ಅರಿಷಡ್ವರ್ಗದ ಚಕ್ರವ್ಯೂಹದಲ್ಲಿ ಗುಡ್ಡು ಪಂಡಿತ್, ಯಾರಿಗೆ ಒಲಿಯಲಿದೆ ಮಿರ್ಜಾಪುರ್‌ನ ಗದ್ದುಗೆ..?
ಯುದ್ಧ ರಣರಂಗದಲ್ಲಿಯೇ ನಡೆಯಬೇಕು ಎಂದೇನು ಇಲ್ಲ. ಯಾಕೆಂದರೆ .. ಸರಿ-ತಪ್ಪುಗಳ ನಡುವೆ.. ಧರ್ಮ- ಅಧರ್ಮದ ನಡುವೆ.. ನ್ಯಾಯ- ಅನ್ಯಾಯದ ನಡುವೆ.. ದಿನ ನಿತ್ಯ ಯುದ್ಧ ನಡೆಯುತ್ತಾನೇ ಇರುತ್ತೆ. ಇನ್ನೂ ಕಾಮ, ಕ್ರೋಧ, ಲೋಭ, ಮೋಹ, ಮದ , ಮಾತ್ಸರ್ಯ ಎಂದ ಅರಿಷಡ್ವರ್ಗದ ಚಕ್ರವ್ಯೂಹದಲ್ಲಿ ನಡೆಯುವ ಯುದ್ಧವನ್ನ ಜಯಿಸುವುದು ಇನ್ನೂ ಕಷ್ಟ. ಒಮ್ಮೆ ಹೊರಗಿನ ಶತ್ರುಗಳ ಜೊತೆ ಇನ್ನೂ ಕೆಲವೊಮ್ಮೆ ಒಳಗಿನ ಶತ್ರುಗಳ ಜೊತೆ ನಡೆಯುವ ಈ ಅಂತರಂಗದ ಯುದ್ಧದ ಕಥೆಯನ್ನೇ ಮಿರ್ಜಾಪುರ್ ಮೂಲಕ ಹೇಳುವ ಪ್ರಯತ್ನವನ್ನೇ ಬಾಲಿವುಡ್ ಮಾಡುತ್ತಿದೆ. ಮಿರ್ಜಾಪುರ್ ವೆಬ್ ಸರಣಿಯ ಮೂರನೇ ಭಾಗದ ಟ್ರೇಲರ್, ಸದ್ಯಕ್ಕೆ.. ಅನೇಕರನ್ನ ಅವಕ್ಕಾಗಿಸಿದೆ.
ಹೌದು, ತೀರಾ ಇತ್ತೀಚೆಗಷ್ಟೇ ಟೀಸರ್ ಮೂಲಕ ಕುತೂಹಲ ಕೆರಳಿಸಿದ್ದ ಮಿರ್ಜಾಪುರ್ -ಭಾಗ 3ರ ಟ್ರೇಲರ್ ಈಗ ಬಿಡುಗಡೆಯಾಗಿದೆ. 24 ಘಂಟೆಯಲ್ಲಿ 82ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ.ಯೂಟ್ಯೂಬ್‌ನಲ್ಲಿ ನಂಬರ್ 1 ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿಯೂ ಇದೆ.

