77 ದಿನಗಳ ನಂತರ ಓಟಿಟಿಗೆ ಬಂತು ದಿ ಬೆಂಗಾಲ್ ಫೈಲ್ಸ್ ; ಎಲ್ಲಿ ಮತ್ತು ಎಂದಿನಿಂದ ನೋಡಬಹುದು ಈ ವಿವಾದಾತ್ಮಕ ಸಿನಿಮಾ ?
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.
ಆದರೆ ಈಗ .. ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ''ದಿ ಬೆಂಗಾಲ್ ಫೈಲ್ಸ್''.

ಹೌದು, ''ದಿ ಬೆಂಗಾಲ್ ಫೈಲ್ಸ್''.. ಕಳೆದ ಸೆಪ್ಟೆಂಬರ್ 5ರಂದು ತೆರೆಗೆ ಬಂದಿದ್ದ ಚಿತ್ರ. ''ದಿ ಕಾಶ್ಮೀರ್ ಫೈಲ್ಸ್'' ಚಿತ್ರವನ್ನು ನಿರ್ದೇಶಿಸುವದರ ಮೂಲಕ ಬಾಕ್ಸಾಫೀಸ್‌ನಲ್ಲಿ ಕೋಟ್ಯಂತರ ಹಣ ದೋಚಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ಇದು.
ಈ ಹಿನ್ನೆಲೆ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. ಇದಕ್ಕೆ ಪೂರಕವಾಗಿ ಬಂಗಾಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭೆಯ ಕತೆಯನ್ನು ಹೊಂದಿರುವ ಈ ಚಿತ್ರದ ಟ್ರೇಲರ್ ತುಂಬಾನೇ ಸದ್ದು ಮಾಡಿತ್ತು. ಕುತೂಹಲ ಕೆರಳಿಸಿತ್ತು.
ಚಿತ್ರದ ಬಿಡುಗಡೆಯ ಮುನ್ನ ಸಂದರ್ಶನಗಳಲ್ಲಿ ಮಾತನಾಡಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ , ''ದಿ ಕಾಶ್ಮೀರ್ ಫೈಲ್ಸ್'' ನಿಮ್ಮನ್ನು ಅಲುಗಾಡಿಸಿದ್ದರೆ, ''ದಿ ಬೆಂಗಾಲ್ ಫೈಲ್ಸ್'' ಸಿನಿಮಾ ನಿಮ್ಮನ್ನು ಬೆಂಬಿಡದೆ ಕಾಡುತ್ತದೆ ಎಂದು ಹೇಳಿದ್ದರು. ಭಾರತದಿಂದ ದೂರವಾಗುತ್ತಿರುವ ಪಶ್ಚಿಮ ಬಂಗಾಳವನ್ನು ಉಳಿಸಿಕೊಳ್ಳಿರೆಂದು ಹೇಳಲು ಈ ಸಿನಿಮಾ ಮಾಡಿದ್ದೇನೆ ಎಂದಿದ್ದರು. ಭಾರತದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಕೋಮುಗಲಭೆಯ ಚಿತ್ರ ಇದು ಎಂದು ಕೂಡ ಹೇಳಿದ್ದರು.
ಆದರೆ, ಅದ್ಯಾಕೋ ''ದಿ ಕಾಶ್ಮೀರ್ ಫೈಲ್ಸ್'' ಚಿತ್ರವನ್ನು ಮುಗಿಬಿದ್ದು ನೋಡಿದ್ದ ಜನ ವಿವೇಕ್ ಅಗ್ನಿಹೋತ್ರಿ ಅವರ ಈ ''ದಿ ಬೆಂಗಾಲ್ ಫೈಲ್ಸ್'' ನೋಡುವ ಆಸಕ್ತಿಯನ್ನು ತೋರಿಸಲೇ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 22 ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೇವಲ ₹ 16.79 ಗಳಿಸುವಲ್ಲಿ ಯಶಸ್ವಿಯಾಯ್ತು ಎಂದು ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಇಂಥಾ ''ದಿ ಬೆಂಗಾಲ್ ಫೈಲ್ಸ್ '' ಚಿತ್ರ ಇದೀಗ ಓಟಿಟಿಗೆ ಲಗ್ಗೆ ಇಡುತ್ತಿದೆ. ಬಿಡುಗಡೆಯಾಗಿ ನಾಲ್ಕು ವಾರಕ್ಕೆ ಚಿತ್ರವೊಂದು ಓಟಿಟಿಗೆ ಬರುವ ಈ ಕಾಲದಲ್ಲಿ 77 ದಿನಗಳ ನಂತರ ಚಿತ್ರ ''ಜೀ 5''ನಲ್ಲಿ ಇದೇ ನವೆಂಬರ್ 21ರಿಂದ ಪ್ರಸಾರವಾಗಲಿದೆ. ಈ ಕುರಿತು ಜೀ 5 ಅಧಿಕೃತವಾಗಿ ಘೋಷಣೆಯನ್ನು ಕೂಡ ಮಾಡಿದ್ದು ಬಂಗಾಳದ ಕರಾಳ ಅಧ್ಯಾಯ ಇದೇ ನವೆಂಬರ್ 21ರಿಂದ ನಿಮ್ಮ ಮುಂದೆ ಎಂದು ಹೇಳಿದೆ.
ಒಟ್ನಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾದ ''ದಿ ಬೆಂಗಾಲ್ ಫೈಲ್ಸ್'' ಚಿತ್ರ ಇದೇ ನವೆಂಬರ್ 21ರಿಂದ ''ಜೀ 5''ನಲ್ಲಿ ಪ್ರಸಾರವಾಗಲಿದೆ. ಓಟಿಟಿಯಲ್ಲಿ ಈ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗುತ್ತೆ..? ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಕುರಿತು ಹೇಗೆಲ್ಲಾ ಚರ್ಚೆ ನಡೆಯುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
ಚಿತ್ರದ ಹೆಸರು- '' ದಿ ಬೆಂಗಾಲ್ ಫೈಲ್ಸ್''
ಓಟಿಟಿ ವೇದಿಕೆ- ಜೀ 5
ಪ್ರಸಾರದ ದಿನಾಂಕ- ನವೆಂಬರ್ 21
ತಾರಾಗಣ - ಮಿಥುನ್ ಚಕ್ರವರ್ತಿ, ಸಿಮ್ರತ್ ಕೌರ್, ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಸಾಶ್ವತ ಚಟರ್ಜಿ, ಮುಂತಾದವರು
ಸಂಗೀತ ನಿರ್ದೇಶನ- ರೋಹಿತ್ ಶರ್ಮಾ
ನಿರ್ದೇಶನ-ನಿರ್ಮಾಣ- ವಿವೇಕ್ ಅಗ್ನಿಹೋತ್ರಿ


Click it and Unblock the Notifications











