ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ನೋಡಬಹುದಾದ ಹಿಟ್ ಸಿನಿಮಾಗಳಿವು
ಸರ್ಕಾರವು ವೀಕೆಂಡ್ ಲಾಕ್‌ಡೌನ್ ಹಿಂಪಡೆದಿದೆ. ಆದರೆ ಚಿತ್ರಮಂದಿರಗಳ ಮೇಲೆ ಹೇರಿರುವ 50% ಆಕ್ಯುಪೆನ್ಸಿ ನಿಯಮ ಹಾಗೆಯೇ ಇದೆ. ಹಾಗಾಗಿ ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಆಗಿಲ್ಲ. ಹಾಗಾಗಿ ಈ ವೀಕೆಂಡ್‌ನಲ್ಲಿ ಸಹ ಮನರಂಜನೆಗೆ ಟಿವಿ ಹಾಗೂ ಒಟಿಟಿಗಳನ್ನೇ ನೆಚ್ಚಿಕೊಳ್ಳಬೇಕಿದೆ.
Recommended Video
ಕೊರೊನಾ ಹೆಚ್ಚಾದಂತೆ ಒಟಿಟಿಗಳು ಸಹ ಹೆಚ್ಚು ಸಕ್ರಿಯವಾಗುತ್ತವೆ. ಈಗಲೂ ಹಾಗೆಯೇ ಆಗಿದೆ. ಒಟಿಟಿಗಳು ದೊಡ್ಡ ಸಂಖ್ಯೆಯ ಕಂಟೆಂಟ್ ಅನ್ನು ಈ ಬಿಡುಗಡೆ ಮಾಡಿವೆ. ಎಲ್ಲ ವಯೋಮಾನದ, ಎಲ್ಲ ರೀತಿಯ ಅಭಿರುಚಿಯ ವೀಕ್ಷಕರಿಗೆ ತಕ್ಕಂತೆ ಒಟಿಟಿ ಕಂಟೆಂಟ್ ಬಿಡುಗಡೆ ಮಾಡಿದೆ.
ಈ ವಾರ ಒಟಿಟಿಯಲ್ಲಿ ಹೊಸ ಕನ್ನಡ ಸಿನಿಮಾಗಳು ಬಿಡುಗಡೆ ಆಗದಿದ್ದರೂ ಈಗಾಗಲೇ ಬಿಡುಗಡೆ ಆಗಿರುವ ಕನ್ನಡದ ಕೆಲ ಸಿನಿಮಾಗಳು ಒಟಿಟಿಯಲ್ಲಿ ಅಬ್ಬರಿಸುತ್ತಿವೆ. ಕನ್ನಡ ಸಿನಿಮಾದ ಜೊತೆಗೆ ಪರಭಾಷೆಯ ಕೆಲವು ಹೊಸ ಸಿನಿಮಾಗಳು ಸಹ ಒಟಿಟಿಗೆ ದಾಂಗುಡಿ ಇಟ್ಟಿವೆ. ಒಟ್ಟಾರೆ ಈ ವಾರಾಂತ್ಯ ಒಟಿಟಿ ವೀಕ್ಷಕರಿಗೆ ಮೃಷ್ಟಾನ್ನ ಭೋಜನವೇ ಸರಿ.

'ಗರುಡ ಗಮನ ವೃಷಭ ವಾಹನ'
ಜನವರಿ 13 ರಂದು ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿರುವ ಈ ಕನ್ನಡ ಸಿನಿಮಾ ಹಲವು ಪರಭಾಷೆ ಸಿನಿಮಾಗಳನ್ನು ಹಿಂದಿಕ್ಕಿ ಅದ್ಭುತ ಪ್ರದರ್ಶನ ಕಾಣುತ್ತಿದೆ. 'ಗರುಡ ಗಮನ ವೃಷಭ ವಾಹನ'ನ ಅಬ್ಬರಕ್ಕೆ ಸಲ್ಮಾನ್ ಖಾನ್‌ರ ಅಂತಿಮ ಸಿನಿಮಾವೇ ಹಿಂದಡಿ ಇಟ್ಟಿದೆ. ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಸಿನಿಮಾ ಈ ವಾರಾಂತ್ಯ ನೋಡಲು ಒಂದೊಳ್ಳೆ ಸಿನಿಮಾ ಆಗಬಲ್ಲದು. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಸಹ ಇದ್ದಾರೆ. ಈ ವಾರ ಯಾವುದೇ ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿಲ್ಲ.

