'ಮನಿಹೈಸ್ಟ್' ಅಂತಿಮ ಹಣಾಹಣಿ: ಇದು ಕೇವಲ ದರೋಡೆಯಲ್ಲ, ಯುದ್ಧ!
ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ 'ಮನಿಹೈಸ್ಟ್' ವೆಬ್ ಸರಣಿ ಕೊನೆಯ ಭಾಗ ಪ್ರಸಾರವಾಗಲು ಇನ್ನು ಎರಡು ದಿನಗಳಷ್ಟೆ ಬಾಕಿ ಇದೆ. ಡಿಸೆಂಬರ್ 03 ರಂದು ಅಂದರೆ ಡಿಸೆಂಬರ್ 02 ರ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ 'ಮನಿಹೈಸ್ಟ್' ಸೀಸನ್ ಐದರ ಎರಡನೇ ಭಾಗ ಹಾಗೂ ಈ ವೆಬ್ ಸರಣಿಯ ಕಟ್ಟ ಕಡೆಯ ಭಾಗ ಪ್ರಸಾರಗೊಳ್ಳಲಿದೆ.
ದರೋಡೆಕೋರರು ಮತ್ತು ಪೊಲೀಸರ ನಡುವಿನ ಕತೆಯನ್ನು 'ಮನಿಹೈಸ್ಟ್' ವೆಬ್ ಸರಣಿ ಹೊಂದಿದ್ದು ಜಗತ್ತಿನಲ್ಲಿ ಅತಿ ಹೆಚ್ಚು ಜನರು ನೋಡಿದ, ಮೆಚ್ಚಿನ ವೆಬ್ ಸರಣಿಗಳಲ್ಲಿ ಇದು ಸಹ ಒಂದಾಗಿದೆ. ಈ ವೆಬ್ ಸರಣಿ ಕೇವಲ ದರೋಡೆ-ಪೋಲಿಸರ ನಡುವಿನ ಕತೆ ಮಾತ್ರವೇ ಅಲ್ಲದೆ, ಜನವಿರೋಧಿ ಪ್ರಭುತ್ವದ ವಿರುದ್ಧ ಪ್ರತಿರೋಧದ ರೂಪಕವನ್ನು ಹೊಂದಿದೆ. ಹಾಗಾಗಿ ಈ ವೆಬ್ ಸರಣಿ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿಕೊಂಡಿದೆ.
'ಮನಿಹೈಸ್ಟ್' ಸೀಸನ್ ಐದರ ಎರಡನೇ ಭಾಗದ ಟ್ರೇಲರ್, ಟೀಸರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ಈ ಜನಪ್ರಿಯ ವೆಬ್ ಸರಣಿಯ ಅಂತ್ಯ ಹೇಗಾಗಲಿದೆ ಎಂಬ ಕುತೂಹಲವನ್ನು ಈ ಟೀಸರ್, ಟ್ರೇಲರ್‌ಗಳು, ಪೋಸ್ಟರ್, ಪ್ರೋಮೋಗಳು ನೂರ್ಮಡಿಗೊಳಿಸಿವೆ.

