ಸಂಕ್ರಾಂತಿಗೆ ಒಟಿಟಿಯಲ್ಲಿಯೂ ಸಾಲು-ಸಾಲು ಸಿನಿಮಾಗಳು! ಯಾವುವವು?
ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಹಬ್ಬದ ಕಳೆ ಜೋರಾಗಿದೆ. ಕನ್ನಡದ ದೊಡ್ಡ ನಟರ ಸಿನಿಮಾಗಳು ಈ ಹಬ್ಬಕ್ಕೆ ಬಿಡುಗಡೆ ಆಗಿಲ್ಲವಾದರೂ ಪರಭಾಷೆಯ ದೊಡ್ಡ ಸೂಪರ್ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿವೆ.
ನಟ ಚಿರಂಜೀವಿಯ 'ವಾಲ್ತೇರು ವೀರಯ್ಯ', ನಂದಮೂರಿ ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ', ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿರುವ 'ವಾರಿಸು', ಮತ್ತೊಬ್ಬ ತಮಿಳು ಸೂಪರ್ ಸ್ಟಾರ್ ಅಜಿತ್ ನಟಿಸಿರುವ 'ತುನಿವು' ಸಿನಿಮಾಗಳು ತೆರೆಗೆ ಬಂದಿವೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಸಂಕ್ರಾಂತಿ ಹಬ್ಬ ಜೋರಿದೆ.
ಒಟಿಟಿಗಳು ಸಹ ಸಂಕ್ರಾಂತಿ ಹಬ್ಬವನ್ನು ಜೋರಾಗಿ ಆಚರಿಸುವಲ್ಲಿ ಹಿಂದೆ ಬಿದ್ದಿಲ್ಲ. ಒಟಿಟಿಯಲ್ಲಿ ಸಹ ಸಾಲು-ಸಾಲಾಗಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸಂಕ್ರಾಂತಿ ವಿಶೇಷವಾಗಿ ವಾಡಿಕೆಗಿಂತಲೂ ತುಸು ಹೆಚ್ಚಾಗಿಯೇ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಕಾಣುತ್ತಿವೆ. ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಮುಖ್ಯ ಸಿನಿಮಾಗಳ ಪಟ್ಟಿ ಇಲ್ಲಿದೆ.

ಒಟಿಟಿಗೆ ಬಂತು 'ಹೆಡ್ ಬುಷ್'
ಡಾಲಿ ಧನಂಜಯ್ ಹಾಗೂ ಲೂಸ್ ಮಾದ ನಟಿಸಿರುವ 'ಹೆಡ್ ಬುಷ್' ಸಿನಿಮಾ ಇದೇ ವಾರ ಜೀ 5 ನಲ್ಲಿ ತೆರೆಗೆ ಬರಲಿದೆ. ಸಿನಿಮಾವು ಮಾಜಿ ಡಾನ್ ಜಯರಾಜ್ ಜೀವನ ಆಧರಿಸಿದ ಕತೆಯನ್ನು ಹೊಂದಿದೆ. ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ಅಗ್ನಿ ಶ್ರೀಧರ್ ಒದಗಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶೂನ್ಯ. ಚಿತ್ರಮಂದಿರಗಳಲ್ಲಿ ಸಾಧಾರಣ ಯಶಸ್ಸನ್ನು ಈ ಸಿನಿಮಾ ಗಳಿಸಿತ್ತು. ಸಿನಿಮಾದ ಸುತ್ತ ಕೆಲ ವಿವಾದಗಳು ಸಹ ಸೃಷ್ಟಿಯಾಗಿದ್ದವು. ಸಿನಿಮಾದಲ್ಲಿ ಶ್ರುತಿ ಹಾಸನ್, ರವಿಚಂದ್ರನ್ ಹಾಗೂ ಇತರರು ನಟಿಸಿದ್ದಾರೆ.