ಎರಡು ಹಿಟ್ ತೆಲುಗು ಸಿನಿಮಾ ಬಿಡುಗಡೆ
ಈ ವಾರ ಎರಡು ಸೂಪರ್ ಹಿಟ್ ತೆಲುಗು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಾನಿ-ಸಾಯಿ ಪಲ್ಲವಿ-ಕೃತಿ ಶೆಟ್ಟಿ ನಟನೆಯ 'ಶ್ಯಾಮ ಸಿಂಘ ರಾಯ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತ್ತು. 2018 ರಲ್ಲಿ ಮಲಯಾಳಂನಲ್ಲಿ ಬಿಡುಗಡೆ ಆಗಿದ್ದ 'ಹೇ ಜೂಡ್' ಸಿನಿಮಾದ ತೆಲುಗು ಆವೃತ್ತಿ ಇದೇ ವಾರ ತೆಲುಗಿನ ಒಟಿಟಿ 'ಆಹಾ'ನಲ್ಲಿ ಬಿಡುಗಡೆ ಆಗಿದೆ.

ಎರಡು ತಮಿಳು ಸಿನಿಮಾಗಳು ಬಿಡುಗಡೆ
ಈ ವಾರಾಂತ್ಯಕ್ಕೆ ಎರಡು ತಮಿಳು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. ಡಿಸೆಂಬರ್ 21 ರಂದು ಬಿಡುಗಡೆ ಆಗಿದ್ದ 'ಬ್ಯಾಚುಲರ್' ಸಿನಿಮಾ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಯುವ ಜೋಡಿಯ ಪ್ರೀತಿ-ರೊಮ್ಯಾನ್ಸ್ ಕತೆಯನ್ನು ಸಿನಿಮಾ ಒಳಗೊಂಡಿದೆ. ತಮಿಳಿನ 'ಮುದಲ್ ನೀ, ಮುದಿವುಮ್ ನೀ' ಸಿನಿಮಾ ಜನವರಿ 21ರಂದು ನೇರವಾಗಿ ಜೀ5 ನಲ್ಲಿ ಬಿಡುಗಡೆ ಆಗಿದೆ. ಸಿನಿಮಾವು 90 ರ ದಶಕದ ಸ್ಕೂಲ್ ಪ್ರೇಮಕತೆಯನ್ನು ಒಳಗೊಂಡಿದ್ದು, ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದಿವೆ.

ಬಿಡುಗಡೆ ಆಗಿರುವ ಮಲಯಾಳಂ ಸಿನಿಮಾ
ಮಲಯಾಳಂ ಸಿನಿಮಾಗಳು ಒಟಿಟಿಗಳ ಮೇಲೆ ಪಾರುಪತ್ಯ ಸಾಧಿಸಿವೆ. ಆದರೆ ಈ ವಾರಾಂತ್ಯದಲ್ಲಿ ಕೇವಲ ಒಂದು ಹೊಸ ಮಲಯಾಳಂ ಸಿನಿಮಾ ಅಷ್ಟೆ ಬಿಡುಗಡೆ ಆಗಲಿದೆ. ರಾಹುಲ್ ಸದಾಶಿವನ್ ನಿರ್ದೇಶನ ಮಾಡಿರುವ 'ಭೂತಕಾಲಂ' ಸಿನಿಮಾ ಜನವರಿ 21ಕ್ಕೆ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಮಗ ಮತ್ತು ಅಮ್ಮನ ಕುರಿತಾದ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಥ್ರಿಲ್ಲರ್ ಅಂಶಗಳು ಸಹ ಇವೆ. ಕೆಲವು ದಿನಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ ಮಲಯಾಳಂ ಸಿನಿಮಾ 'ಮಿನ್ನಲ್ ಮುರಲಿ' ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.