ಸೀಸನ್ ಐದರ ಮೊದಲ ಭಾಗದಲ್ಲಿ 'ಮನಿಹೈಸ್ಟ್' ವೆಬ್ ಸರಣಿಯ ಅತ್ಯಂತ ಪ್ರಮುಖ ಪಾತ್ರವೊಂದು ಅಂತ್ಯವಾಗಿತ್ತು. ಬ್ಯಾಂಕ್ ಆಫ್ ಸ್ಪೇನ್‌ನಲ್ಲಿ ಟನ್‌ಗಟ್ಟಲೆ ಚಿನ್ನದ ದರೋಡೆಯಲ್ಲಿ ನಿರತವಾಗಿರುವ ಗ್ಯಾಂಗ್‌ನ ಪ್ರಮುಖ ಸದಸ್ಯೆ ಟೋಕಿಯೊ ನಿಧನ ಹೊಂದಿದ್ದಳು. ಇದು ಡಾಲಿ ಮುಖವಾಡದ ದರೋಡೆ ಗ್ಯಾಂಗ್‌ಗೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಪೊಲೀಸರು ಡಾಲಿ ಮುಖವಾಡದ ದರೋಡೆ ಗ್ಯಾಂಗ್ ಅನ್ನು ಕೊಂದು ತೀರಲು ನಿಶ್ಚಯಿಸಿ ಬ್ಯಾಂಕ್ ಒಳಗೆ ಬಂದಾಗಿದೆ. ಈ ನಡುವೆ ಟೋಕಿಯೋ ಅನ್ನು ಕಳೆದುಕೊಂಡ ಗ್ಯಾಂಗ್ ತೀವ್ರ ಹಿನ್ನಡೆಯಲ್ಲಿದೆ. ದರೋಡೆ ಗ್ಯಾಂಗ್‌ನ ಸದಸ್ಯರು ಒಬ್ಬೊಬ್ಬರಾಗಿ ಸಾಯುವ ಸಾಧ್ಯತೆಗಳು ದಟ್ಟವಾಗಿವೆ. ವೆಬ್ ಸರಣಿಯ ಕೊನೆಯ ಭಾಗದ ಟ್ರೇಲರ್‌ನಲ್ಲಿ ಸಹ ದರೋಡೆಕೋರರನ್ನು ಪೊಲೀಸರು ಬಂಧಿಯಾಗಿಸುವ ದೃಶ್ಯಗಳನ್ನು ತೋರಿಸಲಾಗಿದೆ.
ಆದರೆ ಇದೀಗ ನೆಟ್‌ಫ್ಲಿಕ್ಸ್, 'ಮನಿಹೈಸ್ಟ್' ವೆಬ್ ಸರಣಿಯ ಹೊಸ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಪ್ರೋಮೋದಲ್ಲಿ ಭರವಸೆಯೊಂದು ಕಾಣುತ್ತಿದೆ. ಒಡೆದು ಹೋದ ಡಾಲಿ ಮುಖವಾಡವನ್ನು ವ್ಯಕ್ತಿಯೊಬ್ಬ ಚಿನ್ನದ ಲೇಪನ ಹಾಕಿ ಈ ಹಿಂದಿಗಿಂತಲೂ ಹೆಚ್ಚು ಶಕ್ತಿದಾಯಕ ಮಾಡುತ್ತಿದ್ದಾನೆ. ಪ್ರೋಮೋದ ಹಿನ್ನೆಲೆಯಲ್ಲಿ ಟೋಕಿಯೋ ದನಿ ಸಹ ಇದನ್ನೇ ಹೇಳುತ್ತಿದೆ, 'ನಾವು ಈ ಹಿಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿ ಮರಳುತ್ತೇವೆ. ಒಟ್ಟಾಗಿದ್ದರಷ್ಟೆ ನಾವು,'ನಾವಾಗಿ' ಉಳಿಯಲು ಸಾಧ್ಯ' ಎಂದು ಪ್ರೋಮೋದಲ್ಲಿ ಟೋಕಿಯೋ ಹೇಳುತ್ತಿದ್ದಾಳೆ. ಅಲ್ಲದೆ ಈ ಪ್ರೋಮೋಗೆ 'ದಿ ರೆಸಿಸ್ಟೆನ್ಸ್' (ಪ್ರತಿರೋಧ) ಎಂದು ಹೆಸರಿಡಲಾಗಿದೆ. ಅಲ್ಲಿಗೆ, ಡಾಲಿ ಮುಖವಾಡದ ದರೋಡೆಕೋರರು ಪೊಲೀಸರಿಗೆ ಶರಣಾಗುವುದಿಲ್ಲ ಬದಲಿಗೆ ಪ್ರತಿರೋಧ ತೋರುತ್ತಾರೆ, ಯುದ್ಧ ಮಾಡುತ್ತಾರೆ ಎಂಬ ಸುಳಿವನ್ನು ಇದೀಗ ಬಿಡುಗಡೆ ಆಗಿರುವ ಪ್ರೋಮೋ ನೀಡುತ್ತಿದೆ.
