Martin OTT Twitter Review: ಯಾಕೆ ಅಷ್ಟು ಬೈಕೊಂಡ್ರು ಜನ? ಬೇರೆ ನಿರ್ದೇಶಕರಿಗೆ ಒಳ್ಳೆ ಪಾಠ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ದಸರಾ ಸಂಭ್ರಮದಲ್ಲಿ ಬಿಡುಗಡೆ ಆಗಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಟೀಕಿಸಿ, ಟ್ರೋಲ್ ಮಾಡಿದ್ದರು. ಈ ವಾರ ಸಿನಿಮಾ ಓಟಿಟಿಗೆ ಬಂದಿದೆ.
ಮೊದಲ ಶೋನಿಂದಲೇ ನೆಗೆಟಿವ್ ರೆಸ್ಪಾನ್ಸ್ ಸಿಕ್ಕ ಕಾರಣ ಹೆಚ್ಚು ದಿನ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿಲ್ಲ. ಸಾಕಷ್ಟು ಜನ ಓಟಿಟಿಯಲ್ಲೇ ಸಿನಿಮಾ ನೋಡಲು ಕಾಯುತ್ತಿದ್ದರು. ಇನ್ನು ಭಾರತದಲ್ಲಿ ಸಿನಿಮಾ ಸ್ಟ್ರೀಮಿಂಗ್‌ಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. 3 ದಿನಗಳಿಂದ 'ಮಾರ್ಟಿನ್' ಸಿನಿಮಾ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಎ.ಪಿ ಅರ್ಜುನ್ ನಿರ್ದೇಶನದ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಸರ್ಜಾ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಾರ್ಟಿನ್ ಹಾಗೂ ಅರ್ಜುನ್ ಆಗಿ ದ್ವಿಪಾತ್ರದಲ್ಲಿ ಧ್ರುವ ಸರ್ಜಾ ಅಬ್ಬರಿಸಿದ್ದಾರೆ. ಸಿನಿರಸಿಕರು ಓಟಿಟಿಯಲ್ಲಿ ಸಿನಿಮಾ ನೋಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ಸಿನಿಮಾ ವೀಕ್ಷಿಸುತ್ತಿರುವುದರಿಂದ ಪ್ರೈಂ ವಿಡಿಯೋದಲ್ಲಿ 'ಮಾರ್ಟಿನ್' ಟ್ರೆಂಡಿಂಗ್ ಆಗುತ್ತಿದೆ.
ಗ್ಯಾಂಗ್‌ಸ್ಟರ್ or ಟೆರರಿಸ್ಟ್?
ಎದುರಾಳಿಯನ್ನು ನಾಯಕನ ರೀತಿ ತೋರಿಸಿರುವುದು ನಿಜಕ್ಕೂ ಕೆಚ್ಚೆದೆಯ ಪ್ರಯತ್ನ. ಸಿನಿಮಾ ಬಗ್ಗೆ ಮಾತನಾಡಲು ಏನು ಇಲ್ಲ, ಗ್ರಾಫಿಕ್ಸ್, ಕಥೆ ಎಲ್ಲವೂ ಚಿತ್ರಕ್ಕೆ ವಿರುದ್ಧವಾಗಿದೆ. ಗ್ಯಾಂಗ್‌ಸ್ಟರ್ ಅಥವಾ ಟೆರರಿಸ್ಟ್? ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆ ಸಿಕ್ಕಿಲ್ಲ ಎನ್ನುವುದು ನೆಟ್ಟಿಗರೊಬ್ಬರ ಅಭಿಪ್ರಾಯ.
ವಿಎಫ್‌ಎಕ್ಸ್ ಕೆಟ್ಟದಾಗಿದೆ
ಮಾರ್ಟಿನ್, ಬಹಳ ಓವರ್ ಆಕ್ಷನ್. ಬರೀ ಆಕ್ಷನ್ ಎಪಿಸೋಡ್‌ಗಳು ಹಾಗೂ ಒಂದೆರಡು ಸನ್ನಿವೇಶಗಳು ಪರವಾಗಿಲ್ಲ. ಇನ್ನುಳಿದಂತೆ ಸಿನಿಮಾ ಬಹಳ ಭಯಾನಕವಾಗಿದೆ. ವಿಎಫ್‌ಎಕ್ಸ್ ಕೆಟ್ಟದಾಗಿದೆ. ಯಾಕೆ ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ ಎಂದು ನೋಡಲು ಸಿನಿಮಾ ವೀಕ್ಷಿಸಿದೆ. ಕಾರಣ ಏನು ಎಂದು ಈಗ ಗೊತ್ತಾಯಿತು ಎನ್ನುವುದು ಇನ್ನೊಬ್ಬರ ಅಭಿಪ್ರಾಯ.
ಯಾಕೆ ಅಷ್ಟು ಬೈಕೊಂಡ್ರು ಜನ?
