ಎರಡು ತಿಂಗಳ ಬಳಿಕ ಓಟಿಟಿಗೆ 'ಮ್ಯಾಕ್ಸ್' ಎಂಟ್ರಿ; ಮ್ಯಾಕ್ಸಿಮಮ್ ಮನರಂಜನೆಗೆ ರೆಡಿನಾ?
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇವತ್ತಿಗೂ ಕೆಲವಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ನಡುವೆ ಸಿನಿಮಾ ಓಟಿಟಿಗೆ ಬರೋದು ಯಾವಾಗ? ಎಂದು ಕೆಲವರು ಕೇಳುತ್ತಿದ್ದಾರೆ. ಇತ್ತೀಚೆಗೆ ಟಿವಿ ಪ್ರೀಮಿಯರ್ ಬಗ್ಗೆ ಜೀ ಕನ್ನಡದಲ್ಲಿ ಪ್ರೋಮೊ ಕೂಡ ಬಂದಿತ್ತು.
ಓಟಿಟಿಗೆ ಬರೋಕು ಮುನ್ನ 'ಮ್ಯಾಕ್ಸ್' ಸಿನಿಮಾ ಟಿವಿಗೆ ಬರುತ್ತಾ? ಎಂದು ಕೆಲವರು ತಲೆ ಕಡೆಸಿಕೊಂಡಿದ್ದರು. ಓಟಿಟಿ ರೈಟ್ಸ್ ಯಾರಿಗೆ ಸೇಲ್ ಆಗಿದೆ? ಯಾವಾಗ ಸ್ಟ್ರೀಮಿಂಗ್? ಎನ್ನುವ ಪ್ರಶ್ನೆ ಕಾಡುತಿತ್ತು. ಇದೀಗ ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿದ್ದ 'ಮ್ಯಾಕ್ಸ್' ಸಿನಿಮಾ 50 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ.

ಒಂದೇ ರಾತ್ರಿಯಲ್ಲಿ ನಡೆಯುವ 'ಮ್ಯಾಕ್ಸ್' ಸಿನಿಮಾ ಕಥೆ ಪ್ರೇಕ್ಷಕರನ್ನು ರಂಜಿಸಿತ್ತು. ಬಾದ್‌ಶಾ ಸುದೀಪ್ ಅಭಿಮಾನಿಗಳಿಗೆ ಕೊಂಚ ಹೆಚ್ಚೇ ಕಿಕ್ ಕೊಟ್ಟಿತ್ತು. ಅರ್ಜುನ್ ಮಹಾಕ್ಷಯ್ ಆಗಿ ಕಿಚ್ಚ ಅಬ್ಬರಿಸಿ ಬೊಬ್ಬಿರಿದಿದ್ದರು. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಗೆಲುವಿನ ನಗೆ ಬೀರಿದ್ದರು. ರೆಗ್ಯುಲರ್ ಕಮರ್ಷಿಯಲ್ ಸೂತ್ರಗಳನ್ನು ಬಿಟ್ಟು ವಿಭಿನ್ನ ಶೈಲಿಯಲ್ಲಿ ಸಿನಿಮಾ ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು.
ಸಸ್ಪೆಂಡ್ ಆಗಿದ್ದ ಇನ್ಸ್‌ಪೆಕ್ಟರ್ ಅರ್ಜುನ್ ಮಹಾಕ್ಷಯ್ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಚಾರ್ಜ್ ತೆಗೆದುಕೊಳ್ಳಲು ಸಮಯ. ಮರುದಿನ ಡ್ಯೂಟಿಗೆ ಸೇರಿಬೇಕಿರುತ್ತದೆ. ಅಷ್ಟರಲ್ಲೇ ಮಿನಿಸ್ಟರ್‌ಗಳ ಮಕ್ಕಳನ್ನು ಬಂಧಿಸಿ ಅದೇ ಠಾಣೆಯಲ್ಲಿಡುತ್ತಾನೆ. ಇದ್ದಕ್ಕಿದಂತೆ ಅವರಿಬ್ಬರು ಸತ್ತು ಹೋಗುತ್ತಾರೆ. ಅವರು ಹೇಗೆ ಸತ್ತರು? ಅದಕ್ಕೆ ಕಾರಣ ಏನು? ಮಿನಿಸ್ಟರ್ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ? ಈಗ ಅವರು ಸತ್ತು ಹೋಗಿದ್ದಾರೆ ಅಂದ್ರೆ, ಪರಿಣಾಮ ಏನಾಗಬಹುದು? 'ಮ್ಯಾಕ್ಸ್' ಇದರಿಂದ ಹೇಗೆ ಪಾರಾಗುತ್ತಾನೆ? ಎನ್ನುವುದೇ ಸಿನಿಮಾ ಕಥೆ.
