ರಶ್ಮಿಕಾಗಾಗಿ ಕನ್ನಡದಲ್ಲಿ ಕವಿತೆ ಹೇಳಿದ ನಂದಮೂರಿ ಬಾಲಕೃಷ್ಣ
ತೆಲುಗು ಹಾಗೂ ಕನ್ನಡ ಚಿತ್ರರಂಗಗಳ ಸ್ಟಾರ್‌ಗಳು ಪರಸ್ಪರ ಬಹಳ ಆತ್ಮೀಯ ಬಂಧ ಹೊಂದಿದ್ದಾರೆ. ಕನ್ನಡದ ನಟರು ತೆಲುಗು ಸಿನಿಮಾಗಳಲ್ಲಿ ತೆಲುಗು ನಟರು ಕನ್ನಡ ಸಿನಿಮಾಗಳಲ್ಲಿ ನಟಿಸುವುದು, ಪರಸ್ಪರರ ಸಿನಿಮಾಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸರ್ವೇ ಸಾಮಾನ್ಯ.
ಕನ್ನಡದ ಬಹುತೇಕ ಸ್ಟಾರ್ ನಟರು ಆಂಧ್ರಕ್ಕೆ ಹೋದಾಗ ಕನ್ನಡದಲ್ಲಿ ಮಾತು ಆರಂಭಿಸಿ ನಂತರ ತೆಲುಗು ಭಾಷೆಗೆ ಶಿಫ್ಟ್ ಆಗುತ್ತಾರೆ. ತೆಲುಗು ನಟರೂ ಸಹ ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿ ತಮ್ಮ ಅಭಿಮಾನ ಮೆರೆಯುತ್ತಾರೆ. ಇದು ಮೊದಲಿನಿಂದಲೂ ನಡೆದು ಬಂದಿದೆ.
ಕೆಲವು ದಿನಗಳ ಹಿಂದೆ ತಮ್ಮ 'ಆರ್‌ಆರ್‌ಆರ್' ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ನಂದಿದ್ದ ನಟ ಜೂ ಎನ್‌ಟಿಆರ್ ಸಂದರ್ಶನದಲ್ಲಿ ಕನ್ನಡದಲ್ಲಿಯೇ ಮಾತನಾಡಿ ಗಮನ ಸೆಳೆದರು. ಈಗ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಕನ್ನಡ ಮಾತನಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

'ಅನ್‌ಸ್ಟಾಪೆಬಲ್ ಬಾಲಯ್ಯ'
ನಂದಮೂರಿ ಬಾಲಕೃಷ್ಣ ಇದೇ ಮೊದಲ ಬಾರಿಗೆ ಆಹಾ ಒಟಿಟಿಗೆ ಟಾಕ್ ಶೋ ಒಂದನ್ನು ನಿರೂಪಣೆ ಮಾಡುತ್ತಿದ್ದಾರೆ. ಶೋನ ಹೆಸರು 'ಅನ್‌ಸ್ಟಾಪೆಬಲ್ ಬಾಲಯ್ಯ'. ಈ ಶೋಗೆ ತೆಲುಗು ಚಿತ್ರರಂಗದ ಗಣ್ಯರು ಆಗಮಿಸಿ ಬಾಲಕೃಷ್ಣ ಜೊತೆ ಮಾತುಕತೆ ನಡೆಸಿ ಆಟಗಳನ್ನು ಆಡಿ ತೆರಳುತ್ತಾರೆ. ಈ ಬಾರಿ ಬಾಲಯ್ಯ ಟಾಕ್‌ಶೋಗೆ ಕನ್ನಡತಿ ರಶ್ಮಿಕಾ ಆಗಮಿಸಿದ್ದರು. ಈ ಸಮಯ ರಶ್ಮಿಕಾಗಾಗಿ ಬಾಲಯ್ಯ ಕನ್ನಡದಲ್ಲಿ ಕವನ ಹೇಳಿದ್ದು ವಿಶೇಷವಾಗಿತ್ತು.