ಕೊನೆಗೂ 'ಮಾರ್ಟಿನ್' ಸಿನಿಮಾ ವೀಕ್ಷಿಸಿದೆ. ಚೆನ್ನಾಗಿಯೇ ಇತ್ತು. ಯಾಕೆ ಅಷ್ಟು ಬೈಕೊಂಡ್ರು ಜನ? ಒಳ್ಳೆ ಡೈಲಾಗ್‌ಗಳಿರಲಿಲ್ಲ ಎನ್ನುವುದು ಬೇಸರದ ಸಂಗತಿ. ರೈನೋ ಆದರೂ ಥಿಯೇಟರ್‌ನಲ್ಲಿ ನೋಡುವಂತೆ ಇರಲಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಬೇರೆ ನಿರ್ದೇಶಕರಿಗೆ ಪಾಠ
'ಮಾರ್ಟಿನ್' ಸಿನಿಮಾ ವೀಕ್ಷಿಸಿದೆ. ಕಥೆ ಇಷ್ಟವಾಯಿತು. ಆದರೆ ಚಿತ್ರಕಥೆ ಹಾಗೂ ಬಿಜಿಎಂ ದೊಡ್ಡ ಸಮಸ್ಯೆ. ಸಾಕಷ್ಟು ಅನವಶ್ಯಕ ಸನ್ನಿವೇಶಗಳು. ನಾಯಕನನ್ನು ವಿಜೃಂಭಿಸಲು ಹೋಗಿ ಕಥೆ ಹೇಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಕಥೆ ಹಾಗೂ ಚಿತ್ರಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎನ್ನುವುದು ಬೇರೆ ನಿರ್ದೇಶಕರಿಗೆ ಪಾಠವಾಗಬೇಕು ಎಂದು ಚೇತನ್ ಎಂಬುವವರು ಬರೆದುಕೊಂಡಿದ್ದಾರೆ.
ಒಳ್ಳೆ ಆಕ್ಷನ್ ಸಿನಿಮಾ
ಸೂರ್ಯ ಎಂಬುವವರು 'ಮಾರ್ಟಿನ್' ಸಿನಿಮಾ ನೋಡಿ ವಿವರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಹೌದು ಲಾಜಿಕ್ ಇಲ್ಲದ ಒಂದಷ್ಟು ಸನ್ನಿವೇಶಗಳಿವೆ. ಕಿರುಚಾಟವೂ ಇದೆ. ಆದರೂ ಇಷ್ಟು ದ್ವೇಷ ಮಾಡುವ ಅವಶ್ಯಕತೆ ಇರಲಿಲ್ಲ. ಒಳ್ಳೆ ಆಕ್ಷನ್ ಸಿನಿಮಾ ಆಗುವ ಎಲ್ಲಾ ಸಾಮರ್ಥ್ಯ ಇತ್ತು. ವಿಎಫ್‌ಎಕ್ಸ್ ಇನ್ನು ಉತ್ತಮವಾಗಿರಬೇಕಿತ್ತು. ಆಕ್ಷನ್ ಸನ್ನಿವೇಗಳು ಸೂಪರ್, ಐಟಂ ಸಾಂಗ್ ಬೇಕಿರಲಿಲ್ಲ. ಲವ್ ಸಾಂಗ್ ವರ್ಕ್ ಆಗಲ್ಲ ಅಂದುಕೊಂಡಿದ್ದೆ. ಬಟ್ ಚೆನ್ನಾಗಿತ್ತು. ಆ ರೀಯಿ ಕಿರುಚಾಟ ಬೇಕಿರಲಿಲ್ಲ, ಒಳ್ಳೆ ರೀತಿಯಲ್ಲಿ ಪಾತ್ರ ಪೋಷಣೆ ಮಾಡಬಹುದಿತ್ತು ಎಂದು ವಿವರಿಸಿದ್ದಾರೆ.
ಧ್ರುವ ಪರ್ಫಾರ್ಮನ್ಸ್ ಸೂಪರ್
ಕೆಲವೊಂದು ಆಕ್ಷನ್ ಮಸ್ತ್ ಇದೆ. ಮಾರ್ಕೆಟ್ ಫೈಟ್ ಚೆನ್ನಾಗಿಲ್ಲ. ಬಿಜಿಎಂ ಚೆನ್ನಾಗಿದೆ. ಧ್ರುವ ಸರ್ಜಾ ಪರ್ಫಾರ್ಮನ್ಸ್ ಉತ್ತಮ, ನಾಯಕಿ ವೈಭವಿ ಹೊಸ ಕ್ರಶ್ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಚಿತ್ರಕಥೆ ದೊಡ್ಡ ಸಮಸ್ಯೆ
ಧ್ರುವ ಸರ್ಜಾ, ಉದಯ್ ಕೆ ಮೆಹ್ತಾ, ಅರುಣ್ ಬಾಲಾಜಿ, ಸ್ವಾಮಿಜಿ ಹಾಗೂ ಎಪಿ ಅರ್ಜುನ್ 'ಮಾರ್ಟಿನ್' ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಅವರೆಲ್ಲಾ ಸೇರಿ ಚಿತ್ರಕಥೆ ಮಾಡಿದ್ದಕ್ಕೆ ಈ ರೀತಿ ಆಗಿದೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.


Click it and Unblock the Notifications