16 ನವೆಂಬರ್ 2018 ರಂದು ಅಮೆಜಾನ್ ನಲ್ಲಿ ಪ್ರಸಾರವಾದ ಮೊದಲ ಭಾಗದಲ್ಲಿ ಗುಡ್ಡು ಪಂಡಿತ್ ಸಹೋದರ ಬಬ್ಲು ಪಂಡಿತ್ ಹತ್ಯೆಯಾಗಿತ್ತು. ತಮ್ಮನ ಕೊಲೆಯ ಸೇಡನ್ನ ಗುಡ್ಡು ಪಂಡಿತ್ ತೀರಿಸಿಕೊಂಡಿದ್ಹೇಗೆ ಎಂಬ ಪ್ರಶ್ನೆಗೆ ಉತ್ತರ ಎರಡನೇ ಭಾಗದಲ್ಲಿ ಸಿಕ್ಕಿತ್ತು. ಈಗ ಅಳಿದು ಉಳಿದ ಬಲಾಢ್ಯರ ಜೊತೆ ಬಂದು ಸೇರಿಕೊಂಡ ಹೊಸ ಪುಂಡ-ಪೋಕರಿಗಳಲ್ಲಿ ಮಿರ್ಜಾಪುರ್‌ನ ಗದ್ದುಗೆ ಯಾರಿಗೆ ಒಲಿಯುತ್ತೆ ಎನ್ನುವುದನ್ನು ನಿರ್ದೇಶಕರಾದ ಗುರ್ಮೀತ್ ಸಿಂಗ್ ಮತ್ತು ಆನಂದ್ ಐಯ್ಯರ್ ಹೇಳಲು ಸಿದ್ಧರಾಗಿದ್ಧಾರೆ.
ಅಂದ್ಹಾಗೇ ದ್ವೇಷ ಮತ್ತು ಪ್ರತೀಕಾರದಿಂದ ಕೂಡಿರುವ ಇಂತಹ ಚಿತ್ರಗಳಿಂದ ಸಮಾಜಕ್ಕೆ ಚಿತ್ರರಂಗ ಕೊಡುವ ಸಂದೇಶವೇನು ಎಂಬ ಪ್ರಶ್ನೆ ಮೊದಲನೇ ಭಾಗ ಪ್ರಸಾರವಾದಾಗ ಎದ್ದಿತ್ತು. ಎರಡನೇ ಭಾಗ ಬಿಡುಗಡೆಯಾದಾಗ ಕೂಡ ಅಪಸ್ವರದ ಕೂಗು ಕೇಳಿ ಬಂದಿತ್ತು. ಈಗ ಟ್ರೇಲರ್ ಬಿಡುಗಡೆಯಾದ ಹಿನ್ನೆಲೆ ಈ ಚರ್ಚೆ ಮತ್ತೊಮ್ಮೆ ಶುರುವಾಗಿದೆ.

ಉಳಿದಂತೆ ಪಂಕಜ್ ತ್ರಿಪಾಠಿ .. ರಸಿಕಾ ದುಗಲ್ .. ಅಲಿಫಜಲ್.. ಇಶಾ ತಲ್ವಾರ್.. ವಿಜಯ್ ವರ್ಮಾ.. ಲಿಲ್ಲಿ ಪುಟ್.. ಸೇರಿ ಅನೇಕರು ಮುಂದುವರೆದಿದ್ದಾರೆ. ಇನ್ನೂ ಬಾಲಿವುಡ್‌ನ ಖ್ಯಾತ ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ತಮ್ಮ ಪಾರ್ಟ್ನರ್ ರಿತೇಶ್ ಸಿಧ್ವಾನಿ ಜೊತೆ ಸೇರಿ 'ಎಕ್ಸೆಲ್ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ಈ ವೆಬ್ ಸರಣಿಯನ್ನ ನಿರ್ಮಿಸಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಅನೇಕರು ಕಾತುರದಿಂದ ಕಾಯುತ್ತಿರುವ ಮಿರ್ಜಾಪುರ್ ನ ಮೂರನೇ ಸರಣಿ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟ್ರೇಲರ್ ಟಾಕ್ ಆಫ್ ದಿ ಟೌನ್ ಆಗಿದೆ. ಕುತೂಹಲವನ್ನೂ ಹೆಚ್ಚಿಸಿದೆ. ಓಟಿಟಿ ಪ್ರಪಂಚದಲ್ಲಿ ಈ ಬಾರಿ ಗುಡ್ಡು ಪಂಡಿತ್ ಮತ್ತು ಕಾಲಿನ್ ಭಯ್ಯಾ ಮೋಡಿ ಹೇಗಿರುತ್ತೆ ಅನ್ನುವುದಕ್ಕೆ ಉತ್ತರ ಜುಲೈ 05ರಂದು ಸಿಗಲಿದೆ.


Click it and Unblock the Notifications











