Ondu Sarala Prema Kathe OTT: ದಿಢೀರ್ ಓಟಿಟಿಗೆ ಬಂದ 'ಒಂದು ಸರಳ ಪ್ರೇಮಕಥೆ'
ಸಿಂಪಲ್ ಸುನಿ ನಿರ್ದೇಶದ 'ಒಂದು ಸರಳ ಪ್ರೇಮಕಥೆ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಗೆದ್ದಿತ್ತು. ವಿನಯ್ ರಾಜ್‌ಕುಮಾರ್ ಚಿತ್ರದಲ್ಲಿ ಹೀರೊ ಆಗಿ ಗೆದ್ದಿದ್ದರು. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 'ಉಪಾಧ್ಯಕ್ಷ' ಬಳಿಕ ಕನ್ನಡದಲ್ಲಿ ಈ ವರ್ಷ ಸದ್ದು ಮಾಡಿದ ಮತ್ತೊಂದು ಸಿನಿಮಾ ಇದು.
ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದ ಅಣ್ಣಾವ್ರ ಮೊಮ್ಮಗನಿಗೆ 'ಒಂದು ಸರಳ ಪ್ರೇಮಕಥೆ' ಗೆಲುವಿನ ಟಾನಿಕ್ ನೀಡಿರುವುದು ಸುಳ್ಳಲ್ಲ. ಕಡಿಮೆ ಬಜೆಟ್‌ನಲ್ಲೇ ನಿರ್ಮಾಣವಾಗಿದ್ದ ಸಿನಿಮಾ ಉತ್ತಮ ಗಳಿಕೆ ಕಂಡು ಗೆಲುವಿನ ದಡ ಸೇರಿತ್ತು. ಫೆಬ್ರವರಿ 8ರಂದು ಬಿಡುಗಡೆಯಾಗಿದ್ದ 'ಒಂದು ಸರಳ ಪ್ರೇಮಕಥೆ' ಸಿನಿಮಾ ಒಂದೂವರೆ ತಿಂಗಳಿಗೆ ಓಟಿಟಿಗೆ ಬಂದಿದೆ.

ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಇರುವ ನಾಯಕ. ದೊಡ್ಡ ಗಾಯಕಿಯಾಗುವ ಕನಸು ಕಂಡ ನಾಯಕಿ. ಜೊತೆಗೆ ನಾಯಕ ಬಾಲ್ಯದ ಗೆಳತಿ. ಈ ಮೂವರ ನಡುವಿನ ಸರಳವಲ್ಲದ ಪ್ರೇಮಕಥೆ ಇದು. ಅದನ್ನು ಸಿಂಪಲ್ ಸುನಿ ತಮ್ಮದೇ ಲವಲವಿಕೆಯ ಶೈಲಿಯಲ್ಲಿ ನಿರೂಪಿಸಿ ಗೆದ್ದಿದ್ದರು. ಉದಯೋನ್ಮುಖ ಸಂಗೀತ ನಿರ್ದೇಶಕ ಅತಿಶಯ್ ಪಾತ್ರದಲ್ಲಿ ವಿಜಯ್ ರಾಜ್‌ಕುಮಾರ್ ಮಿಂಚಿದ್ದಾರೆ.
ಮಧ್ಯಮ ವರ್ಗದ ಕುಟುಂಬದ ಹುಡುಗನಾಗಿ ವಿನಯ್ ಇಷ್ಟವಾಗುತ್ತಾರೆ. ನಾಯಕಿಯರಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಟ ಸಾಥ್ ಸಿಕ್ಕಿದೆ. ಇನ್ನು ನಾಯಕನ ತಂದೆ ಪಾತ್ರದಲ್ಲಿ ರಾಜೇಶ್ ನಟರಂಗ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದ್ದರು. ಸಾಧುಕೋಕಿಲ, ರಾಘವೇಂದ್ರ ರಾಜ್‌ಕುಮಾರ್, ಶ್ವೇತಾ ಶ್ರೀವಾಸ್ತವ್ ಅತಿಥಿ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು.
ಕರ್ನಾಟಕದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ಓವರ್‌ಸೀಸ್‌ನಲ್ಲಿ ಸ್ಯಾಂಡಲ್‌ವುಡ್ ಟಾಕೀಸ್ ರೈಟ್ಸ್ ಖರೀದಿಸಿತ್ತು. ಬೆಂಗಳೂರು, ಮೈಸೂರು, ರಾಜಸ್ಥಾನ ಹಾಗೂ ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿತ್ತು. ಮೈಸೂರು ರಮೇಶ್ ವೀರ್ 'ಒಂದು ಸರಳ ಪ್ರೇಮಕಥೆ' ಚಿತ್ರಕ್ಕೆ ಬಂಡವಾಳ ಹೂಡಿದ್ದರು.

ಸುನಿ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದರು. ವೀರ್ ಸಮರ್ಥ್ ಸಂಗೀತವೂ ಚಿತ್ರಕ್ಕೆ ಪ್ಲಸ್ ಆಗಿತ್ತು. ಥಿಯೇಟರ್‌ಗಳಲ್ಲಿ ಗೆದ್ದಿದ್ದ 'ಒಂದು ಸರಳ ಪ್ರೇಮಕಥೆ' ಇದೀಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಶೀಘ್ರದಲ್ಲೇ ಸ್ಟಾರ್ ಸುವರ್ಣ ಕಿರುತೆರೆ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ.
ಯಾವುದೇ ಸುಳಿವು ನೀಡದೇ ದಿಢೀರನೆ ಸಿನಿಮಾ ಓಟಿಟಿಗೆ ತರಲಾಗಿದೆ. ಈ ಬಗ್ಗೆ ಕನ್ನಡ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಸಿನಿಮಾಗಳು ಅಂದ್ರೆ, ಓಟಿಟಿ ಫ್ಲಾಟ್‌ಪಾರ್ಮ್‌ಗಳಿಗೆ ತಾತ್ಸಾರ ಯಾಕೆ? ಎಂದು ಕೇಳುತ್ತಿದ್ದಾರೆ. ಬೇರೆ ಭಾಷೆಗಳ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುವಾಗ ಮೊದಲೇ ದಿನಾಂಕ ನಿಗದಿ ಮಾಡಿ ಘೋಷಣೆ ಮಾಡುತ್ತಾರೆ. ಆದರೆ ಕನ್ನಡ ಸಿನಿಮಾಗಳ ಬಗ್ಗೆ ಬೇಕಾಬಿಟ್ಟಿಯಾಗಿ ಆಡುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಮೇಜಾನ್ ಪ್ರೈಂ ವಿಡಿಯೋ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೇಡದ ಪೋಸ್ಟ್‌ಗಳನ್ನು ಮಾಡುತ್ತದೆ. 'ಒಂದು ಸರಳ ಪ್ರೇಮಕಥೆ' ಸಿನಿಮಾ ಸ್ಟ್ರೀಮಿಂಗ್ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡಿಲ್ಲ ಯಾಕೆ? ಎಂದು ಕೇಳುತ್ತಿದ್ದಾರೆ. ಅಮೇಜಾನ್ ಪ್ರೈಂ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಸಿನಿಮಾಗಳ ವಿಚಾರದಲ್ಲಿ ಇದೇ ರೀತಿ ಮಾಡಿತ್ತು.


Click it and Unblock the Notifications











