Hit- 3 Ott: ಕ್ರೈಂ ಥ್ರಿಲ್ಲರ್ 'ಹಿಟ್- 3' ಓಟಿಟಿ ರಿಲೀಸ್; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್
ಮೇ-1ಕ್ಕೆ ತಮಿಳಿನ ರೆಟ್ರೋ ಹಾಗೂ ತೆಲುಗಿನ 'ಹಿಟ್- 3' ಸಿನಿಮಾಗಳು ತೆರೆಗೆ ಬಂದಿದ್ದವು. ಎರಡೂ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ನಾನಿ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ 'ಹಿಟ್- 3' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ.
ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 101 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು. 'ಹಿಟ್' ಸರಣಿಯ ಹಿಂದಿನ ಎರಡು ಚಿತ್ರಗಳು ಗೆದ್ದಿದ್ದವು. ಆ ಎರಡೂ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದ ನಾನಿ ಮೂರನೇ ಚಿತ್ರದಲ್ಲಿ ಹೀರೊ ಆಗಿ ಅಬ್ಬರಿಸಿದ್ದಾರೆ. ಶೈಲೇಶ್ ಕೋಲನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಯಶಸ್ವಿಯಾಗಿ 3 ವಾರ ಪೂರೈಸಿ ಸಿನಿಮಾ 4ನೇ ವಾರ ಪ್ರದರ್ಶನ ಕಾಣುತ್ತಿದೆ. ಐಪಿಎಲ್ ಟೂರ್ನಿ ಆರ್ಭಟ ಚಿತ್ರಕ್ಕೆ ಕೊಂಚ ಹಿನ್ನಡೆ ತಂದಿದ್ದು ಸುಳ್ಳಲ್ಲ. ಅತಿಯಾದ ವೈಲೆನ್ಸ್ ಮಕ್ಕಳನ್ನು ಚಿತ್ರಮಂದಿರದಿಂದ ದೂರ ಉಳಿಯುವಂತೆ ಮಾಡಿತ್ತು. ಸ್ವತಃ ನಾನಿ 'ಹಿಟ್ -3' ಸಿನಿಮಾವನ್ನು ಮಕ್ಕಳಿಗೆ ತೋರಿಸಿಬೇಡಿ ಎಂದಿದ್ದರು. 'ಹಿಟ್' ಸರಣಿಯನ್ನು ಮುಂದುವರೆಸುತ್ತಿದ್ದು 4ನೇ ಚಿತ್ರದಲ್ಲಿ ತಮಿಳು ನಟ ಕಾರ್ತಿ ಹೀರೊ ಆಗಿ ನಟಿಸಲಿದ್ದಾರೆ.
ಕ್ಯಾಪ್ಚರ್ ಟಾರ್ಚರ್ ಕಿಲ್ಲಿಂಗ್(CTK) ಎಂಬ ಸೈಕೋ ಕಿಲ್ಲರ್‌ಗಳ ಗ್ಯಾಂಗ್ ಅನ್ನು ಮಟ್ಟಹಾಕಲು ಎಸ್‌ಪಿ ಅರ್ಜುನ್ ಸರ್ಕಾರ್ IPS (ನಾನಿ) ನಡೆಸುವ ಹತ್ಯಾಕಾಂಡ 'ಹಿಟ್- 3' ಸಿನಿಮಾ ಕಥೆ. ಜಮ್ಮು ಕಾಶ್ಮೀರದಲ್ಲಿ HIT ತಂಡ ಕಾರ್ಯಾಚರಣೆ ನಡೆಸುತ್ತಿರುವ ಸಮಯದಲ್ಲೇ ಒಂದು ಭಯಾನಕ ಹತ್ಯೆ ಪ್ರಕರಣದ ಬೆಳಕಿಗೆ ಬರುತ್ತದೆ. ಅದರ ತನಿಖೆ ಆರಂಭಿಸಿದಾಗ ಥೇಟ್ ಅದೇ ರೀತಿ ದೇಶ್ಯಾದ್ಯಂತ 13 ಹತ್ಯೆ ನಡೆದಿರುವುದು ಗೊತ್ತಾಗುತ್ತದೆ. ಇದರ ಹಿಂದೆ ದೊಡ್ಡ ನೆಟ್‌ವರ್ಕ್ ಇರುವ ಬಗ್ಗೆ ಸುಳಿವು ಸಿಗುತ್ತದೆ. ಬಳಿಕ ವಿಶಾಖಪಟ್ಟಣ್ಣಕ್ಕೆ ಅರ್ಜುನ್ ಬರುವಂತಾಗುತ್ತದೆ. ಮುಂದೆ ಆ ಪ್ರಕರಣವನ್ನು ಹೇಗೆ ಭೇದಿಸುತ್ತಾನೆ. ತಪ್ಪಿತಸ್ಥರಿಗೆ ಹೇಗೆ ಶಿಕ್ಷೆ ಕೊಡುತ್ತಾನೆ ಎನ್ನುವುದು ಇನ್ನುಳಿದ ಕಥೆ.