'ಮನಿಹೈಸ್ಟ್'ನಲ್ಲಿ ಈವರೆಗೆ ಆಗಿರುವುದೇನು?
ಬ್ಯಾಂಕ್ ಆಫ್ ಸ್ಪೇನ್‌ನಲ್ಲಿ ದರೋಡೆ ಇನ್ನೂ ಮುಂದುವರೆಯುತ್ತಿದ್ದು, ದರೋಡೆಕೋರ ಗುಂಪಿಗೆ ಹೊರಗಿನಿಂದಲೇ ಪ್ರೊಫೆಸರ್ ಸಲಹೆಗಳನ್ನು, ಸೂಚನೆಗಳನ್ನು ನೀಡುತ್ತಿರುತ್ತಾನೆ. ಆದರೆ ಈಗ ಏಕಾ-ಏಕಿ ಪ್ರೊಫೆಸರ್ ಕಾಣದಂತಾಗಿರುವುದು ಒಳಗಿರುವವರಿಗೆ ತೀವ್ರ ಆತಂಕ ಉಂಟು ಮಾಡಿದೆ. ಬ್ಯಾಂಕ್ ಆಫ್ ಸ್ಪೇನ್‌ನಲ್ಲಿರುವ 90 ಟನ್ ಚಿನ್ನವನ್ನು ಕರಗಿಸಿಟ್ಟು ಈಗ ಅದನ್ನು ಹೊರಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ ಒಳಗಿರುವ ದರೋಡೆಕೋರರು. ಪ್ರೊಫೆಸರ್ ಸಂಪರ್ಕಕ್ಕೆ ಸಿಗದೇ ಇರುವುದು ಅವರಲ್ಲಿ ಆತಂಕದ ಜೊತೆಗೆ ಪರಸ್ಪರ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ. ಈ ನಡುವೆ ಗುಂಪಿನ ಪ್ರಮುಖ ಸದಸ್ಯೆ ಟೋಕಿಯೊ ಕೂಡ ಅಸುನೀಗಿದ್ದಾಳೆ, ಬ್ಯಾಂಕ್‌ನ ಒಳಗಿರುವವರು ಆತಂಕಿತರಾಗಿದ್ದಾರೆ, ಪೊಲೀಸರು ಬ್ಯಾಂಕ್ ಒಳಗೆ ಪ್ರವೇಶಿಸಿ ದರೋಡೆಕೋರರ ಮೇಲೆ ಯುದ್ಧ ಸಾರಿದ್ದಾರೆ. ದರೋಡೆಕೋರರು ಜೀವಂತವಾಗಿ ಬ್ಯಾಂಕ್‌ನಿಂದ ಹೊರಗೆ ಹೋಗುವ ಸಾಧ್ಯತೆಗಳೆಲ್ಲ ಬಹುತೇಕ ಬಂದ್ ಆಗಿವೆ ಇದು ಈವರೆಗೆ ನಡೆದಿರುವ ಕತೆ, ಡಿಸೆಂಬರ್ 03 ರಂದು ಬಿಡುಗಡೆ ಆಗುವ ಐದನೇ ಸೀಸನ್‌ನ ಕೊನೆಯ ಭಾಗದಲ್ಲಿ, ದರೋಡೆಕೋರರು ಪೊಲೀಸರಿಂದ ತಪ್ಪಿಸಿಕೊಂಡು ಚಿನ್ನವನ್ನು ಹೊರಗೆ ಸಾಗಿಸುತ್ತಾರೆಯೇ ಅಥವಾ ಪೊಲೀಸರ ಗುಂಡಿಗೆ ಬಲಿಯಾಗುತ್ತಾರೆಯೇ ಅಥವಾ ಪೊಲೀಸರಿಗೆ ಶರಣಾಗಿ ಜೀವ ಉಳಿಸಿಕೊಳ್ಳುತ್ತಾರೆಯೇ ಎಂಬುದು ಗೊತ್ತಾಗಲಿದೆ.


Click it and Unblock the Notifications











