Mufasa: The Lion King OTT; ಮಕ್ಕಳಿಗೆ ಮನೆಯಲ್ಲೇ ತೋರ್ಸಿ 'ಮುಫಾಸಾ' ಕಥೆ
ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮುಫಾಸಾ: ದಿ ಲಯನ್ ಕಿಂಗ್' ಸಿನಿಮಾ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬರಿ ಜೆಂಕಿನ್ಸ್ ನಿರ್ದೇಶನದ ಸಿನಿಮಾ ವಿಶ್ವದಾದ್ಯಂತ ಸಾವಿರಾರು ಕೋಟಿ ಕೊಳ್ಳೆ ಹೊಡೆದು ದಾಖಲೆ ಬರೆದಿತ್ತು. ಮಕ್ಕಳು ಸಿನಿಮಾ ನೋಡಲು ಮುಗಿಬಿದ್ದಿದ್ದು ವಿಶೇಷ. ಇದೀಗ ಈ ಆನಿಮೇಟೆಡ್ ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.
2019ರಲ್ಲಿ ಬಂದಿದ್ದ 'ದಿ ಲಯನ್ ಕಿಂಗ್' ಚಿತ್ರದ ಪ್ರೀಕ್ವೆಲ್ ಆಗಿ 'ಮುಫಾಸಾ: ದಿ ಲಯನ್ ಕಿಂಗ್' ಸಿನಿಮಾ ತೆರೆಗೆ ಬಂದಿತ್ತು. ಅಷ್ಟಕ್ಕೂ 'ಮುಫಾಸಾ' ಹಾಗೂ ಸ್ಕಾರ್ ನಡುವಿನ ಸಂಘರ್ಷಕ್ಕೆ ಕಾರಣ ಏನು? ಮಿಲೇಲೆಗೆ ರಾಜನಾಗುವ ಮೊದಲು ಮುಫಾಸಾನ ಹಿನ್ನೆಲೆ ಏನು? ಎನ್ನುವುದನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ತ್ರಿಡಿಯಲ್ಲಿ ಸಿನಿಮಾ ಮತ್ತಷ್ಟು ಅದ್ಭುತ ಅನುಭವ ನೀಡುತ್ತದೆ.

ತೆಲುಗಿನಲ್ಲಿ ಮಹೇಶ್ ಬಾಬು ರೀತಿಯ ಸ್ಟಾರ್ ನಟರು ಚಿತ್ರದ ಪಾತ್ರಗಳಿಗೆ ಧ್ವನಿಯಾಗಿದ್ದರು. ಭಾರತದಲ್ಲೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಈ ಸುದ್ದಿ ಕೇಳಿ ಸಿನಿರಸಿಕರು ಖುಷಿಯಾಗಿದ್ದಾರೆ.
ಫೆಬ್ರವರಿ 18 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 'ಮುಫಾಸಾ: ದಿ ಲಯನ್ ಕಿಂಗ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಆದರೆ ಅಂದಿನಿಂದ ಸಿನಿಮಾ ನೋಡಲು ಹಣ ಪಾವತಿಸಬೇಕಾಗುತ್ತದೆ. ಏಪ್ರಿಲ್ 1 ರಿಂದ ಹಾಟ್‌ಸ್ಟರ್ ಚಂದಾದಾರರು ಉಚಿತವಾಗಿ ಸಿನಿಮಾ ವೀಕ್ಷಿಸಬಹುದು. ಮಕ್ಕಳಿಗೆ ಮಫಾಸಾ ಕಥೆ ಇಷ್ಟವಾಗುತ್ತದೆ. ತಪ್ಪದೇ ಸಿನಿಮಾ ತೋರಿಸಿ.
ಇದಕ್ಕೂ ಮುನ್ನ ಬಂದಿದ್ದ 'ದಿ ಲಯನ್ ಕಿಂಗ್' ಸಿನಿಮಾ ನೋಡಿದವರಿಗೆ ಸಿಂಬಾ ಪಾತ್ರದ ಬಗ್ಗೆ ಗೊತ್ತಿರುತ್ತದೆ. ಇಡೀ ಕಥೆ ಆ ಪಾತ್ರದ ಸುತ್ತು ಸುತ್ತುತ್ತದೆ. ಈ ಕಥೆಯಿಂದ ಪ್ರೇರಣೆಗೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಸಿಂಬಾನ ತಂದೆ ಮುಫಾಸಾ. ಅವನ ಸಹೋದರ ಸ್ಕಾರ್. ಅಧಿಕಾರಕ್ಕಾಗಿ ಆತ ಮಾಡುವ ಕುತಂತ್ರದಿಂದ ಸಿಂಬಾ ರಾಜ್ಯ ಬಿಡುವಂತಾಗುತ್ತದೆ. ಬಳಿಕ ಮತ್ತೆ ವಾಪಸ್ ಬರುವ ಸಿಂಬಾ ಸ್ಕಾರ್‌ನನ್ನು ಸಾಯಿಸುತ್ತಾನೆ. ಆದರೆ ಮುಫಾಸಾ ಹಾಗೂ ಸ್ಕಾರ್ ಹಿನ್ನೆಲೆ ಏನು ಇನ್ನುವ ಕಥೆ 'ಮುಫಾಸಾ: ದಿ ಲಯನ್ ಕಿಂಗ್' ಚಿತ್ರದಲ್ಲಿದೆ.
