Max OTT; ಬ್ಲಾಕ್‌ಬಸ್ಟರ್ ಹಿಟ್ 'ಮ್ಯಾಕ್ಸ್' ಓಟಿಟಿ ಸ್ಟ್ರೀಮಿಂಗ್ ಎಲ್ಲಿ? ಯಾವಾಗ?
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಆರ್ಭಟ ಇನ್ನು ನಿಂತಿಲ್ಲ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಕೂಡ ಸಿನಿರಸಿಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. 2ನೇ ದಿನ ಕೂಡ ಬುಕ್‌ಮೈ ಶೋನಲ್ಲಿ 5 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ.
ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿತ್ತು. ವಿಜಯ್ ಕಾರ್ತಿಕೇಯನ್ ಚೊಚ್ಚಲ ಪ್ರಯತ್ನದಲ್ಲೇ ಜಾದೂ ಮಾಡಿದ್ದಾರೆ. ಒಂದು ಮಾಸ್ ಮಸಾಲ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದಾರೆ. ಸುದೀಪ್ ಸ್ಟ್ರಾಂಗ್ ಸ್ಕ್ರೀನ್ ಪ್ರಸೆನ್ಸ್, ಆಕ್ಷನ್ ಧಮಕಾ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.

ಅಂದಾಜು 50 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ 'ಮ್ಯಾಕ್ಸ್' ಸಿನಿಮಾ ಸದ್ದು ಮಾಡ್ತಿದೆ. ಆದರೆ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ಸೀಟಿನ ತುದಿಗೆ ಬಂದು ಕೂರುವಂತೆ ಮಾಡಿದೆ. ಸಿನಿಮಾ ನೋಡಿದ ಎಲ್ಲರೂ ಪೈಸಾ ವಸೂಲ್ ಎಂದು ಎಂಜಾಯ್ ಮಾಡುತ್ತಿದ್ದಾರೆ.
ವರ್ಷದ ಕೊನೆಗೆ ಬಂದಿದ್ದ 'ಮ್ಯಾಕ್ಸ್' ಮೊದಲ ಶೋನಿಂದಲೇ ಪಾಸಿಟಿವ್ ಟಾಕ್ ಪಡೆದುಕೊಂಡಿತ್ತು. ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಿತು. ಬಳಿಕ ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಅಲ್ಲಿ ಕೂಡ ಕಿಚ್ಚನ ಆರ್ಭಟ ನೋಡಿದವರು ಮೆಚ್ಚಿಕೊಂಡಿದ್ದರು. ಆದರೆ ದೊಡ್ಡಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಕರ್ನಾಟಕದಲ್ಲಿ ಮಾತ್ರ 'ಮ್ಯಾಕ್ಸ್' ಮ್ಯಾಜಿಕ್ ಮುಂದುವರೆದಿದೆ.
ಈಗಾಗಲೇ 'ಮ್ಯಾಕ್ಸ್' ಸಿನಿಮಾ 25 ದಿನಗಳತ್ತ ದಾಪುಗಾಲು ಇಟ್ಟಿದ್ದಾನೆ. ಇದೆಲ್ಲದರ ನಡುವೆ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ನಡೀತಿದೆ. ಸದ್ಯ ಚಿತ್ರದ HD ವರ್ಷನ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎನ್ನಲಾಗ್ತಿದೆ. ಹಾಗಾಗಿ ಆದಷ್ಟು ಬೇಗ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡುವ ನಿರೀಕ್ಷೆಯಿದೆ.
ಸುದೀಪ್ ನಟಿಸಿದ 'ವಿಕ್ರಾಂತ್ ರೋಣ' ಸಿನಿಮಾ 34 ದಿನಕ್ಕೆ ಓಟಿಟಿಗೆ ಬಂದಿತ್ತು. ಅದೇ ರೀತಿ 'ಮ್ಯಾಕ್ಸ್' ಸಿನಿಮಾ 30 ದಿನಗಳ ಬಳಿಕ ಸ್ಮಾಲ್‌ಸ್ಕ್ರೀನ್‌ಗ ಎಂಟ್ರಿ ಕೊಡುವ ಲೆಕ್ಕಾಚಾರ ನಡೀತಿದೆ. ಜೀ ಸಂಸ್ಥೆ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ. ಜನವರಿ 31ಕ್ಕೆ ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಸಾಕಷ್ಟು ಜನ 'ಮ್ಯಾಕ್ಸ್' ಸಿನಿಮಾ ಓಟಿಟಿ ಬಿಡುಗಡೆಗೆ ಕಾದು ಕೂತಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಕೂಡ ಮತ್ತೊಮ್ಮೆ ನೋಡಲು ಬಯಸಿದ್ದಾರೆ. ಹಾಗಾಗಿ ಯಾವಾಗ್ಯಾವಾಗ ಬರುತ್ತೆ ಎಂದು ಕಾಯುವಂತಾಗಿದೆ. ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿತರಣೆ ಮಾಡಿತ್ತು. ಅಂದಾಜು 15 ಕೋಟಿ ರೂ. ಗೆ ರೈಟ್ಸ್ ಮಾರಾಟವಾಗಿತ್ತು ಎನ್ನಲಾಗ್ತಿದೆ. ಈಗಾಗಲೇ ವಿತರಕರು ಕೂಡ ಲಾಭದಲ್ಲಿದ್ದಾರೆ.
ಉಪೇಂದ್ರ ನಿರ್ದೇಶಿಸಿ, ನಟಿಸಿ 'ಯುಐ' ಸಿನಿಮಾ ತೆರೆಕಂಡ ಬೆನ್ನಲ್ಲೇ 'ಮ್ಯಾಕ್ಸ್' ಸಿನಿಮಾ ಬಂದಿತ್ತು. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿತ್ತು. ಕಿಚ್ಚನ ಚಿತ್ರದಿಂದ ಉಪ್ಪಿ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದ್ದು ಸುಳ್ಳಲ್ಲ. ಆದರೂ ಎರಡೂ ಸಿನಿಮಾಗಳು ಕಳೆದ ವರ್ಷದ ಕೊನೆಗೆ ಬಾಕ್ಸಾಫೀಸ್ ಶೇಕ್ ಮಾಡಿದ್ದವು. ಶೀಘ್ರದಲ್ಲೇ 'ಯುಐ' ಸಿನಿಮಾ ಕೂಡ ಓಟಿಟಿಗೆ ಬರಲಿದೆ. ಓಟಿಟಿಯಲ್ಲಿ ಕೂಡ ಎರಡೂ ಸಿನಿಮಾಗಳ ನಡುವೆ ಮತ್ತೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
Disclaimer: ಅಧಿಕೃತವಾಗಿ 'ಮ್ಯಾಕ್ಸ್' ಚಿತ್ರದ ಓಟಿಟಿ ಸ್ಟ್ರೀಮಿಂಗ್ ಡೇಟ್ ಘೋಷಣೆ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಚರ್ಚೆ ನಡೀತಿದೆ.


Click it and Unblock the Notifications