ಕಥೆ ಸಿಂಪಲ್ ಅನಿಸಿದರೂ ಟ್ರೀಟ್‌ಮೆಂಟ್ ಮಜವಾಗಿದೆ. ಅದೇ ಕಾರಣಕ್ಕೆ 'ಮ್ಯಾಕ್ಸ್' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹೆಚ್ಚು ತಲೆ ಕಡೆಸಿಕೊಳ್ಳದೇ ಒಮ್ಮೆ ಕಥೆಯೊಳಗೆ ಇಳಿದರೆ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಕ್ರಿಸ್‌ಮಸ್ ಹಬ್ಬದ ದಿನವೇ ಸಿನಿಮಾ ತೆರೆಗಪ್ಪಳಿಸಿತ್ತು. ಹಾಗಾಗಿ ಮೊದಲ ದಿನದಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ವರ್ಷಾಂತ್ಯದ ರಜೆಗಳು ಚಿತ್ರದ ಗಳಿಕೆ ಹೆಚ್ಚಿಸಿತ್ತು. ಅಭಿಮಾನಿಗಳು ಪದೇ ಪದೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿತ್ತು. ನಿರ್ಮಾಪಕರು, ವಿತರಕರು, ಪ್ರದರ್ಶಕರು ಎಲ್ಲರೂ ಲಾಭದಲ್ಲಿದ್ದಾರೆ. ಸುದೀಪ್ ಕೂಡ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಸಂಭಾವನೆ ಬದಲು ಶೇರ್ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ಕಿಚ್ಚನ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಉಗ್ರಂ ಮಂಜು, ಸಂಯುಕ್ತ ಹೊರನಾಡ್, ಸುಕೃತಾ ವಾಗ್ಲೆ 'ಮ್ಯಾಕ್ಸ್' ಚಿತ್ರದ ತಾರಾಗಣದಲ್ಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಒಟ್ಟಾರೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.
ಸದ್ಯ 'ಮ್ಯಾಕ್ಸ್' ಓಟಿಟಿ ರಿಲೀಸ್ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಫೆಬ್ರವರಿ 22ಕ್ಕೆ ಸಿನಿಮಾ ಜೀ-5ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ. ಫೆಬ್ರವರಿ 22ಕ್ಕೆ ಓಟಿಟಿಗೆ ಬಂದ ಬಳಿಕ ಶಿವರಾತ್ರಿ ಸಂಭ್ರಮದಲ್ಲಿ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಅಥವಾ ಅದಕ್ಕಿಂತೂ ಮೊದ್ಲೆ ಟಿವಿಯಲ್ಲಿ ಬರುತ್ತಾ ನೋಡಬೇಕು.
'ಮ್ಯಾಕ್ಸ್' ಚಿತ್ರದ ಪೈರಸಿ ಕಾಪಿ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಆದರೂ ಕೆಲವರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಬರ್ತಿದ್ದಾರೆ. ಅದೇ ಕಾರಣಕ್ಕೆ ಓಟಿಟಿ ಹಾಗೂ ಟಿಟಿಯಲ್ಲಿ ಪ್ರಸಾರ ಮಾಡಲು ಹಿಂದೇಟು ಹಾಕಲಾಗುತ್ತಿದೆ.
ವಿಶೇಷ ಸೂಚನೆ: 'ಮ್ಯಾಕ್ಸ್' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಜೀ-5 ಅಧಿಕೃತ ಮಾಹಿತಿ ನೀಡಿಲ್ಲ. ಫೆಬ್ರವರಿ 22ಕ್ಕೆ ಸ್ಟ್ರೀಮಿಂಗ್ ಎನ್ನುವುದು ಬರೀ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ.


Click it and Unblock the Notifications











