ಉತ್ತರ ಕರ್ನಾಟಕ ಸೊಗಡಿನ ಹೊಸ ಕನ್ನಡ ಸಿನಿಮಾ ಓಟಿಟಿಯಲ್ಲಿ ಸೌಂಡ್ ಮಾಡ್ತಿದೆ
ಈ ವರ್ಷ ಕನ್ನಡದಲ್ಲಿ 80ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದಿದೆ. ಆದರೆ 10 ರಿಂದ 15 ಸಿನಿಮಾಗಳು ಮಾತ್ರ ಓಟಿಟಿ ಕದ ತಟ್ಟಿವೆ. ಇನ್ನು ಕಳೆದ ವರ್ಷ ತೆರೆಕಂಡಿದ್ದ ಕೆಲ ಸಿನಿಮಾಗಳು ನಿಧಾನವಾಗಿ ಡಿಜಿಟಲ್ ವೇದಿಕೆಗೆ ಎಂಟ್ರಿ ಕೊಡುತ್ತಿವೆ.
ಉತ್ತರ ಕರ್ನಾಟಕ ಭಾಗದ ಕಥೆಗಳು ಸಿನಿಮಾ ಆಗುವುದು ಬಹಳ ಕಮ್ಮಿ. ಬಹುತೇಕ ಕನ್ನಡ ಸಿನಿಮಾ ಕಥೆಗಳು ಬೆಂಗಳೂರು ಸುತ್ತಾ ಸುತ್ತುತ್ತವೆ. ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆದು ಕೆಲ ಸಿನಿಮಾಗಳು ಗೆಲ್ಲುತ್ತವೆ. ಆದರೆ ದೊಡ್ಡಮಟ್ಟದಲ್ಲಿ ಸೆಳೆಯುವಲ್ಲಿ ಪ್ರೇಕ್ಷಕರನ್ನು ವಿಫಲವಾಗುತ್ತವೆ. ಕಳೆದ ವರ್ಷ ಬಂದಿದ್ದ ಈ ಸಿನಿಮಾ ಕಥೆ ಕೂಡ ಅದೇ ಆಗಿತ್ತು.

ದುನಿಯಾ ಸೂರಿ ಶಿಷ್ಯ ಅಭಿ ನಿರ್ದೇಶನದ 'ಸೋಮು ಸೌಂಡ್ ಇಂಜಿನಿಯರ್' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಶ್ರೇಷ್ಠ ಹಾಗೂ ನಿವಿಷ್ಕ ಪಾಟೀಲ್ ನಟನೆಯ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಕ್ರಿಸ್ಟೋಫರ್ ಕಿನಿ ನಿರ್ಮಾಣದ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ವಿತರಣೆ ಮಾಡಿತ್ತು.
'ಟಗರು' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡ ಈ ಚಿತ್ರ ಕಟ್ಟಿಕೊಟ್ಟಿತ್ತು.
ಮಾಮೂಲಿ ಸಿನಿಮಾ ತಂತ್ರಗಳನ್ನು ಬಿಟ್ಟು ಬಹಳ ಸೀದಾ ಸಾದಾ ರೀತಿಯಲ್ಲಿ ಅಭಿ ನಿರ್ದೇಶನ ಮಾಡಿರುವ ಸಿನಿಮಾ ಇದು. ಉತ್ತರ ಕರ್ನಾಟಕದ ಹಳ್ಳಿಯೊಂದಲ ಯುವಕ ಸೋಮು ಎಂಬುವವನ ಜೀವನದಲ್ಲಿ ನಡೆಯುವ ಘಟನಾವಳಿಗಳೇ ಈ ಚಿತ್ರ ಕಥೆ. ಹಾಗಾಗಿ ಹೀರೋ ಎಂಟ್ರಿ, ಬಿಲ್ಡಪ್ ಯಾವುದು ಚಿತ್ರದಲ್ಲಿಲ್ಲ.