ಅರ್ಜುನ್ ಸರ್ಕಾರ್ ನಡೆಸುವ ಅಪರಾಧದೊಂದಿಗೆ 'ಹಿಟ್- 3' ಸಿನಿಮಾ ಕಥೆ ಶುರುವಾಗುತ್ತದೆ. ಬಳಿಕ ನಿಧಾನವಾಗಿ ಕಥೆ ತೆರೆದುಕೊಳ್ಳುತ್ತದೆ. ಆತನ ಆ ನಡೆಗೆ ಕಾರಣ ಏನು? ಸೈಕ್ ಗ್ಯಾಂಗ್ ಹಿನ್ನೆಲೆ ಏನು? ಹೀಗೆ ನಿಧಾನವಾಗಿ ಸಿನಿಮಾ ನೋಡುಗರನ್ನು ಆವರಿಸಿಕೊಳ್ಳುತ್ತದೆ. ಅತಿಯಾದ ಕ್ರೌರ್ಯವನ್ನು ಜೀರ್ಣಿಸಿಕೊಳ್ಳುವುದು ಕೊಂಚ ಕಷ್ಟವಾಗುತ್ತದೆ. ಮೇ 29ಕ್ಕೆ 'ಹಿಟ್- 3' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ.
'KGF' ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಗೆ ಬಳಿಕ ದೊಡ್ಡ ಅವಕಾಶಗಳು ಸಿಕ್ಕಿರಲಿಲ್ಲ. ತಮಿಳಿನಲ್ಲಿ 'ಕೋಬ್ರಾ' ಎಂಬ ಚಿತ್ರದಲ್ಲಿ ವಿಕ್ರಮ್ ಜೊತೆ ಮಿಂಚಿದ್ದರು. ಬಳಿಕ 'ಹಿಟ್- 3' ಅವಕಾಶ ಸಿಕ್ಕಿತ್ತು. ಚಿತ್ರದಲ್ಲಿ ಆಕೆಯ ಪಾತ್ರಕ್ಕೂ ಮಹತ್ವ ಇದೆ. ಕಥೆಗೆ ತಿರುವು ಕೊಡುವುದೇ ಶ್ರೀನಿಧಿಯವರ ASP ಮೃದುಲ IPS ಪಾತ್ರ.
ವಿಶ್ವದಾದ್ಯಂತ 'ಹಿಟ್- 3' ಸಿನಿಮಾ 19 ದಿನಕ್ಕೆ 118 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿದೆ. ಕೆಲವರು ಓಟಿಟಿ ಸ್ಟ್ರೀಮಿಂಗ್ ಆಗುವುದಕ್ಕೆ ಕಾಯುತ್ತಿದ್ದಾರೆ. ಮುಂದಿನ ವಾರವೇ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.


Click it and Unblock the Notifications











