ರಕ್ಷಿತ್ ಶೆಟ್ಟಿ ಹೊಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ
ಕಳೆದ ವಾರ 3 ಕನ್ನಡ ಸಿನಿಮಾಗಳು ಓಟಿಟಿ ವೀಕ್ಷಕರನ್ನು ರಂಜಿಸಿದ್ದವು. ಈ ವಾರವೂ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ಅದರಲ್ಲಿ ಕನ್ನಡ ಸಿನಿಮಾಗಳು ಇವೆ. ಸದ್ಯ 99 ರೂಪಾಯಿ ಪಾವತಿಸಿ ನೋಡಬೇಕಿರುವ 'ಗೌರಿ' ಹಾಗೂ 'ಗೋಪಿಲೋಲ' ಉಚಿತವಾಗಿ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆಯಿದೆ.
ಸದ್ದಿಲ್ಲದೇ ಮತ್ತೊಂದು ಹಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಗೆ ಬಂದಿದೆ. ಮಧ್ಯರಾತ್ರಿಯಿಂದಲೇ ಸ್ಟ್ರೀಮಿಂಗ್ ಆರಂಭಿಸಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ ಬಹಳ ವಿಭಿನ್ನ ಸಿನಿಮಾ ಇದು. ಭಾವನೆಗಳನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿರುವ ಸಿನಿಮಾ. ರಕ್ಷಿತ್ ಶೆಟ್ಟಿ ಗೆಳೆಯ ಸುಮಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಮಾರ್ಚ್ 7ರಂದು ತೆರೆಗೆ ಬಂದಿತ್ತು. ಇದೀಗ ಓಟಿಟಿಗೆ ಲಭ್ಯವಿದೆ.

ಅಂದಹಾಗೆ ಆ ಸಿನಿಮಾ ಹೆಸರು 'ಮಿಥ್ಯ'. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. 11 ವರ್ಷದ ಬಾಲಕನ ಕಥೆ ಈ ಚಿತ್ರದಲ್ಲಿದೆ. ಸರಳ, ಪ್ರಾಮಾಣಿಕ, ಮುಗ್ಧ ಪಾತ್ರಗಳು 'ಮಿಥ್ಯ' ಚಿತ್ರದಲ್ಲಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಹಾಗೂ 'ವಿಕ್ರಾಂತ್ ರೋಣ' ಚಿತ್ರಗಳಲ್ಲಿ ನಟಿಸಿದ್ದ ಬಾಲನಟ ಆತಿಶ್ ಶೆಟ್ಟಿ 'ಮಿಥ್ಯ' ಚಿತ್ರದ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾನೆ.
ಮುಂಬೈನಲ್ಲಿ ಹೆತ್ತವರನ್ನು ಕಳೆದುಕೊಂಡು ಬಳಿಕ ಉಡುಪಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಮಿಥುನ್ ಬಂದು ನೆಲೆಸುವಂತಾಗುತ್ತದೆ. ಎಲ್ಲರೂ ಆತನನ್ನು 'ಮಿಥ್ಯ' ಎಂದೇ ಕರೆಯುತ್ತಿರುತ್ತಾರೆ. ಹೊಸ ಊರಿನಲ್ಲಿ ತನ್ನವರು ಯಾರು ಎಂದು ಹುಡುಕಾಟ ಆರಂಭಿಸುತ್ತಾನೆ. ಹೆತ್ತವರನ್ನು ಕಳೆದುಕೊಂಡ ನೋವಿನಿಂದ ಹೊರ ಬರಲು, ಹೊಸ ದಾರಿಯ ಹುಡುಕಾಟದಲ್ಲಿರುವ ಆತನ ಬದುಕಿನಲ್ಲಿ ಮುಂದೆ ಅನಿರೀಕ್ಷಿತ ಘಟನಗಳು ನಡೆಯುತ್ತದೆ. ಮಿಥುನ್‌ಗಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ ಏರ್ಪಡುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಸಿನಿಮಾ ಕಥೆ.
ಅತಿಶ್ ಶೆಟ್ಟಿ ಜೊತೆಗೆ ಪ್ರಕಾಶ್ ತೂಮಿನಾಡ್, ರೂಪ ವರ್ಕಾಡಿ ಚಿತ್ರದಲ್ಲಿ ನಟಿಸಿದ್ದಾರೆ. ಮೂರ್ನಾಲ್ಕು ಮುಖ್ಯ ಪಾತ್ರಗಳ ಸುತ್ತಾ 'ಮಿಥ್ಯ' ಸಿನಿಮಾ ಸುತ್ತುತ್ತದೆ. ಉದಿತ್ ಖುರಾನ ಛಾಯಾಗ್ರಹಣ, ಮಿಧುನ್ ಮುಕುಂದನ್ ಸಂಗೀತ ಚಿತ್ರಕ್ಕಿದೆ. ಬಿಡುಗಡೆಗೂ ಮುನ್ನ ಕೆಲ ಚಿತ್ರೋತ್ಸವಗಳಲ್ಲಿ ಕೂಡ ಈ ಸಿನಿಮಾ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿತ್ತು.
'ಮಿಥ್ಯ' ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಅವಾರ್ಡ್ ಸಿನಿಮಾ, ಆರ್ಟ್ ಸಿನಿಮಾ ಎನ್ನುವಂತೆ ಬ್ರ್ಯಾಂಡ್ ಆಗಿ ಪ್ರೇಕ್ಷಕರು ಸಿನಿಮಾ ನೋಡಲು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರಲಿಲ್. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ವೀಕೆಂಡ್ ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಿ.

ಈ ವರ್ಷ ತೆರೆಕಂಡ 70 ಕನ್ನಡ ಸಿನಿಮಾಗಳಲ್ಲಿ ಓಟಿಟಿಗೆ ಬಂದಿರೋ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ 'ಮಿಥ್ಯ' ಕೂಡ ಒಂದು. ಸಾಮಾನ್ಯವಾಗಿ ಟೀನೆಜ್ ಹುಡುಗನ ಕಥೆ ಅಂದರೆ ರೊಮ್ಯಾಂಟಿಕ್ ಸಿನಿಮಾ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ 'ಮಿಥ್ಯ' ಅದಕ್ಕೆ ತದ್ವಿರುದ್ದ ಸಿನಿಮಾ. 11 ವರ್ಷದ ಬಾಲಕನ ಜೀವನದಲ್ಲಾಗುವ ಕಹಿ ಘಟನೆ, ಅದರಿಂದ ಹೊರ ಬರಲು ಆತ ಹೆಣಗುವುದು ಚಿತ್ರದ ಕಥಾವಸ್ತು.
ರಕ್ಷಿತ್ ಶೆಟ್ಟಿ ಒಂದ್ಕಡೆ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದ್ದಾರೆ. 2021ರಲ್ಲಿ 'ಮಿಥ್ಯ' ಸಿನಿಮಾ ಸ್ಟ್ರಿಪ್ಟ್ ಓದಿ ಬಹಳ ಇಷ್ಟಪಟ್ಟು ರಕ್ಷಿತ್ ಶೆಟ್ಟಿ ಸಿನಿಮಾ ಮಾಡಲು ಆರಂಭಿಸಿದ್ದರು. ಅಂತೂ ಇಂತೂ ಈ ವರ್ಷ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಓಟಿಟಿ ಮೂಲಕ ಮತ್ತಷ್ಟು ಜನರನ್ನು ತಲುಪುತ್ತಿದೆ.


Click it and Unblock the Notifications











