ಓಟಿಟಿಗೆ ಬಂತು ಬಾಕ್ಸಾಫೀಸ್‌ನಲ್ಲಿ ₹ 78.75 ಕೋಟಿ ಗಳಿಸಿದ್ದ ಸಿನಿಮಾ : ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ನಗರದ ಸುತ್ತಮುತ್ತ ಇದ್ದ ಹಳ್ಳಿಯ ಜನ ಟ್ರ್ಯಾಕ್ಟರ್.. ಎತ್ತಿನ ಬಂಡಿಯಲ್ಲಿ ಬಂದು ತಮ್ಮ ನೆಚ್ಚಿನ ನಾಯಕನ-ನಿರ್ದೇಶಕನ-ನಾಯಕಿಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಲು ಆಗದೇ ಇದ್ದರೆ...
ಮೊದಲಿನಂತೆ ಟಿವಿಯಲ್ಲಿ ಬರುವವರೆಗೆ ಈಗ ಕಾಯಬೇಕು ಅಂತೇನು ಇಲ್ಲ. ಚಿತ್ರ ಒಂದು ಚಿತ್ರಮಂದಿರಕ್ಕೆ ಬಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಮನೆಯಲ್ಲಿಯೇ ಅಥವಾ ತಾವು ಇರುವ ಜಾಗದಲ್ಲಿ ಕುಳಿತು ಚಿತ್ರವನ್ನು ನೋಡುವ ವ್ಯವಸ್ಥೆ ಈಗ ಲಭ್ಯ ಇದೆ.

ಹೀಗಾಗಿಯೇ ಹಲವರು ತಮ್ಮ ಇಷ್ಟದ ಸ್ಟಾರ್‌ನ ಚಿತ್ರ ಬಂದರೆ..ಅಥವಾ ಯಾವುದಾದರೂ ಚಿತ್ರ ಗಮನ ಸೆಳೆದರೆ.. ಭರವಸೆ ಮೂಡಿಸಿದ್ದರೆ.. ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವ ಬದಲು, ಕೇವಲ ನಾಲ್ಕು ವಾರ ಅಷ್ಟೇ ತಾನೇ..? ಎಂದುಕೊಂಡು ಮನೆಯಲ್ಲಿಯೇ ನೋಡಿದರೇ ಆಯ್ತು ಎಂದುಕೊಳ್ಳುತ್ತಾರೆ. ತಾಳ್ಮೆಯಿಂದ ಕಾಯುತ್ತಾರೆ. ಹೀಗೆ ಕಾಯುತ್ತಿರುವವರ ಕಣ್ಮುಂದೆ ಈಗ ''ಏಕ್ ದಿವಾನೆ ಕೀ ದೀವಾನಿಯತ್'' ಬಂದಿದೆ.
ಹೌದು, ''ಏಕ್ ದಿವಾನೆ ಕೀ ದೀವಾನಿಯತ್''.. ಅಕ್ಟೋಬರ್ 21ರಂದು ತೆರೆಗೆ ಬಂದಿದ್ದ ಚಿತ್ರ. ಹರ್ಷವರ್ಧನ್ ರಾಣೆ ಮತ್ತು ಸೋನಮ್ ಬಾಜ್ವಾ ಅಭಿನಯದ ಈ ಪ್ರೇಮಕಥಾನಕ ಬಾಕ್ಸಾಫೀಸ್‌ನಲ್ಲಿ ವಿಪರೀತ ಸದ್ದು ಮಾಡಿತ್ತು.
ವಿಶೇಷ ಅಂದರೆ ಚಿತ್ರದ ಕಥಾನಾಯಕ ಹರ್ಷವರ್ಧನ್ ರಾಣೆಗೆ ನಾಯಕನಾಗಿ ಇದು ನಾಲ್ಕನೇ-ಐದನೇ ಚಿತ್ರ. '' ಸನಮ್ ತೇರಿ ಕಸಮ್'' ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಇವರಿಗೆ ಬೇಕಾದ ಹೆಸರನ್ನು ತಂದು ಕೊಟ್ಟಿರಲಿಲ್ಲ. ಗೆಲುವು ಸಿಕ್ಕಿರಲಿಲ್ಲ.
ಆದರೂ ಕೂಡ ಸೂಪರ್ ಸ್ಟಾರ್‌ಗಳ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ಹೆಣಗಾಡುತ್ತಿರುವ ಈ ಸಮಯದಲ್ಲಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಣದ ಹೊಳೆಯೇ ಹರಿಸಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಬರೋಬ್ಬರಿ ₹ 78.75 ಕೋಟಿ ದೋಚಿತ್ತು. ಈ ಮೂಲಕ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಅತೀ ಹೆಚ್ಚಿನ ಲಾಭ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಇಂತಹ ''ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರ ಈಗ ಬಿಡುಗಡೆಯಾಗಿ ಎರಡು ತಿಂಗಳ ನಂತರ ಓಟಿಟಿಗೆ ಬರುತ್ತಿದೆ. ಇದೇ ಡಿಸೆಂಬರ್ 26ರಿಂದ ಜೀ5ನಲ್ಲಿ ಪ್ರಸಾರವಾಗಲಿದೆ. ಆದರೆ.. ಕನ್ನಡದಲ್ಲಿ ಅಥವಾ ಬೇರೆ ಭಾಷೆಗಳಲ್ಲಿ ನೋಡುವ ಅವಕಾಶ ಇಲ್ಲ. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಬೇರೆ ಭಾಷೆಗಳಿಗೆ ಡಬ್ ಮಾಡುವ ಆಲೋಚನೆಯನ್ನು ತಂಡ ಮಾಡದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಹೀಗಾಗಿ ಸಿನಿಮಾ ನೋಡಲು ಬಯಸುವವರು ಹಿಂದಿಯಲ್ಲಿಯೇ ಈ ಚಿತ್ರವನ್ನು ಅನಿವಾರ್ಯವಾಗಿ ನೋಡಬೇಕು. ಅಂದ್ಹಾಗೇ ಇದಕ್ಕೂ ಮೊದಲು ''ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರದ ಹಕ್ಕುಗಳನ್ನು ನೆಟ್‌ಪ್ಲಿಕ್ಸ್ ಖರೀದಿಸಿದೆ ಎನ್ನುವ ಸುದ್ದಿ ಗುಲ್ಲಾಗಿತ್ತು. ನೆಟ್ ಫ್ಲಿಕ್ಸ್‌ನಲ್ಲಿ ಚಿತ್ರ ಪ್ರಸಾರವಾಗಲಿದೆ ಎಂದು ಹೇಳಲಾಗಿತ್ತು.
ಆದರೆ ಆ ಮಾತು ಕೇವಲ ಅಂತೆ-ಕಂತೆಯಾಗಿತ್ತು. ಈಗ ಜೀ5 ಈ ಚಿತ್ರವನ್ನು ಪ್ರಸಾರ ಮಾಡಲು ಮುಂದಾಗಿದೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿಯನ್ನು ಕೂಡ ಹಂಚಿಕೊಂಡಿದೆ. ಆಸಕ್ತರು ಈ ಡಿಸೆಂಬರ್ 26ರಿಂದ ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.


Click it and Unblock the Notifications