ಸಿಂಬಾನ ಮಗಳು ಕಿಯಾರಾ, ರಫಿಕಿಗೆ ತನ್ನ ಅಜ್ಜ ಮುಫಾಸಾ ಕಥೆ ಹೇಳುವಂತೆ ಸಿನಿಮಾ ಶುರುವಾಗುತ್ತದೆ. ಮೂರನೇ ವ್ಯಕ್ತಿ ಕಥೆ ನಿರೂಪಿಸು ತಂತ್ರವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಚಿಕ್ಕಂದಿನಿಂದ ಮುಫಾಸಾ ತಾಯಿ ಮಿಲೆಲೆ ಎನ್ನುವ ಸ್ವರ್ಗದಂತಹ ರಾಜ್ಯದ ಬಗ್ಗೆ ಕಥೆಗಳನ್ನು ಹೇಳುತ್ತಿರುತ್ತಾಳೆ. ಅದನ್ನು ಕೇಳುತ್ತಾ ಬೆಳೆಯುತ್ತಿದ್ದ ಆತ ಒಮ್ಮೆ ಪ್ರವಾಹದಲ್ಲಿ ಕೊಚ್ಚಿಕೊಂಡು ಬೇರೆ ರಾಜ್ಯಕ್ಕೆ ಹೋಗಿಬಿಡುತ್ತಾನೆ. ಅಲ್ಲಿ ಟಾಕಾ, ಮುಫಾಸಾಗೆ ಜೊತೆಯಾಗುತ್ತಾನೆ. ಒಮ್ಮೆ ಮುಫಾಸಾ ಬಿಳಿ ಸಿಂಹಗಳ ರಾಜ್ಯದ ಯುವರಾಜನ್ನು ಕೊಂದು ಅವರ ವಿರೋಧ ಕಟ್ಟಿಕೊಳ್ಳುತ್ತಾನೆ.
ಆ ಬಿಳಿ ಸಿಂಹಗಳ ದಾಳಿಗೆ ಹೆದರಿ ಮುಫಾಸಾ ಹಾಗೂ ಟಾಕಾ ಹೊರಡುತ್ತಾರೆ. ತಾಯಿ ಹೇಳುತ್ತಿದ್ದ ಮಿಲೆಲೆ ರಾಜ್ಯಕ್ಕೆ ಹೋಗಬೇಕು ಎನ್ನುವುದು ಮುಫಾಸಾ ಲೆಕ್ಕಾಚಾರ. ಈ ಹಾದಿಯಲ್ಲಿ ಶಾರಾಭಿ ಎಂಬ ಹೆಣ್ಣು ಸಿಂಹ ಜೊತೆಯಾಗುತ್ತದೆ. ಇದ್ದಕ್ಕಿದಂತೆ ಟಾಕಾ ಯಾಕೆ ಮುಫಾಸಾ ವಿರುದ್ಧ ತಿರುಗಿ ಬೀಳ್ತಾನೆ? ಮುಫಾಸಾ ಹೇಗೆ ಬಿಳಿಸಿಂಹಗಳ ನಾಯಕ ಕಿರೋಸ್‌ನನ್ನು ಕೊಲ್ಲುತ್ತಾನೆ? ಕೊನೆಗೆ ಹೇಗೆ ಒಂದು ಸಾಮಾಜ್ಯದ ರಾಜ ಆಗುತ್ತಾನೆ? ಎನ್ನುವುದು ಇನ್ನುಳಿದ ಕಥೆ.
'ಮುಫಾಸಾ: ದಿ ಲಯನ್ ಕಿಂಗ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ವರ್ಷಾಂತ್ಯದ ರಜೆಯಲ್ಲಿ ಮಕ್ಕಳನ್ನು ಕರೆದುಕೊಂಡು ಸಾಕಷ್ಟು ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಪರಿಣಾಮ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿತ್ತು. ಮುಖ್ಯವಾಗಿ ತ್ರಿಡಿ ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಓಟಿಟಿಯಲ್ಲೇ ಸಿನಿಮಾ ನೋಡಬಹುದು. ಇಂಗ್ಲೀಷ್ ಜೊತೆಗೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