ಯಾವುದೋ ಹಳ್ಳಿಯಲ್ಲಿ ನಡೆಯುವ ಸನ್ನಿವೇಶಗಳನ್ನು ಸೆರೆಹಿಡಿದು ತೆರೆಮೇಲೆ ತಂದಂತೆ ಸಿನಿಮಾ ಭಾಸವಾಗುತ್ತದೆ. ಮುಂಗೋಪಿ ಯುವಕ ಸೋಮು ಸಿಕ್ಕಾಪಟ್ಟೆ ರಗಡ್. ಆತನಿಗೊಂದು ಪುಟ್ಟ ಕುಟುಂಬ. ಅಪ್ಪ, ಅಮ್ಮ, ಅಕ್ಕ ಜೊತೆಗೆ ಒಬ್ಬಳು ಪ್ರೇಯಸಿ. ಆದರೆ ಅದೊಂದು ಘಟನೆಯಿಂದ ಅವನ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ಮುಂದೆ ಏನೆಲ್ಲಾ ನಡೆಯುತ್ತದೆ ಎನ್ನುವುದು ಚಿತ್ರದ ಇನ್ನುಳಿದ ಕಥೆ.
ನಾಯಕ ಶ್ರೇಷ್ಠ ಬಹಳ ನೈಜವಾಗಿ ನಟಿಸಿ ಗಮನ ಸೆಳೆಯುತ್ತಾರೆ. ಮಾಸ್ತಿ ಸಂಭಾಷಣೆ ಚಿತ್ರದ ಮತ್ತೊಂದು ಹೈಲೆಟ್. ಚರಣ್ ರಾಜ್ ತಮ್ಮ ಸಂಗೀತದಿಂದ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಜಹಾಂಗೀರ್, ಗಿರೀಶ್ ಜಟ್ಟಿ, ಯಶ್ ಶೆಟ್ಟಿ, ಅಪೂರ್ವ 'ಸೋಮು ಸೌಂಡ್ ಇಂಜಿನಿಯರ್' ಚಿತ್ರದ ತಾರಾಗಣದಲ್ಲಿದ್ದಾರೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಳಕಲ್ ಗಂಜಿಹಾಳದ ಕೂಡಲಸಂಗಮ ಸುತ್ತಾಮುತ್ತಾ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿತ್ತು. ಉತ್ತರ ಕರ್ನಾಟಕದ ಪಕ್ಕಾ ಹಳ್ಳಿ ಸೊಗಡು ಚಿತ್ರದಲ್ಲಿ ನೋಡಬಹುದು. ದುನಿಯಾ ಸೂರಿ ಕೂಡ ಈ ಚಿತ್ರತಂಡ ಬೆಂಬಲಕ್ಕೆ ನಿಂತಿದ್ದರು. ನಮ್ಮ ಹುಡುಗನ ಸಿನಿಮಾ ಎಂದು ಬೆನ್ನು ತಟ್ಟಿದ್ದರು. ಪ್ರೀತಿ, ದ್ವೇಷ, ಸಂಬಂಧಗಳ ನಡುವಿನ ಮೌಲ್ಯಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ.
ಕಳೆದ ವರ್ಷ ಮಾರ್ಚ್ 15ಕ್ಕೆ ತೆರೆಗೆ ಬಂದಿದ್ದ 'ಸೋಮು ಸೌಂಡ್ ಇಂಜಿನಿಯರ್' ಸಿನಿಮಾ ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಆದರೆ ಸದ್ಯಕ್ಕೆ ಚಂದಾದಾರರು 99 ರೂಪಾಯಿ ಪಾವತಿಸಿ ಸಿನಿಮಾ ನೋಡುವ ಅವಕಾಶ ಇದೆ. ಮುಂದಿನ ವಾರ ಸಿನಿಮಾ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆಯಿದೆ.
ರಕ್ಷಿತ್ ಶೆಟ್ಟಿ ನಿರ್ಮಾಣದ 'ಮಿಥ್ಯ' ಸಿನಿಮಾ ಕಳೆದೆರಡು ದಿನಗಳಿಂದ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 'ಗೌರಿ' ಹಾಗೂ 'ಗೋಪಿಲೋಲ' ಚಿತ್ರಗಳು ಕಳೆದೊಂದು ವಾರದಿಂದ ಬಾಡಿಗೆ ಆಧಾರದಲ್ಲಿ 99 ರೂಪಾಯಿ ಪಾವತಿಸಿ ನೋಡುವ ಅವಕಾಶ ಇದೆ. 'ಸೋಮು ಸೌಂಡ್ ಇಂಜಿನಿಯರ್' ಸಿನಿಮಾ ಕೂಡ ಈಗ ಅದೇ ಪಟ್ಟಿ ಸೇರಿಕೊಂಡಿದೆ.


Click it and Unblock the Notifications











