ಪುನೀತ್ ರಾಜ್‌ಕುಮಾರ್ ಮೊಬೈಲ್ ರಿಂಗ್‌ಟೋನ್ ಯಾವುದಾಗಿತ್ತು ಗೊತ್ತೆ?
ಪುನೀತ್ ರಾಜ್‌ಕುಮಾರ್ ಅದಮ್ಯ ಉತ್ಸಾಹ, ಕನಸುಗಳನ್ನು ಹೊಂದಿದ್ದ ವ್ಯಕ್ತಿ. ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿ, ಪ್ರವಾಸ, ಆಹಾರ ಎಲ್ಲದರ ಬಗ್ಗೆಯೂ ಆಸಕ್ತಿ, ಪ್ರೀತಿಯುಳ್ಳವರಾಗಿದ್ದರು ಪುನೀತ್ ರಾಜ್‌ಕುಮಾರ್.
ಪುನೀತ್ ಅವರ ದೊಡ್ಡಗುಣಗಳಲ್ಲಿ ಒಂದೊಂದರೆ ಗುರುತಿಸುವಿಕೆ. ಪ್ರತಿಭಾವಂತರನ್ನು ಯಾವುದೇ ಹಮ್ಮು-ಬಿಮ್ಮು, ನಕಲಿ ದೊಡ್ಡತನಗಳ ಸೋಗುಗಳಿಲ್ಲದೆ ಅಭಿನಂದಿಸುತ್ತಿದ್ದರು. ಒಳ್ಳೆಯದು ಎಲ್ಲಿಯೇ ಇದ್ದರು, ಯಾವುದೇ ಆಗಿದ್ದರು ಅದನ್ನು ಮೆಚ್ಚುತ್ತಿದ್ದರು. ಪ್ರಶಂಸಿಸುತ್ತಿದ್ದರು.
ಆಡಿಯೋ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದ ಪುನೀತ್ ರಾಜ್‌ಕುಮಾರ್ ಸ್ವತಃ ಸಂಗೀತ ಪ್ರೇಮಿಯಾಗಿದ್ದರು. ತಮ್ಮ ಮೊಬೈಲ್ ರಿಂಗ್‌ಟೋನ್ ಆಗಿ ಒಂದು ವಿಶೇಷ ಹಾಡನ್ನು ಅಥವಾ ಸಂಗೀತವನ್ನು ಪುನೀತ್ ಇಟ್ಟುಕೊಂಡಿದ್ದರು. ಅದಕ್ಕೆ ಕಾರಣವೂ ಇತ್ತು.

ಪುನೀತ್ ಮೊಬೈಲ್ ರಿಂಗ್‌ಟೋನ್ ಯಾವುದಾಗಿತ್ತು?
ಪುನೀತ್ ರಾಜ್‌ಕುಮಾರ್ ಕನ್ನಡದ, ಭಾರತ ಸಿನಿಮಾಗಳನ್ನು ಮಾತ್ರವಲ್ಲ ವಿಶ್ವ ಸಿನಿಮಾಗಳು, ವೆಬ್ ಸರಣಿಗಳ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಅವರಿಗೆ 2015ರ 'ನಾರ್ಕೋಸ್' ವೆಬ್ ಸರಣಿ ಬಹಳ ಇಷ್ಟವಾಗಿತ್ತು. ಹಾಗಾಗಿ 'ನಾರ್ಕೊಸ್' ವೆಬ್ ಸರಣಿಯ ಥೀಮ್ ಸಂಗೀತವನ್ನು ತಮ್ಮ ಮೊಬೈಲ್‌ನ ರಿಂಗ್ ಟೋನ್ ಆಗಿ ಇರಿಸಿಕೊಂಡಿದ್ದರು. ಈ ವಿಷಯವನ್ನು ಅವರ ಆಪ್ತರಲ್ಲೊಬ್ಬರಾಗಿದ್ದ ನಟ, ನಿರೂಪಕ ದಾನಿಶ್ ಸೇಠ್ ಹೇಳಿದ್ದಾರೆ.

