ನೆಟ್‌ಫ್ಲಿಕ್ಸ್ ಸೆಟ್‌ಗೆ ಖನ್ನ ಹಾಕಿದ ಖದೀಮರು, ಕೋಟ್ಯಂತರ ಹಣ ನಷ್ಟ!
ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ ಕೆಲವು ವಿಶ್ವದರ್ಜೆಯ ಕಳ್ಳತನದ ವೆಬ್ ಸರಣಿಗಳನ್ನು ನೀಡಿದೆ. 'ಮನಿ ಹೈಸ್ಟ್', 'ಲುಪಿನ್' ಚಾಣಾಕ್ಷ ಕಳ್ಳತನಕ್ಕೆ ಸಂಬಂಧಿಸಿದ ಇನ್ನೂ ಹಲವು ವೆಬ್ ಸರಣಿಗಳು, ಸಿನಿಮಾಗಳನ್ನು ನೆಟ್‌ಫ್ಲಿಕ್ಸ್ ನಿರ್ಮಿಸಿದೆ. ಆದರೆ ಈಗ ಅದೇ ನೆಟ್‌ಫ್ಲಿಕ್ಸ್‌ನಲ್ಲಿ ಕಳ್ಳತನವಾಗಿದೆ.
ನೆಟ್‌ಫ್ಲಿಕ್ಸ್‌ನ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾದ 'ಲುಪಿನ್'ನಲ್ಲಿ ನಾಯಕ ಅಸ್ಸಾನೆ ಡಿಯೋಪ್ ಚಾಣಾಕ್ಷತನದಿಂದ ಕಳ್ಳತನ ಮಾಡುವುದರಲ್ಲಿ ನಿಸ್ಸೀಮ. ಆದರೆ ಈಗ ಅದೇ ವೆಬ್ ಸರಣಿಯ ಸೆಟ್‌ನಲ್ಲಿ ಕಳ್ಳತನ ನಡೆದಿದ್ದು ಸೆಟ್‌ನಲ್ಲಿರುವ ಹಲವು ಬೆಲೆಬಾಳುವ ವಸ್ತುಗಳನ್ನು ಕಳ್ಳತರು ಹೊತ್ತೊಯ್ದಿದ್ದಾರೆ.
'ಲುಪಿನ್' ಮಾತ್ರವೇ ಅಲ್ಲ ಗೋಲ್ಡನ್ ಗ್ಲೋಬ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ವಿಜೇತ ವೆಬ್ ಸರಣಿ 'ದಿ ಕ್ರೌನ್' ಸೆಟ್‌ನಲ್ಲಿಯೂ ಕಳ್ಳತನ ನಡೆದಿದ್ದು ಅಲ್ಲಿಂದಲೂ ಹಲವು ಬೆಳೆಬಾಲುವ ವಸ್ತುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ಘಟನೆ ಫೆಬ್ರವರಿ 25 ರಂದೇ ಆಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ನೆಟ್‌ಫ್ಲಿಕ್ಸ್ ಇತ್ತೀಚೆಗಷ್ಟೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಇಂಗ್ಲೆಂಡ್‌ನ ಡೋನ್ಕಾಸ್ಟರ್ ನಲ್ಲಿನ 'ದಿ ಕ್ರೌನ್' ಚಿತ್ರೀಕರಣದ ಸೆಟ್‌ನಿಂದ 1.50 ಕೋಟಿ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿವೆ. ಅದೇ ದಿನ 'ಲಿಪ್ಟಿನ್' ಸೆಟ್‌ನಲ್ಲಿಯೂ 'ರಾಬರಿ' ನಡೆದಿದ್ದು 2.50 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದಾರೆ ಎಂದಿದೆ.
''ಘಟನೆ ವೇಳೆ ನಮ್ಮ ಸಿಬ್ಬಂದಿಗೆ ಯಾವುದೇ ತೊಂದರೆ ಆಗಿಲ್ಲ. ನಮ್ಮ ವಸ್ತುಗಳು ಕಾಣೆಯಾಗಿರುವುದು ದಿಟ ಆದರೆ ಅವು ಸುರಕ್ಷಿತವಾಗಿ ನಮಗೆ ತಲುಪಿಸಲ್ಪಡುತ್ತವೆ ಎಂಬ ನಿರೀಕ್ಷೆ ಇದೆ'' ಎಂದಿದೆ ನೆಟ್‌ಫ್ಲಿಕ್ಸ್. ರಾಬರಿ ಮಾಡಿದ ಖದೀಮರು ನೆಟ್‌ಫ್ಲಿಕ್ಸ್‌ನ 'ಮನಿಹೈಸ್ಟ್' ಮಾದರಿಯಲ್ಲಿಯೇ ಮುಖಕ್ಕೆ ನಕಲಿ ಮಾಸ್ಕ್‌ಗಳನ್ನು ಧರಿಸಿ ಬಂದಿದ್ದರೆಂದು ವರದಿಯಾಗಿದೆ. ಫೆಬ್ರವರಿ 25 ರಂದು ಸುಮಾರು 4 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ನೆಟ್‌ಫ್ಲಿಕ್ಸ್‌ನ ಸೆಟ್‌ಗಳಿಂದ ಖದೀಮರು ಕದ್ದೊಯ್ದಿದ್ದಾರೆ.
ನೆಟ್‌ಫ್ಲಿಕ್ಸ್ ವಿಶ್ವದ ಜನಪ್ರಿಯ ಒಟಿಟಿ ವೇದಿಕೆಗಳಲ್ಲಿ ಒಂದಾಗಿದ್ದು ನೆಟ್‌ಫ್ಲಿಕ್ಸ್‌ನ ಒಟ್ಟು ಮೌಲ್ಯ 13 ಲಕ್ಷ ಕೋಟಿಗೂ ಹೆಚ್ಚು. ಭಾರತದಲ್ಲಿ ನೆಟ್‌ಫ್ಲಿಕ್ಸ್ ಸುಮಾರು 10,000 ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಈ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ.


Click it and Unblock the Notifications











