್ ಆರ್ಭಟದ ನಡುವೆ ದೊಡ್ಡದಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ.
ಹೊಸ ಪ್ರತಿಭೆಗಳ ತಂಡ ಕಟ್ಟಿಕೊಂಡು ಒಂದು ವಿನೂತನ ಪ್ರಯತ್ನವನ್ನು ಯೋಗರಾಜ್ ಭಟ್ ಮಾಡಿದ್ದರು. ಆದರೆ ಸಿನಿಮಾ ಯಾಕೋ ಅಷ್ಟಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲಿಲ್ಲ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಚಿತ್ರಕ್ಕೆ ಬಲ ತುಂಬಿದ್ದರೂ ಪ್ರಯೋಜನವಾಗಿರಲಿಲ್ಲ. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್, ನೇತ್ರಾ ಜಾಧವ್, ಸೂರಜ್ ಸೇರಿ ಅನುಭವಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.
ಸಾಮಾನ್ಯವಾಗಿ ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಇರುವಂತಹ ಉಢಾಪೆ, ಮಾತಿನ ಮಲ್ಲ ನಾಯಕ(ಸುಮುಖ). ಎಂಬಿಬಿಎಸ್ ಓದುವುದನ್ನು ಅರ್ಧಕ್ಕೆ ಬಿಟ್ಟು ಇಷ್ಟಪಟ್ಟ ಹುಡುಗಿಗಾಗಿ ಕಡಲ ತೀರದ ದೋಣಿದುರ್ಗ ಎಂಬ ಊರಿಗೆ ಹೋಗ್ತಾನೆ. ಅಲ್ಲಿ ಆಕೆಯ ಸ್ನೇಹಿತೆ ಅಂಜಲಿ ಜೊತೆಯಾಗುತ್ತಾಳೆ. ಅಲ್ಲಿಗೆ ಅದು ತ್ರಿಕೋನ ಪ್ರೇಮಕಥೆಯಾಗಿ ಬದಲಾಗುತ್ತದೆ. ಮುಂದೆ ಆದಿವಾಸಿಗಳ ಪ್ರಪಂಚಕ್ಕೆ ಎಂಟ್ರಿ ಕೊಡುವುದು. ಬಳಿಕ ಕಥೆಗೆ ಒಂದಷ್ಟು ಟ್ವಿಸ್ಟ್ ಸಿಕ್ಕಿ ಸಿನಿಮಾ ಸಮಾಪ್ತಿಯಾಗುತ್ತದೆ.

ಯೋಗರಾಜ್ ಭಟ್ಟರ ಪ್ರಯತ್ನ ಚೆನ್ನಾಗಿಯೇ ಇದ್ದರೂ ಅದು ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲಿಲ್ಲ. ಹಳೇ ಶೈಲಿಗೆ ಜೋತು ಬಿದ್ದು ಭಟ್ಟರು ಹೊಸತನ್ನು ಹೇಳಲು ಹೆಣಗಾಡಿದ್ದರು. ಮುದ ನೀಡುವ ಸಂಭಾವನೆ ಬೆಟ್ಟ, ಕಾಡು, ಕೋಟೆ ತೋರಿಸಿ ಎಂದಿನ ತಮ್ಮ ದೃಶ್ಯ ವೈಭವವನ್ನು ತೆರೆಗೆ ತಂದಿದ್ದರು. ಆದರೆ ಗಟ್ಟಿ ಕಥೆ, ಚಿತ್ರಕಥೆ ಇಲ್ಲದೇ ಸಿನಿಮಾ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಡುತ್ತದೆ. ಸುಮುಖ ಹಾಗೂ ರಾಶಿಕಾ ನಟನೆಯಲ್ಲಿ ಪಕ್ವತೆ ಬೇಕಿತ್ತು.
ಮೇಲ್ನೋಟಕ್ಕೆ ಮನರಂಜನೆ ಜೊತೆ ಒಂದೊಳ್ಳೆ ಟೈಂಪಾಸ್ ಸಿನಿಮಾ ಅನಿಸಿದರೂ ಭಾವನಾತ್ಮಕವಾಗಿ ಆವರಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಅದೇ ಕಾರಣಕ್ಕೆ ಸಿನಿಮಾ ಅಷ್ಟಾಗಿ ಪ್ರೇಕ್ಷಕರನ್ನು ಸೆಳೆಯಲಿಲ್ಲ ಎನಿಸುತ್ತದೆ. 'ಮುಂಗಾರುಮಳೆ' ತಂಡದ ಹೊಸ ಪ್ರಯತ್ನ ಅಂದಾಗ ಅಷ್ಟೇ ದೊಡ್ಡಮಟ್ಟದ ನಿರೀಕ್ಷೆ ಪ್ರೇಕ್ಷಕರಲ್ಲಿ ಇತ್ತು. ಅದನ್ನು ತಲುಪುವಲ್ಲಿ 'ಮನದ ಕಡಲು' ವಿಫಲವಾಗಿತ್ತು.
ಚಿತ್ರಮಂದಿರಗಳಲ್ಲಿ 'ಮನದ ಕಡಲು' ಸಿನಿಮಾವನ್ನು ಮಿಸ್ ಮಾಡಿಕೊಂಡವರು ಓಟಿಟಿಯಲ್ಲಿ ವೀಕ್ಷಿಸಲು ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬಂದಿದೆ.


Click it and Unblock the Notifications