ಕನ್ನಡದಲ್ಲಿ 'ನಾರ್ಕೊಸ್'ನಂಥಹಾ ವೆಬ್ ಸರಣಿ ನಿರ್ಮಿಸುವ ಆಸೆ
''ಪುನೀತ್ ಅವರಿಗೆ ವಿಶ್ವ ಸಿನಿಮಾ, ವೆಬ್ ಸರಣಿಗಳ ಬಗ್ಗೆ ಬಹಳ ಆಸಕ್ತಿ ಇತ್ತು, ನಮ್ಮಲ್ಲೂ 'ನಾರ್ಕೊಸ್' ರೀತಿಯ ವೆಬ್ ಸರಣಿ ಮಾಡಬೇಕು ಎಂದು ಹೇಳುತ್ತಿದ್ದರು. ನಮ್ಮಲ್ಲಿರುವ ತಂತ್ರಜ್ಞರು, ನಟರನ್ನೇ ಬಳಸಿ ಒಂದು ವಿಶ್ವಮಟ್ಟದ ವೆಬ್ ಸರಣಿಯನ್ನು ನೀಡಬೇಕು, ಅತ್ಯುತ್ತಮ ಗುಣಮಟ್ಟದ ಸಿನಿಮಾ ಮಾಡಬೇಕು ಎಂದು ಅವರು ಸದಾ ಹೇಳುತ್ತಿರುತ್ತಿದ್ದರು'' ಎಂದು ದಾನಿಶ್ ಸೇಠ್ ಹೇಳಿದ್ದಾರೆ.

ನನ್ನ ಕಚೇರಿ ಬಳಸಿಕೊಳ್ಳಿ ಎನ್ನುತ್ತಿದ್ದ ಪುನೀತ್
ಸದಾಶಿವನಗರದ ತಮ್ಮ ಕಚೇರಿಯನ್ನು ಎಲ್ಲರಿಗೂ ತೆರೆದಿಟ್ಟಿದ್ದರು ಪುನೀತ್ ರಾಜ್‌ಕುಮಾರ್, ತಮ್ಮ ಕಚೇರಿಗೆ ಎಲ್ಲರನ್ನೂ ಕರೆಯುತ್ತಿದ್ದರು. 'ನನ್ನ ಕಚೇರಿಯನ್ನು ಬಳಸಿಕೊಳ್ಳಿ, ಬನ್ನಿ ಇಲ್ಲಿ ಕೂತು ಬರೆಯಿರಿ, ಹೊಸದಾಗಿ ಯೋಚನೆ ಮಾಡಿ, ಸಿನಿಮಾ, ವೆಬ್ ಸರಣಿ ಬರೆಯಿರಿ, ನಾನು ನಿಮಗೆ ಬೆಂಬಲವಾಗಿ ಇರುತ್ತೇನೆ' ಎಂದು ಹುರಿದುಂಬಿಸುತ್ತಿದ್ದರು. ಏನನ್ನಾದರೂ ಹೊಸದಾಗಿ ಮಾಡುವುದು, ಗುಣಮಟ್ಟದ ಕಂಟೆಂಟ್ ನೀಡುವ ಬಗ್ಗೆ ಪುನೀತ್ ಅವರು ಸದಾ ನಿರತರಾಗಿರುತ್ತಿದ್ದರು'' ಎಂದು ದಾನಿಶ್ ಸೇಠ್ ಹೇಳಿದ್ದಾರೆ.

ಪಾಬ್ಲೊ ಎಸ್ಕೊಬಾರ್ ಜೀವನದ ಬಗೆಗಿನ ವೆಬ್ ಸರಣಿ
'ನಾರ್ಕೊಸ್' ವೆಬ್ ಸರಣಿ ಪಾಬ್ಲೊ ಎಸ್ಕೊಬಾರ್ ಎಂಬ ಡ್ರಗ್ ಲಾರ್ಡ್‌ನ ಜೀವನದ ಕತೆ ಹಾಗೂ ಕೊಲಂಬಿಯಾದಲ್ಲಿ ಡ್ರಗ್ಸ್ ದಂಧೆ ಪ್ರಾರಂಭವಾದ, ಹರಡಿದ ಹಾಗೂ ಬೆಳೆದ ರೀತಿಯನ್ನು ತೋರಿಸುವ ವೆಬ್ ಸರಣಿ ಆಗಿದೆ. ಜಗತ್ತಿನ ಅತ್ಯುತ್ತಮ ವೆಬ್ ಸರಣಿಗಳಲ್ಲಿ 'ನಾರ್ಕೊಸ್' ಸಹ ಒಂದು ಎನ್ನಲಾಗುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ವೆಬ್ ಸರಣಿ ವೀಕ್ಷಣೆಗೆ ಲಭ್ಯವಿದ್ದು, ಬ್ರೆಜಿಲಿಯನ್ ನಟ ವ್ಯಾಗ್ನರ್ ಮೋರ ಡ್ರಗ್ ದೊರೆ ಪಾಬ್ಲೊ ಎಸ್ಕೊಬಾರ್ ಪಾತ್ರದಲ್ಲಿ ನಟಿಸಿದ್ದಾರೆ. ನಿಜವಾದ ಘಟನೆಗಳ ಮೇಲೆ ಆಧರಿಸಿದ ಈ ವೆಬ್ ಸರಣಿಯನ್ನು ಕಾರ್ಲೊ ಬರ್ನೆರ್ಡ್, ಕಾರ್ಲೊ ಬ್ರಾಂಕೊಟಾ, ಡಗ್ ಮೀರೋ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