ತಮಿಳಿನ ಎರಡು ಮುಖ್ಯ ಸಿನಿಮಾಗಳು
ತಮಿಳಿನ ಸ್ಟಾರ್ ನಟ ವಿಶಾಲ್ ನಟಿಸಿರುವ ಇತ್ತೀಚೆಗಿನ ಸಿನಿಮಾ 'ಲಾಠಿ' ಸಿನಿಮಾ ಸನ್ ನೆಕ್ಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ವಿಶಾಲ್ ಪೊಲೀಸ್ ಕಾನ್‌ಸ್ಟೇಬರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸನ್ನು ಸಿನಿಮಾ ಗಳಿಸಿತ್ತು. ತಮಿಳಿನ ಮತ್ತೊಬ್ಬ ಜನಪ್ರಿಯ ನಟ ಜೀವ ನಟಿಸಿರುವ 'ವರಲಾರು ಮುಕ್ಕಿಯಂ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಕಶ್ಮೀರಾ ನಾಯಕಿ.

ಮಲಯಾಳಂನ ಎರಡು ಸಿನಿಮಾಗಳು
ಒಟಿಟಿ ಕಿಂಗ್ ಎಂದೇ ಕರೆಸಿಕೊಳ್ಳುತ್ತಿದ್ದ ಮಲಯಾಳಂ ಚಿತ್ರರಂಗದ ಎರಡು ಸಿನಿಮಾಗಳು ಈ ವಾರ ಒಟಿಟಿಗೆ ಬರುತ್ತಿವೆ. ಗೆಳೆಯರ ಗುಂಪಿನ ಕುರಿತಾದ ಸಿನಿಮಾ 'ತಟ್ಟಸೇರಿ ಕೂಟ್ಟಂ' ಹೆಸರಿನ ಸಿನಿಮಾ ಜೀ5 ನಲ್ಲಿ ಬಿಡುಗಡೆ ಆಗುತ್ತಿದೆ. ಹಾಸ್ಯಪ್ರಧಾನ ಸಿನಿಮಾ ಇದಾಗಿದೆ. ಇದೇ ವಾರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 'ಮುಕುಂದನ್ ಉನ್ನಿ ಅಸೋಸಿಯೇಟ್ಸ್' ಹೆಸರಿನ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾವು ವಕೀಲನೊಬ್ಬನ ಕತೆಯನ್ನು ಒಳಗೊಂಡಿದ್ದು, ಕ್ರೈ ಥ್ರಿಲ್ಲರ್ ಕತೆಯನ್ನು ಹೊಂದಿದೆ.

ಹಿಂದಿಯ ಯಾವ ಸಿನಿಮಾ ಒಟಿಟಿಗೆ
ಹಿಂದಿ ಭಾಷೆಯ ಎರಡು ಮುಖ್ಯ ಸಿನಿಮಾಗಳು ಈ ವಾರ ಬಿಡುಗಡೆ ಆಗಲಿವೆ. ಅಜಯ್ ದೇವಗನ್ ನಟನೆಯ 'ದೃಶ್ಯ 2' ಸಿನಿಮಾ ಈ ವಾರ ಅಮೆಜಾನ್ ಪ್ರೈಂ ಒಟಿಟಿಗೆ ಬಂದಿದೆ. ಮಲಯಾಳಂನ 'ದೃಶ್ಯಂ 2' ಸಿನಿಮಾದ ರೀಮೇಕ್ ಈ ಸಿನಿಮಾ ಆಗಿದೆ. ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗಿರುವ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆಗೆ ಟಬು, ಶ್ರೆಯಾ ಶಿರಿನ್ ಇನ್ನಿತರರು ನಟಿಸಿದ್ದಾರೆ. ಇದರ ಜೊತೆಗೆ 'ಟ್ರೈಯಲ್ ಬೈ ಫೈಯರ್' ಹೆಸರಿನ ವೆಬ್ ಸರಣಿಯೊಂದು ಒಟಿಟಿಗೆ ಬರುತ್ತಿದೆ.


Click it and Unblock the Notifications