ಕವನ ಹೇಳಿದ ಬಾಲಕೃಷ್ಣ
''ಚೆಲುವಲ್ಲಿ ಬೇಲೂರ ಬಾಲೆ, ಮನಸಲ್ಲಿ ಮೈಸೂರು ಮಲ್ಲೆ, ನುಡಿಯಲ್ಲಿ ಕಸ್ತೂರಿ, ನಡೆಯಲ್ಲಿ ಕಾವೇರಿ, ಸೊಬಗಲ್ಲಿ ಮಡಿಕೇರಿ, ನಾಟ್ಯದಲ್ಲಿ ಮಯೂರಿ, ಕೊಡಗಿನ ಬೆಡಗಿ, ಕರ್ನಾಟಕದ ಹುಡುಗಿ'' ಎಂದು ರಶ್ಮಿಕಾ ಮಂದಣ್ಣಗೆ ಕವನ ಹೇಳಿದ್ದಾರೆ ಬಾಲಕೃಷ್ಣ. ಹಿರಿಯ ನಟನ ಕವನ ಕೇಳಿ ನಾಚಿ ನೀರಾಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಬಾಲಕೃಷ್ಣ ವಿಡಿಯೋ ಬಳಿಸಿ ಟ್ರೋಲ್ ಮಾಡಲಾಗಿತ್ತು
ಈ ಹಿಂದೆ ರಶ್ಮಿಕಾ, ತಮಗೆ ಕನ್ನಡ ಸರಿಯಾಗಿ ಬರುವುದಿಲ್ಲವೆಂದು ಮಾಧ್ಯಮಗಳ ಬಳಿ ಹೇಳಿದ್ದಾಗ ಜೂ.ಎನ್‌ಟಿಆರ್, ಬಾಲಕೃಷ್ಣ, ತಮಿಳಿನ ವಿಶಾಲ್, ಮೆಗಾಸ್ಟಾರ್ ಚಿರಂಜೀವಿ, ನಟ ಅಮಿತಾಬ್ ಬಚ್ಚನ್ ಅವರುಗಳು ಕರ್ನಾಟಕಕ್ಕೆ ಬಂದಾಗ ಕನ್ನಡ ಮಾತನಾಡುತ್ತಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವರನ್ನು ನೋಡಿ ರಶ್ಮಿಕಾ ಕಲಿಯಬೇಕೆಂದು ಹೇಳಿ ಟ್ರೋಲ್ ಮಾಡಲಾಗಿತ್ತು. ಈಗ ಬಾಲಕೃಷ್ಣ ತೆಲುಗಿನ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿ ರಶ್ಮಿಕಾಗೆ ನೇರ ಉದಾಹರಣೆಯನ್ನು ನೀಡಿದ್ದಾರೆ.

ರಾಜ್ ಕುಟುಂಬದೊಂದಿಗೆ ಆಪ್ತ ನಂಟು
ಸೀನಿಯರ್ ಎನ್‌ಟಿಆರ್ ಪುತ್ರ ನಂದಮೂರಿ ಬಾಲಕೃಷ್ಣ ಕನ್ನಡ ಚಿತ್ರರಂಗದ ಜೊತೆಗೆ ಆಪ್ತ ನಂಟು ಹೊಂದಿದ್ದಾರೆ. ಅದರಲ್ಲಿಯೂ ಡಾ ರಾಜ್‌ಕುಮಾರ್ ಕುಟುಂಬದವರು ಬಾಲಕೃಷ್ಣಗೆ ಬಹು ಆಪ್ತ. ಬಾಲಕೃಷ್ಣ ನಟಿಸಿದ್ದ ಗೌತಮಿ ಪುತ್ರ ಶಾತಕರ್ಣಿ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ಹಿಂದೆ ಹಲವು ಬಾರಿ ಕರ್ನಾಟಕಕ್ಕೆ ಆಗಮಿಸಿರುವ ಬಾಲಕೃಷ್ಣ, ಕರ್ನಾಟಕದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕನ್ನಡದಲ್ಲಿಯೇ ಮಾತು ಆರಂಭಿಸಿ ಭಾಷೆಗೆ ತಮ್ಮ ಗೌರವ ಸೂಚಿಸುತ್ತಾರೆ.


Click it and Unblock the Notifications