ಎರಡು ಹಿಂದಿ ಸಿನಿಮಾ ಬಿಡುಗಡೆ
ಹಿಂದಿಯ ಎರಡು ಸಿನಿಮಾಗಳಷ್ಟೆ ಈ ವಾರ ನೇರವಾಗಿ ಒಟಿಟಿಗೆ ಬಿಡುಗಡೆ ಆಗಿವೆ. ಅಮೆಜಾನ್ ಪ್ರೈಂನಲ್ಲಿ 'ಅನ್‌ಪಾಸ್ಡ್' ಸಿನಿಮಾ ಬಿಡುಗಡೆ ಆಗಿದ್ದರೆ, ಜೀ 5 ನಲ್ಲಿ '36 ಫಾರಂಹೌಸ್' ಸಿನಿಮಾ ಬಿಡುಗಡೆ ಆಗಿದೆ. 'ಅನ್‌ಪಾಸ್ಡ್' ಅಂತಾಲಜಿ ಮಾದರಿಯ ಸಿನಿಮಾ ಆಗಿದ್ದು, ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿವೆ. '36 ಫಾರಂ ಹೌಸ್' ಸಿನಿಮಾ ಹಾಸ್ಯ ಹಾಗೂ ಮರ್ಡರ್ ಮಿಸ್ಟರಿ ಕತೆಯನ್ನು ಒಳಗೊಂಡಿದೆ. 300 ಎಕರೆಯ ಫಾರಂ ಹೌಸ್‌ನ ಒಡೆತನಕ್ಕಾಗಿ ನಡೆಯುವ ಕೊಲೆ, ಫಾರಂ ಹೌಸ್ ಒಳಗೆ ನಡೆಯುವ ಹಾಸ್ಯ ಈ ಸಿನಿಮಾದ ಪ್ರಧಾನ ಅಂಶ.

ಇಂಗ್ಲಿಷ್ ಸಿನಿಮಾ ಮತ್ತು ವೆಬ್ ಸರಣಿ
ಈ ವಾರಾಂತ್ಯ ಕೆಲವು ಒಳ್ಳೆಯ ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಎರಡನೇ ವಿಶ್ವಯುದ್ಧ ನಡೆಯದಂತೆ ತಡೆಯಲು ಯತ್ನಿಸಿದ ಕತೆಯುಳ್ಳ 'ಮ್ಯೂನಿಚ್: ದಿ ಎಡ್ಜ್ ಆಫ್ ವಾರ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಅಡಾಲ್ಫ್ ಹಿಟ್ಲರ್ ಹಾಗೂ ಬ್ರಿಟನ್ ಪ್ರಧಾನಿ ಚೇಂಬರ್ಲಿನ್ ನಡುವೆ ನಡೆವ ಮ್ಯೂನಿಚ್ ಒಪ್ಪಂದದ ಬಗ್ಗೆ ಸಿನಿಮಾ ಇದೆ. ನೆಟ್‌ಫ್ಲಿಕ್ಸ್‌ನಲ್ಲಿಯೇ ಜನಪ್ರಿಯ ವೆಬ್ ಸರಣಿ 'ಓಜಾರ್ಕ್' ನಾಲ್ಕನೇ ಸೀಸನ್ ಬಿಡುಗಡೆ ಆಗಿದೆ. ಮಾದಕ ವಸ್ತು ತಯಾರಿಕೆ ಮಾರಾಟದ ಕತೆ ಮತ್ತು ಗುಂಪುಗಳ ನಡುವೆ ನಡೆವ ಕಿತ್ತಾಟಗಳ ಕತೆಯನ್ನು ಇದು ಒಳಗೊಂಡಿದೆ.

ಇತರೆ ಭಾಷೆಯ ಸಿನಿಮಾ, ವೆಬ್ ಸರಣಿ
ನೆಟ್‌ಫ್ಲಿಕ್ಸ್‌ನಲ್ಲಿ ಜನವರಿ 21 ಕ್ಕೆ 'ಸಮ್ಮರ್ ಹೀಟ್' ಹೆಸರಿನ ಬ್ರೆಜಿಲಿಯನ್ ವೆಬ್ ಸರಣಿ ಬಿಡುಗಡೆ ಆಗಿದೆ. ಕೆಲ ಯುವಕ-ಯುವತಿಯರು ಪ್ರಪಂಚದಿಂದ ದೂರಾಗಿ ದ್ವೀಪವೊಂದರ ಸುಂದರ ಹೋಟೆಲ್‌ನಲ್ಲಿ ಒಟ್ಟಿಗೆ ಇರುವ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಟರ್ಕಿಶ್ ಸಿನಿಮಾ 'ಮೈ ಫಾದರ್ಸ್ ವೈಯೊಲಿನ್' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಅಪ್ಪ-ಮಗಳ ಸಂಬಂಧ ಹಾಗೂ ಒಂದು ವೈಯಲಿನ್ ಬಗೆಗಿನ ಸಿನಿಮಾ ಇದಾಗಿದೆ.


Click it and Unblock the Notifications











