ಓಟಿಟಿಗೆ ಬಂತು ದುಲ್ಕರ್ ಸಲ್ಮಾನ್ 'ಕಾಂತ' ; ಕನ್ನಡದಲ್ಲೂ ನೋಡಬಹುದು -ಈ ದಿನದಿಂದ ಪ್ರಸಾರ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ...
ಮೊದಲಿನಂತೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ. ಚಿತ್ರ ಒಂದು ಚಿತ್ರಮಂದಿರಕ್ಕೆ ಬಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ.

ಹೀಗಾಗಿಯೇ ಹಲವರು ತಮ್ಮ ಇಷ್ಟದ ಸ್ಟಾರ್‌ನ ಚಿತ್ರ ಬಂದರೆ..ಅಥವಾ ಯಾವುದಾದರೂ ಚಿತ್ರ ಗಮನ ಸೆಳೆದರೆ.. ಭರವಸೆ ಮೂಡಿಸಿದ್ದರೆ.. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಬದಲು, ಕೇವಲ ನಾಲ್ಕು ವಾರ ಅಷ್ಟೇ ತಾನೇ..? ಎಂದುಕೊಂಡು ಮನೆಯಲ್ಲಿಯೇ ನೋಡಿದರೇ ಆಯ್ತು ಎಂದುಕೊಳ್ಳುತ್ತಾರೆ. ತಾಳ್ಮೆಯಿಂದ ಕಾಯುತ್ತಾರೆ. ಹೀಗೆ ಕಾಯುತ್ತಿರುವವರ ಕಣ್ಮುಂದೆ ಈಗ ''ಕಾಂತ'' ಬಂದಿದೆ.
ಹೌದು, ''ಕಾಂತ''.. ಕಳೆದ ನವೆಂಬರ್ 14ರಂದು ತೆರೆಗೆ ಬಂದಿದ್ದ ದುಲ್ಕರ್ ಸಲ್ಮಾನ್ ಅಭಿನಯದ ಸಿನಿಮಾ. 1950ನೇ ಕಾಲದ ಕಥಾಹಂದರದ ಈ ಚಿತ್ರದಲ್ಲಿ ದುಲ್ಕರ್ ಜೊತೆ ರಾಣಾ ದಗ್ಗುಬಾಟಿ ಕೂಡ ಇದ್ದರು.ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸಮುದ್ರಕನಿ ಕೂಡ ಪ್ರಮುಖವಾದ ಪಾತ್ರ ನಿರ್ವಹಿಸಿದ್ದರು. ಬಿಡುಗಡೆಗೆ ಮುನ್ನ ಅಪಾರವಾದ ನಿರೀಕ್ಷೆಯನ್ನು ಈ ಚಿತ್ರ ಮೂಡಿಸಿತ್ತು.
ಆದರೆ..ಅದ್ಯಾಕೋ ಪ್ರೇಕ್ಷಕರು ಈ ಬಾರಿ ದುಲ್ಕರ್ ಸಲ್ಮಾನ್ ಅವರನ್ನು ನಂಬಲಿಲ್ಲ. ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಲಿಲ್ಲ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಭಾರತದಲ್ಲಿ ಗಳಿಸಿದ್ದು ಕೇವಲ ₹ 22.05 ಕೋಟಿ ಮಾತ್ರ.
ಹೀಗೆ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ''ಕಾಂತ'' ಸದ್ಯ ಓಟಿಟಿಗೆ ಬಂದಿದ್ದು, ಇದೇ ಡಿಸೆಂಬರ್ ಹನ್ನೆರಡರಿಂದ ನೆಟ್ ಫ್ಲಿಕ್ಸ್‌ನಲ್ಲಿ ಡಿಸೆಂಬರ್ 12 ರಿಂದ ಪ್ರಸಾರವಾಗಲಿದೆ. ವಿಶೇಷ ಅಂದರೆ ಈ ಚಿತ್ರವನ್ನು ಕನ್ನಡಕ್ಕೂ ಕೂಡ ಡಬ್ ಮಾಡಲಾಗಿದೆ. ಆಸಕ್ತ ಕನ್ನಡ ಕಲಾಭಿಮಾನಿಗಳು ಈ ಚಿತ್ರವನ್ನು ಮನೆಯಲ್ಲಿ ನೋಡಬಹುದು.

ಕಾಂತಾ ಕಥೆ
ಅಯ್ಯ(ಸಮುದ್ರಖನಿ) ಒಬ್ಬ ಖ್ಯಾತ ಚಿತ್ರ ನಿರ್ದೇಶಕ. ತನ್ನ ಶಿಷ್ಯ ನಟ ಟಿ. ಕೆ ಮಹಾದೇವನ್(ದುಲ್ಕರ್ ಸಲ್ಮಾನ್) ನನ್ನು ಹೀರೊ ಮಾಡಿ 'ಶಾಂತ' ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾನೆ. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಸಿನಿಮಾ ಅರ್ಧದಲ್ಲೇ ನಿಂತು ಹೋಗುತ್ತದೆ. ಕೆಲ ವರ್ಷಗಳ ಬಳಿಕ ಇಬ್ಬರೂ ಮತ್ತೆ ಸಿನಿಮಾ ಪುನರಾರಂಭಿಸುತ್ತಾರೆ. ಆದರೆ ಈ ಬಾರಿ ನಾನು ಹೇಳಿದಂತೆ ಸಿನಿಮಾ ಮೂಡಿ ಬರಬೇಕು ಎಂದು ಮಹಾದೇವನ್ ಹಠ ಮಾಡುತ್ತಾನೆ.
ಅಯ್ಯ ಈ ಚಿತ್ರಕ್ಕೆ ಕುಮಾರಿ(ಭಾಗ್ಯಶ್ರೀ)ಯನ್ನು ನಾಯಕಿಯಾಗಿ ಆಯ್ಕೆ ಮಾಡುತ್ತಾನೆ. ಚಿತ್ರದ ಹೆಸರು 'ಕಾಂತ' ಎಂದು ಬದಲಿಸಲು ಪಟ್ಟು ಹಿಡಿಯುತ್ತಾನೆ. ಮುಂದೆ ಮಹದೇವನ್ ಹಾಗೂ ಕುಮಾರಿ ಪ್ರೀತಿಯಲ್ಲಿ ಬೀಳುತ್ತಾರೆ. ಇಬ್ಬರೂ ಮದುವೆ ಆಗಬೇಕು ಎಂದುಕೊಳ್ಳುವ ವೇಳೆಗೆ ಹತ್ಯೆಯೊಂದು ನಡೆಯುತ್ತದೆ. ಅಷ್ಟಕ್ಕೂ ಸತ್ತಿದ್ದು ಯಾರು? ಕಾರಣ ಯಾರು? ಇನ್ಸ್‌ಪೆಕ್ಟರ್ ದೇವರಾಜ್(ರಾಣ ದಗ್ಗುಬಾಟಿ) ಪ್ರಕರಣ ಭೇದಿಸುತ್ತಾನಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿನಿಮಾದಲ್ಲೇ ನೋಡಬೇಕು.
ಒಟ್ನಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಹಣ ದೋಚುವಲ್ಲಿ ವಿಫಲವಾದ ''ಕಾಂತ'' ಸದ್ಯ ಈ ಡಿಸೆಂಬರ್ 12ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಓಟಿಟಿಯಲ್ಲಿ ಈ ಚಿತ್ರ ಗಮನ ಸೆಳೆಯುತ್ತಾ..? ಓಟಿಟಿಯಲ್ಲಿ ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











